Asianet Suvarna News Asianet Suvarna News

ಕೊಪ್ಪಳ: ಸಚಿವ ಸುರೇಶ್‌ ಕುಮಾರ್‌ಗೆ SSLC ವಿದ್ಯಾರ್ಥಿಗಳಿಂದ ಅಭಿನಂದನಾ ಪತ್ರ

909 ವಿದ್ಯಾರ್ಥಿಗಳು ಗೈರು ಹಾಜರು ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ|ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ವಿನೂತನ ಕೃತಜ್ಞತೆ|ಬೆಟಗೇರಿ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರ| ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಸೇರಿ ಸಿಬ್ಬಂದಿಗೆ ಗುಲಾಬಿ|

SSLC students Congratulate to Minister Suresh Kumar
Author
Bengaluru, First Published Jun 28, 2020, 8:26 AM IST

ಕೊಪ್ಪಳ(ಜೂ.28): ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಪ್ಯಾಡು, ಪೆನ್ನು ಜತೆಗೆ ಗುಲಾಬಿ ಹೂ ತಂದಿದ್ದರು. ಇದನ್ನು ಪರೀಕ್ಷಾ ಕೇಂದ್ರದಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಪ್ರಯತ್ನಿಸುತ್ತಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ನೀಡಿ, ನಮಿಸಿದರು.

ಇಂಥ ಸಂಕಷ್ಟದಲ್ಲಿಯೂ ಯಶಸ್ವಿಯಾಗಿ ಪರೀಕ್ಷೆ ನಡೆಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ಅಭಿನಂದನಾ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಇದು, ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು ಶನಿವಾರ ಗಣಿತ ಪರೀಕ್ಷೆ ಬರೆಯಲು ಆಗಮಿಸಿದ ವೇಳೆಯಲ್ಲಿ ಮಾಡಿದ ಕಾರ್ಯ.

ಪರೀಕ್ಷೆ ಯಶಸ್ವಿಯಾಗಿ ನಡೆಯುವುದಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ಗುಲಾಬಿ ಹೂ ನೀಡಿ ಸತ್ಕಾರ ಮಾಡಿದರು. ನೀವು ಈ ರೀತಿಯಾಗಿ ಶ್ರಮಿಸುತ್ತಿರುವುದರಿಂದಲೇ ನಾವು ಯಶಸ್ವಿಯಾಗಿ ಕೋವಿಡ್‌ ಸಂಕಷ್ಟದಲ್ಲಿಯೂ ಪರೀಕ್ಷೆ ಬರೆಯಲು ಸಾಧ್ಯವಾಯಿತು. ಹೀಗಾಗಿ, ನಮ್ಮ ಕಡೆಯಿಂದ ನಿಮಗೆ ಗುಲಾಬಿ ಹೂವಿನ ಸತ್ಕಾರ ಎಂದು ಹೇಳಿ ಹೂ ಕೊಡುತ್ತಿರುವುದು ಕಂಡು ಬಂದಿತು. ಪರೀಕ್ಷೆ ಪ್ರಾರಂಭವಾಗುವ ಮೊದಲೇ ಆಗಮಿಸಿದ್ದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗುವ ಮೊದಲು ಈ ರೀತಿಯಾಗಿ ಮಾಡಿ, ವ್ಯಾಪಕ ಪ್ರಸಂಶೆಗೆ ಪಾತ್ರವಾದರು.

ಉಡುಪಿ: 2ನೇ ದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ, 803 ಮಂದಿ ಗೈರು

ಸಚಿವರಿಗೆ ಅಭಿನಂದನಾ ಪತ್ರ:

ಈ ರೀತಿಯಾಗಿ ಮಾಡಿ ಅಷ್ಟಕ್ಕೆ ಆ ವಿದ್ಯಾರ್ಥಿಗಳು ಸುಮ್ಮನಾಗಲಿಲ್ಲ. ಪರೀಕ್ಷೆ ಯಶಸ್ವಿಯಾಗಿ ನಡೆಯುತ್ತಿರುವುದಕ್ಕೆ ಕಾರಣೀಭೂತರಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಪ್ರತಿಯೊಬ್ಬರೂ ಪ್ರತ್ಯೇಕವಾಗಿಯೇ ಅಭಿನಂದನಾ ಪತ್ರವನ್ನು ಬರೆದು ಕಳುಹಿಸಿಕೊಟ್ಟಿದ್ದಾರೆ.

