ಮೈಸೂರು(ಜೂ.09): ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಮೃಗಾಲಯಕ್ಕೆ ಕೋಟ್ಯಂತರ ರು. ದೇಣಿಗೆ ಸಂಗ್ರಹಿಸಿ ನೀಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ವರನಟ ಡಾ.ರಾಜ್‌ ಕುಮಾರ್‌, ರೆಬೆಲ್‌ಸ್ಟಾರ್‌ ಡಾ.ಅಂಬರೀಷ್‌ ಹಾಗೂ ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಹೆಸರಿನಲ್ಲಿ ಆನೆಗಳು ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದುಕೊಂಡಿದ್ದಾರೆ.

ಕೊರೋನಾ ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳ ಬಳಿಕ ಸೋಮವಾರ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಪುನಾರಂಭಕ್ಕೆ ಚಾಲನೆ ನೀಡಿದ ಸಚಿವರು, ಮೈಸೂರು ಮೂಲದ ಮೂವರು ನಟರಿಗೆ ಗೌರವ ಸೂಚಿಸಲು ಇದು ಸಕಾಲ. ಈ ನಿಟ್ಟಿನಲ್ಲಿ ಇವರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದು, ಡಾ.ರಾಜ್‌ಕುಮಾರ್‌ ಹೆಸರಿನಲ್ಲಿ ಆನೆ, ಡಾ.ಅಂಬರೀಷ್‌ ಹೆಸರಿನಲ್ಲಿ ಆಫ್ರಿಕನ್‌ ಆನೆ ಮತ್ತು ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಹೆಸರಿನಲ್ಲಿ ಒಂದು ಸಿಂಹವನ್ನು ಸಚಿವರು ದತ್ತು ಪಡೆದರು.

ಬೆಂಗಳೂರು ಪೊಲೀಸ್ ಪೇದೆಗೆ ಕೊರೋನಾ ಲಕ್ಷಣ ಇಲ್ಲದಿದ್ರೂ ಟೆಸ್ಟ್‌ನಲ್ಲಿ ಪಾಸಿಟಿವ್..!

ಜಿರಾಫೆ ಮರಿಗಳಿಗೆ ನಾಮಕರಣ: ಈಚೆಗೆ ಜನಿಸಿದ ಜಿರಾಫೆ ಮರಿಗಳಿಗೆ ಈ ಸಂದರ್ಭದಲ್ಲಿ ಆದ್ಯ ಯದುವೀರ (ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಮಗನ ಹೆಸರು) ಹಾಗೂ ಬಾಲಾಜಿ ಎಂದು ನಾಮಕರಣ ಮತ್ತು ಮೃಗಾಲಯದ ಆಕರ್ಷಣೆಯಾದ ಬಿಳಿ ಹುಲಿ ಸಂಚರಿಸಲು ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾದ ಎನ್‌ಕ್ಲೋಸರ್‌ ಅನ್ನು ಸಚಿವರು ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಅನಾವರಣಗೊಳಿಸಿದರು.

ಎಸ್‌ಟಿಎಸ್‌ ಹೆಸರಲ್ಲಿ ಫಲಕ

ಕೊರೋನಾ ಸಂಕಷ್ಟದ ಕಾಲದಲ್ಲಿ ಮೃಗಾಲಯಕ್ಕೆ .3.23 ಕೋಟಿ ದೇಣಿಗೆ ಸಂಗ್ರಹಿಸಿಕೊಟ್ಟಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಗೌರವಾರ್ಥ ಮುಖ್ಯ ಪ್ರವೇಶ ದ್ವಾರದ ಎದುರು ನಿರ್ಮಿಸಿದ್ದ ಅವರ ಹೆಸರಿನ ಫಲಕವೊಂದನ್ನು ಎಸ್‌.ಟಿ.ಸೋಮಶೇಖರ್‌ ಹಾಗೂ ಸಂಸದೆ ಸುಮಲತಾ ಅಂಬರೀಷ್‌ ಅನಾವರಣಗೊಳಿಸಿದರು. ಇದೇ ವೇಳೆ ಅಮೆರಿಕದ ಅಕ್ಕ ಸಂಸ್ಥೆಯಿಂದ ಮಾಜಿ ಅಧ್ಯಕ್ಷ ಶಿವಮೂರ್ತಿ ಕಿಲಾರ ಮೃಗಾಲಯದ ನಿರ್ವಹಣೆಗೆಂದು .40 ಲಕ್ಷ ಚೆಕ್‌ ಹಸ್ತಾಂತರಿಸಿದರು.