ಶ್ರೀರಂಗಪಟ್ಟಣ: ಹಳೇ ಹುಲಿಗಳ ಹೊಸ ಕದನ..!
ಎರಡು ಕುಟುಂಬಗಳಿಗೆ ಸೀಮಿತವಾಗಿರುವ ಶ್ರೀರಂಗಪಟ್ಟಣ ಕ್ಷೇತ್ರದ ಚುನಾವಣಾ ಹೋರಾಟ 2023ರ ಚುನಾವಣೆಯಲ್ಲೂ ಮುಂದುವರೆದಿದೆ. ಈಗಾಗಲೇ ಎರಡು ಬಾರಿ ಶಾಸಕರಾಗಿರುವ ರಮೇಶ್ ಬಂಡಿಸಿದ್ದೇಗೌಡ ಅವರು ಈ ಬಾರಿ ಅಧಿಪತ್ಯ ಸ್ಥಾಪನೆಗೆ ಬಿರುಸಿನ ಹೋರಾಟ ನಡೆಸುತ್ತಿದ್ದರೆ, ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತೆ ಕ್ಷೇತ್ರದ ಅಧಿಕಾರ ಸೂತ್ರ ಹಿಡಿಯುವ ಪಣತೊಟ್ಟು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಈ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಬಿಜೆಪಿಯಿಂದ ಎಸ್.ಸಚ್ಚಿದಾನಂದ ಅದೃಷ್ಟಪರೀಕ್ಷೆಗಿಳಿದು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
ಮಂಡ್ಯ ಮಂಜುನಾಥ
ಮಂಡ್ಯ :ಎರಡು ಕುಟುಂಬಗಳಿಗೆ ಸೀಮಿತವಾಗಿರುವ ಶ್ರೀರಂಗಪಟ್ಟಣ ಕ್ಷೇತ್ರದ ಚುನಾವಣಾ ಹೋರಾಟ 2023ರ ಚುನಾವಣೆಯಲ್ಲೂ ಮುಂದುವರೆದಿದೆ. ಈಗಾಗಲೇ ಎರಡು ಬಾರಿ ಶಾಸಕರಾಗಿರುವ ರಮೇಶ್ ಬಂಡಿಸಿದ್ದೇಗೌಡ ಅವರು ಈ ಬಾರಿ ಅಧಿಪತ್ಯ ಸ್ಥಾಪನೆಗೆ ಬಿರುಸಿನ ಹೋರಾಟ ನಡೆಸುತ್ತಿದ್ದರೆ, ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತೆ ಕ್ಷೇತ್ರದ ಅಧಿಕಾರ ಸೂತ್ರ ಹಿಡಿಯುವ ಪಣತೊಟ್ಟು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಈ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಬಿಜೆಪಿಯಿಂದ ಎಸ್.ಸಚ್ಚಿದಾನಂದ ಅದೃಷ್ಟಪರೀಕ್ಷೆಗಿಳಿದು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
ಜಿಲ್ಲೆಯಲ್ಲೇ ಮೂವರು ಮಹಿಳಾ ನಾಯಕಿಯರಾದ ವಿಜಯಲಕ್ಷ್ಮೇ ಬಂಡಿಸಿದ್ದೇಗೌಡ, ದಮಯಂತಿ ಬೋರೇಗೌಡ ಹಾಗೂ ಪಾರ್ವತಮ್ಮ ಶ್ರೀಕಂಠಯ್ಯ 20 ವರ್ಷಗಳಿಗೂ ಅಧಿಕ ಕಾಲ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಶಾಸಕರಾಗಿ ಆಳ್ವಿಕೆ ನಡೆಸಿರುವುದು ಒಂದು ವಿಶೇಷ. ಇದಾದ ನಂತರದಲ್ಲಿ ಕ್ಷೇತ್ರದೊಳಗೆ ಎ.ಎಸ್.ಬಂಡಿಸಿದ್ದೇಗೌಡ ಹಾಗೂ ಎ.ಸಿ.ಶ್ರೀಕಂಠಯ್ಯ ಕುಟುಂಬದ ನಡುವೆಯೇ ನೇರ ಕದನ ಏರ್ಪಟ್ಟಿದೆ.
