ಎಚ್ ಡಿ ಕುಮಾರಸ್ವಾಮಿ ವಿರುದ್ಧ ಮತ್ತೋರ್ವ ಜೆಡಿಎಸ್ ಶಾಸಕರ ಮುನಿಸು
- ಪ್ರತಿಸ್ಪರ್ಧಿ ಹುಟ್ಟು ಹಾಕುವ ಕಲೆ ಜೆಡಿಎಸ್ ಪಕ್ಷದ ನಡವಳಿಕೆ
- ಜೆಡಿಎಸ್ ಮುಖಂಡರ ವಿರುದ್ಧ ಎಸ್‌ಆರ್ ಶ್ರೀನಿವಾಸ ಗೌಡ ವಾಗ್ದಾಳಿ
ಗುಬ್ಬಿ (ಸೆ.20): ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಇಬ್ಬರು ಅಭ್ಯರ್ಥಿಗಳನ್ನು ಗುರುತಿಸುವುದು ಜೊತೆಗೆ ಹಾಲಿ ಶಾಸಕರ ವಿರುದ್ಧ ಸ್ವಪಕ್ಷೀಯ ಪ್ರತಿಸ್ಪರ್ಧಿ ಹುಟ್ಟು ಹಾಕುವ ಕಲೆ ಜೆಡಿಎಸ್ ಪಕ್ಷದ ನಡವಳಿಕೆಯಾಗಿಬಿಟ್ಟಿದೆ ಎಂದು ಎಸ್‌ಆರ್ ಶ್ರೀನಿವಾಸ ಗೌಡ ಕುಟುಕಿದರು.
ತಾಲೂಕಿನ ಕಡಬ ಹೋಬಳಿ ಅರೆಮಾರನಹಳ್ಳಿ ಗ್ರಾಮದಲ್ಲಿ 50 ಲಕ್ಷ ರು.ಗಳ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕುಮಾರಸ್ವಾಮಿ ಅವರ ಮೇಲೆ ನನಗೆ ಮುನಿಸಿಲ್ಲ. ಆದರೆ ಅವರೆ ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಲು ಮುಂದಾಗಿರುವಂತಿದೆ. ಹೊಸಬರನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿಗೂ ಸಹ ಹೊಸಬರು ಸಿಕ್ಕಿದ್ದಾರೆ ಎನಿಸುತ್ತದೆ ಎಂದರು.
'ಕಾಂಗ್ರೆಸ್ ಸೇರಲು ಹೊರಟ ಆತ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿ'
ಇಂತಹ ಹೊಸಬರನ್ನು ಹುಡುಕುವ ಪ್ರಕ್ರಿಯೆ ಜೆಡಿಎಸ್‌ನಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಬಡವರ ಕಾಳಜಿಯುಳ್ಳವರು ಸದಾ ರೈತಪರ ಚಿಂತನೆ ಮಾಡುತ್ತಾರೆ. ಅವರ ಚೈತನ್ಯಕ್ಕೆ ಇನ್ನೂ ಇಪ್ಪತ್ತು ವರ್ಷ ಸಿಕ್ಕರೂ ಪಕ್ಷ ಸಂಘಟನೆ ಬಲಿಷ್ಟ ಮಾಡಬಲ್ಲರು. ಅವರ ಬಗ್ಗೆ ಅಪಾರ ಗೌರವವಿದೆ ಎಂದರು.
ಇಂದಿಗೂ ಅವರ ಜೊತೆ ನನ್ನ ಸಂಪರ್ಕ ಇದ್ದೇ ಇದೆ ಎಂದ ಶ್ರೀನಿವಾಸ ಗೌಡ ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರ ಮಟ್ಟಕ್ಕೆ ನಾನು ಬೆಳೆದಿಲ್ಲ. ಅವರ ಬಗ್ಗೆ ಸಹ ಮಾತನಾಡಲ್ಲ ಎಂದರು