ದೇವೇಗೌಡರ ಕುಟುಂಬದ ಋುಣದಲ್ಲಿರುವಂತವರು ಅವರ ವಿರುದ್ಧವೇ ಮಾತನಾಡುವಷ್ಟು ನೀಚತನ ತೋರಿಸುತ್ತಾರೆ  ಉಂಡ ಮನೆಗೆ ದ್ರೋಹ ಬಗೆಯುವರು ಅಂದರೆ ಇಂತಹವರೇ

ಶ್ರೀನಿವಾಸಪುರ (ಸೆ.20): ದೇವೇಗೌಡರ ಕುಟುಂಬದ ಋುಣದಲ್ಲಿರುವಂತವರು ಅವರ ವಿರುದ್ಧವೇ ಮಾತನಾಡುವಷ್ಟು ನೀಚತನ ತೋರಿಸುತ್ತಾರೆ ಎಂದು ಕಾಂಗ್ರೆಸ್‌ ಸೇರುವ ನಿಟ್ಟಿನಲ್ಲಿರುವ ಕೋಲಾರದ ಶಾಸಕ ಶ್ರೀನಿವಾಸಗೌಡರ ವಿರುದ್ಧ ಕೋಲಾರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ಭಾನುವಾರ ಇಲ್ಲಿಯ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಂಡ ಮನೆಗೆ ದ್ರೋಹ ಬಗೆಯುವರು ಅಂದರೆ ಇಂತಹವರೇ ಎಂದರು.

ಆಪರೇಷನ್ ಜೆಡಿಎಸ್ : ಇಬ್ಬರು ಮುಖಂಡರು ಕಾಂಗ್ರೆಸ್‌ಗೆ

ಕೆಸಿ ವ್ಯಾಲಿ ಕೆರೆಯಲ್ಲಿ ನೀರು ಕುಡಿಯಬೇಡ, ಮನೆಗೆ ತೆಗೆದುಕೊಂಡು ಹೋಗಿ ಎಷ್ಟುಬೇಕಾದರೂ ಕುಡಿ ಅಂದವರು ಯಾರು. ಕುಮಾರಸ್ವಾಮಿ ಆಡಳಿತದ ಬಗ್ಗೆ ಮಾತನಾಡುವ ಯೋಗ್ಯತೆ ಶ್ರೀನಿವಾಸಗೌಡರಿಗೆ ಇದೆಯಾ, ಎಚ್ಡಿಕೆ ಅಧಿಕಾರದಲ್ಲಿ ಇದ್ದಾಗ ದೇಶಕ್ಕೆ ಮಾದರಿ ಎನ್ನುವಂತೆ ರೈತರ ಸಾಲ ಮನ್ನಾ ಮಾಡಿದರು. ಅಂತಹ ವ್ಯಕ್ತಿ ವಿರುದ್ದ ಮಾತನಾಡಲು ಬಾಯಿಯಾದರು ಹೇಗೆ ಬರುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

ಜೆಡಿಎಸ್‌ ಟಿಕೆಟ್‌ ಕೊಡಿಸಿದ್ದು ನಾನು

ಈ ದೊಡ್ಡ ಮನುಷ್ಯನಿಗೆ ಪಕ್ಷದ ಟಿಕೆಟ್‌ ನೀಡುವಂತೆ ಕುಮಾರಸ್ವಾಮಿ ಅವರ ಬಳಿ ಶಿಫಾರಸು ಮಾಡಿದವನು ನಾನೇ. ನಂತರ ಶಾಸಕನಾಗಿ ಇವತ್ತು ಯಾರದೋ ಮಾತು ಕೇಳಿ ಪಕ್ಷಕ್ಕೆ ದ್ರೋಹ ಮಾಡುತ್ತಿದ್ದಾರೆ. ಜೆಡಿಎಸ್‌ ಚಿನ್ಹೆ ಮೇಲೆ ಗೆದ್ದು ಶಾಸಕನಾಗಿರುವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಯಾವ ಪಕ್ಷಕ್ಕೆ ಬೇಕಾದರೂ ಹೋಗಲಿ ಎಂದು ಏಕವಚನದಲ್ಲಿ ಅಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಯಣಸ್ವಾಮಿ, ಪುರಸಭೆ ಸದಸ್ಯ ಬಿ.ವಿ.ರೆಡ್ಡಿ, ರಾಜು, ಅನಂದಗೌಡ,ಪೂಲುಶಿವಾರೆಡ್ಡಿ, ಕಾರ್‌ ಬಾಬು ಇದ್ದರು.