ಎ.ಎಸ್.ಬಂಡಿಸಿದ್ದೇಗೌಡರ ಪುತ್ರ ರಮೇಶ್ ಬಂಡಿಸಿದ್ದೇಗೌಡ, 2008 ಮತ್ತು 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2018ರ ಚುನಾವಣೆ ವೇಳೆಗೆ ರಮೇಶ್ ಬಂಡಿಸಿದ್ದೇಗೌಡ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಜಿಗಿದರೆ, ಎ.ಸಿ.ಶ್ರೀಕಂಠಯ್ಯ ಪುತ್ರ ರವೀಂದ್ರ ಶ್ರೀಕಂಠಯ್ಯ ಕಾಂಗ್ರೆಸ್‌ನಿಂದ ಜೆಡಿಎಸ್ ಸೇರಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಇದೀಗ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಅಖಾಡ ಪ್ರವೇಶಿಸುತ್ತಿರುವ ರವೀಂದ್ರ ಶ್ರೀಕಂಠಯ್ಯರಿಗೆ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ ಮತ್ತೆ ಎದುರಾಳಿಯಾಗಿದ್ದಾರೆ. ಕೆಆರ್‌ಎಸ್ ಕಂದಾಯ ಗ್ರಾಮ ಮಾಡಿ ಹಕ್ಕುಪತ್ರ ವಿತರಿಸಿದ್ದು, ಮಹದೇವಪುರ ಸೇರಿದಂತೆ ಹಲವು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕಸಬಾ, ಕೆ.ಶೆಟ್ಟಹಳ್ಳಿ, ಬೆಳಗೊಳ ಹೋಬಳಿಗಳ ರಸ್ತೆ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ತಮ್ಮ ಕೈ ಹಿಡಿಯಲಿವೆ ಎನ್ನುವುದು ಶಾಸಕ ರವೀಂದ್ರ ಶ್ರೀಕಂಠಯ್ಯನವರ ವಿಶ್ವಾಸವಾಗಿದೆ.
ತಗ್ಗಹಳ್ಳಿ ಭಾಗದಲ್ಲಿ ಜೆಡಿಎಸ್‌ನ ಪ್ರಭಾವಿ ಮುಖಂಡರೆನಿಸಿದ್ದ ತಗ್ಗಹಳ್ಳಿ ವೆಂಕಟೇಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿ ಕ್ಷೇತ್ರದೊಳಗೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಬಾರಿ ರವೀಂದ್ರ ಶ್ರೀಕಂಠಯ್ಯ ಗೆಲುವಿಗೆ ಶ್ರಮಿಸಿದ್ದ ತಗ್ಗಹಳ್ಳಿ ವೆಂಕಟೇಶ್ ಈ ಬಾರಿ ಅವರ ವಿರುದ್ಧವೇ ತೊಡೆ ತಟ್ಟುತ್ತಿದ್ದಾರೆ. ಒಮ್ಮೆ ವೆಂಕಟೇಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಜೆಡಿಎಸ್‌ನ ಮತಗಳು ವಿಭಜನೆಗೊಳ್ಳಲಿವೆ. ಇದರಿಂದ ರವೀಂದ್ರಗೆ ಹಿನ್ನಡೆಯಾಗಲೂಬಹುದು. ಬಂಡಾಯವನ್ನು ಶಮನಗೊಳಿಸಲು ದಳಪತಿಗಳು ಹಾಗೂ ಹಾಲಿ ಶಾಸಕರು ಪ್ರಯತ್ನ ನಡೆಸಿಲ್ಲ. ಇದಲ್ಲದೆ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರನ್ನು ಕಳ್ಳೆತ್ತುಗಳು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕರೆದಿದ್ದಾರೆಂಬ ಆರೋಪಗಳೂ ಇವೆ. ಶಾಸಕರ ವಿಚಾರವಾಗಿ ಜೆಡಿಎಸ್‌ನ ಹಲವು ಮುಖಂಡರ ಮುನಿಸು. ಹೀಗೆ ಹಲವು ಅಂಶಗಳು ಚುನಾವಣೆ ಮೇಲೆ ಯಾವ ರೀತಿಯ ಪರಿಣಾಮ ಬೀರಲಿವೆ ಎನ್ನುವುದು ಕುತೂಹಲ ಮೂಡಿಸಿದೆ.