ಪತ್ರದಲ್ಲೇನಿದೆ?:

ಕೋವಿಡ್‌ ಸಂಕಷ್ಟದಲ್ಲಿ ಪರೀಕ್ಷೆ ನಡೆಸುವ ಸಾಹಸಕ್ಕೆ ಕೈ ಹಾಕಿದಾಗ ನಮಗೆ ಆತಂಕವಾಗಿತ್ತು. ಹೇಗೆ? ಏನು ಮಾಡುವುದು? ಎಂಬೆಲ್ಲ ಸಮಸ್ಯೆಗಳು ಕಾಡಿದ್ದವು. ಆದರೆ, ಅತ್ಯಂತ ಮುಂಜಾಗ್ರತೆ ವಹಿಸಿ, ಯಾವುದೇ ಸಮಸ್ಯೆಯಾಗದಂತೆ ಪರೀಕ್ಷೆ ನಡೆಸುತ್ತಿದ್ದೀರಿ, ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ತಪಾಸಣೆ, ಸ್ಯಾನಿಟೈಸರ್‌, ಮಾಸ್ಕ್‌ ಹೀಗೆ ಅಗತ್ಯ ಮುನ್ನೆಚ್ಚರಿಕೆಯನ್ನು ಕಟ್ಟುನಿಟ್ಟಾಗಿ ವಹಿಸಿಕೊಂಡು, ಆತಂಕವನ್ನು ದೂರ ಮಾಡಿದ್ದೀರಿ, ಇದಕ್ಕಾಗಿ ನಿಮಗೆ ಅಭಿನಂದನೆ ಎನ್ನುವ ಪತ್ರವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಬರೆಯಲಾಗಿದೆ.

ಗಣಿತ ಪರೀಕ್ಷೆ ಸುಸೂತ್ರ

ಕೊರೋನಾ ವೈರಸ್‌ ಭೀತಿಯ ನಡುವೆಯೂ ಶನಿವಾರ ಗಣಿತ ಪರೀಕ್ಷೆ ಜಿಲ್ಲಾದ್ಯಂತ ಸುಸೂತ್ರವಾಗಿದೆ ನಡೆದಿದೆ. ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಅವಧಿಗೂ ಮೊದಲೇ ವಿದ್ಯಾರ್ಥಿಗಳು ಬಂದಿದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಸೂಚನೆ ನೀಡಿದರು.

909 ವಿದ್ಯಾರ್ಥಿಗಳು ಗೈರು:

ಜಿಲ್ಲೆಯ 80 ಪರೀಕ್ಷಾ ಕೇಂದ್ರಗಳಲ್ಲಿ ಹೊಸದಾಗಿ ನೋಂದಣಿಯಾದ 20,560 ವಿದ್ಯಾರ್ಥಿಗಳಲ್ಲಿ 19,897 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರೆ, 909 ವಿದ್ಯಾರ್ಥಿಗಳು ಗೈರಾದರು. 1,101 ಖಾಸಗಿ ವಿದ್ಯಾರ್ಥಿಗಳಲ್ಲಿ 855 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಗಂಗಾವತಿ ತಾಲೂಕಿನಲ್ಲಿ 6,414 , ಕೊಪ್ಪಳ 6,232 , ಕುಷ್ಟಗಿ 4,073 ಮತು ಯಲಬುರ್ಗಾ ತಾಲೂಕಿನಲ್ಲಿ 4,033 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಕರೆತರಲು 208 ಬಸ್‌ಗಳನ್ನು ಬಿಡಲಾಗಿತ್ತು. ಪ್ರತಿ ಬಸ್‌ಲ್ಲಿ ಒಬ್ಬ ಅಧಿಕಾರಿ ಇದ್ದು, ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಮರಳಿ ಅವರವರ ಗ್ರಾಮಕ್ಕೆ ಬಿಟ್ಟುಬಂದರು. ಕಂಟೈನ್‌ಮೆಂಟ್‌ ಪ್ರದೇಶಗಳಿಂದ 151 ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಬರೆದಿದ್ದು ಅವರಿಗಾಗಿ ವಿಶೇಷ ವಾಹನ ಹಾಗೂ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಯಿತು. ಅನಾರೋಗ್ಯದಿಂದ ಬಳಲುತ್ತಿದ್ದ 37 ವಿದ್ಯಾರ್ಥಿಗಳಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಪರೀಕ್ಷೆ ಬರೆಸಲಾಯಿತು. ಬೇರೆ ಜಿಲ್ಲೆಗಳಿಂದ ಆಗಮಿಸಿದ 432 ವಿದ್ಯಾರ್ಥಿಗಳಲ್ಲಿ 331 ಮಕ್ಕಳು ಪರೀಕ್ಷೆ ಬರೆದರೆ, ಒಬ್ಬ ವಿದ್ಯಾರ್ಥಿ ಗೈರಾಗಿದ್ದು ಕಂಡುಬಂತು.
 

Follow Us:
Download App:
  • android
  • ios