ಅಲ್ಲದೆ, ತಗ್ಗಹಳ್ಳಿ ವೆಂಕಟೇಶ್ ಅವರು ಹಲವಾರು ದಶಕಗಳಿಂದ ಶ್ರೀರಂಗಪಟ್ಟಣ ಅಧಿಕಾರ ಕೇವಲ ಅರಕೆರೆ ಹೋಬಳಿಗೆ ಮಾತ್ರ ಸೀಮಿತವಾಗಿದೆ. ಕೊತ್ತತ್ತಿ ಹೋಬಳಿ ಕ್ಷೇತ್ರದ ಅರ್ಧದಷ್ಟುಮತದಾರರನ್ನು ಹೊಂದಿದೆ. ಈ ಭಾಗಕ್ಕೂ ಒಮ್ಮೆ ಅಧಿಕಾರ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ ಈ ಬಾರಿ ಗೆಲುವು ಸಾಧನೆಗೆ ಶತಾಯಗತಾಯ ಹೋರಾಟ ನಡೆಸುತ್ತಿದ್ದಾರೆ. ಜೆಡಿಎಸ್‌ನೊಳಗೆ ಮುನಿಸಿಕೊಂಡಿರುವ ಮುಖಂಡರು, ಬಂಡಾಯ ಎದ್ದಿರುವ ತಗ್ಗಹಳ್ಳಿ ವೆಂಕಟೇಶ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ತೀವ್ರ ಶ್ರಮ ವಹಿಸುತ್ತಿದ್ದಾರೆ. ಕ್ಷೇತ್ರದೊಳಗೆ ಠಿಕಾಣಿ ಹೂಡಿರುವ ರಮೇಶ್ ಬಂಡಿಸಿದ್ದೇಗೌಡರು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಅವರ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿ ಮುಂದುವರೆದಿದ್ದಾರೆ.
ರವೀಂದ್ರ ಶ್ರೀಕಂಠಯ್ಯ ವಿರುದ್ಧದ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿರುವ ರಮೇಶ್ ಬಂಡಿಸಿದ್ದೇಗೌಡರಿಗೂ ಬಂಡಾಯಗಾರರ ಭೀತಿ ಇದೆ. ಕಾಂಗ್ರೆಸ್ ಪಕ್ಷದಲ್ಲೇ ಇರುವ ಪಾಲಹಳ್ಳಿ ಚಂದ್ರಶೇಖರ್ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವೆಂದು ಕ್ಷೇತ್ರದ ಅಭ್ಯರ್ಥಿ ವಿರುದ್ಧ ಸಿಡಿದೆದ್ದಿದ್ದರೆ, ಕಾಂಗ್ರೆಸ್ ಪಕ್ಷದೊಳಗೇ ಇದ್ದ ಎಸ್.ಸಚ್ಚಿದಾನಂದ ಇದೀಗ ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಅವರೂ ಸಾಕಷ್ಟುಮತಗಳನ್ನು ಪಡೆಯುವ ಸಾಧ್ಯತೆಗಳಿವೆ. ಆಗ ಕಾಂಗ್ರೆಸ್ ಮತಗಳೂ ವಿಭಜನೆಯಾಗಲಿವೆ. ಇದೂ ಸಹ ರಮೇಶ್ ಬಂಡಿಸಿದ್ದೇಗೌಡರ ಹಿನ್ನಡೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.
ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಕ್ಷೇತ್ರವನ್ನು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಗೆಲುವಿಗೆ ಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಎಸ್.ಸಚ್ಚಿದಾನಂದ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದೊಂದು ವರ್ಷದಿಂದಲೇ ಚುನಾವಣಾ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿರುವ ಸಚ್ಚಿದಾನಂದ ತಮ್ಮ ತಂದೆ ಕೆ.ವಿ.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ಕೊರೋನಾದಿಂದ ಮೃತಪಟ್ಟಕ್ಷೇತ್ರದ ಬಡ ಕುಟುಂಬಗಳಿಗೆ ಧನಸಹಾಯ, ಋುತುಮತಿಯಾದ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಕಿಟ್, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೆರವು ನೀಡುವುದರೊಂದಿಗೆ ಜನರ ಒಲವನ್ನು ಗಳಿಸಿಕೊಳ್ಳುವ ಪ್ರಯತ್ನದಲ್ಲಿ ಮುನ್ನಡೆದಿದ್ದಾರೆ.
ಸಂಸದೆ ಸುಮಲತಾ ಆಪ್ತರೂ ಆಗಿರುವ ಸಚ್ಚಿದಾನಂದ ಚಿತ್ರನಟರಾದ ದರ್ಶನ್ ಮತ್ತು ಯಶ್ ಅವರೊಂದಿಗೂ ಉತ್ತಮ ಒಡನಾಟವಿಟ್ಟುಕೊಂಡಿದ್ದಾರೆ. ಅವರೆಲ್ಲರನ್ನೂ ಚುನಾವಣಾ ಪ್ರಚಾರಕ್ಕೆ ಕರೆತಂದು ಧೂಳೆಬ್ಬಿಸುವುದಕ್ಕೆ ಹೊರಟಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲೇಬೇಕೆಂದು ಸಂಕಲ್ಪ ಮಾಡಿದ್ದಾರೆ.
ಒಟ್ಟಾರೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಂಡಾಯಗಾರರನ್ನು ಸಮರ್ಥವಾಗಿ ಹಿಂದಿಕ್ಕಿ ಅಧಿಕಾರ ಹಿಡಿಯುವವರು ಯಾರು, ಎರಡು ಕುಟುಂಬಕ್ಕೆ ಸೀಮಿತವಾಗಿರುವ ಅಧಿಕಾರ ಈ ಬಾರಿ ಹೊಸ ಬದಲಾವಣೆಯನ್ನು ತರಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.
ಕಣದಿಂದ ದೂರ ಉಳಿದಿರುವ ನಂಜುಂಡೇಗೌಡರು
ಹಿಂದೆ ರೈತಸಂಘದಿಂದ ಚುನಾವಣಾ ಕಣಕ್ಕಿಳಿಯುತ್ತಿದ್ದ ಮುಖಂಡ ಕೆ.ಎಸ್.ನಂಜುಂಡೇಗೌಡರು ಹಾಲಿ ಬಿಜೆಪಿಯಲ್ಲಿದ್ದು, ಚುನಾವಣೆಯಿಂದ ದೂರ ಉಳಿದಿರುವಂತೆ ಕಂಡು ಬರುತ್ತಿದ್ದಾರೆ. ಇವರೂ ಕ್ಷೇತ್ರದ ಪ್ರಬಲ ಮುಖಂಡರಲ್ಲೊಬ್ಬರಾಗಿದ್ದಾರೆ. ಇವರ ಹಿಡಿತದಲ್ಲಿರುವ ಮತಗಳು ಬಿಜೆಪಿ ಕೈ ಹಿಡಿಯಲಿವೆಯೋ ಅಥವಾ ಬೇರೆಡೆಗೆ ಹರಿದುಹೋಗಲಿವೆಯೋ ಎನ್ನುವುದು ಪ್ರಶ್ನೆಯಾಗಿದೆ. ಎಸ್.ಸಚ್ಚಿದಾನಂದ ಮತ್ತು ಕೆ.ಎಸ್.ನಂಜುಂಡೇಗೌಡರ ನಡುವಿನ ಸಂಬಂಧ ಉತ್ತಮವಾಗಿಲ್ಲದಿರುವುದು ಈ ಅನುಮಾನಗಳಿಗೆ ಎಡೆ ಮಾಡಿಕೊಡುವಂತೆ ಮಾಡಿದೆ.
ಡಾ.ಸಿದ್ಧರಾಮಯ್ಯರ ಚಿತ್ತ ಎತ್ತ?
ಕೊತ್ತತ್ತಿ ಹೋಬಳಿಗೆ ಸೇರಿದ ಮಾಜಿ ಶಾಸಕ ದೊಡ್ಡ ಬೋರೇಗೌಡರ ಪುತ್ರ ಹಾಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಕೂಡ ತಮ್ಮ ವ್ಯಾಪ್ತಿಯಲ್ಲಿ ಮತಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಅವರ ವಿಶ್ವಾಸ ಎಸ್.ಸಚ್ಚಿದಾನಂದ ಪರವಾಗಿದ್ದರೆ ಪ್ಲಸ್ ಆಗಲಿದೆ. ಅದರಲ್ಲೂ ಏನಾದರೂ ವ್ಯತ್ಯಾಸಗಳಾದರೆ ಚುನಾವಣೆ ಫಲಿತಾಂಶ ಎತ್ತ ತಿರುಗಲಿದೆ ಎನ್ನುವುದನ್ನು ಹೇಳಲಾಗುವುದಿಲ್ಲ.