Asianet Suvarna News Asianet Suvarna News

'ಪೂರ್ಣ ನೋಂದಣಿಯಾದರೆ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಖಚಿತ'

  • ಪದವೀಧರ ಮತದಾರರು ಸಂಪೂರ್ಣವಾಗಿ ನೋಂದಣಿಯಾದರೆ ದಕ್ಷಿಣ ಪದವೀಧರ ಕ್ಷೇತ್ರವು ಜೆಡಿಎಸ್‌ ತೆಕ್ಕೆಗೆ
  •  ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅಭಿಪ್ರಾಯ
srikantegowda Launches voter registration in the graduate constituency snr
Author
Bengaluru, First Published Aug 3, 2021, 11:53 AM IST

  ಮೈಸೂರು (ಆ.03):  ಪದವೀಧರ ಮತದಾರರು ಸಂಪೂರ್ಣವಾಗಿ ನೋಂದಣಿಯಾದರೆ ದಕ್ಷಿಣ ಪದವೀಧರ ಕ್ಷೇತ್ರವು ಜೆಡಿಎಸ್‌ ತೆಕ್ಕೆಯಲ್ಲಿಯೇ ಇರುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.

ಕುವೆಂಪುನಗರದ ಬಂದಂತಮ್ಮ ಕಾಳಮ್ಮ ದೇವಸ್ಥಾನ ಆವರಣದಲ್ಲಿ ಸೋಮವಾರ ದಕ್ಷಿಣ ಪದವೀಧರ ಕ್ಷೇತ್ರದ ಮತದಾರರ ನೊಂದಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಹಿಂದೆ ಪದವೀಧರ ಮತದಾರರ ನೋಂದಣಿಯು 40 ಸಾವಿರದಿಂದ 65 ಸಾವಿರ ಆಗಿತ್ತು. ಇದು ಕಳೆದ ಚುನಾವಣೆಯಲ್ಲಿ 1.25 ಲಕ್ಷ ಆಗಿತ್ತು. ಈ ಬಾರಿ ಸುಮಾರು 2 ಲಕ್ಷಕ್ಕಿಂತ ಹೆಚ್ಚು ಮಂದಿ ಪದವೀಧರರನ್ನು ನೋಂದಾಯಿಸಬೇಕು. ಏಕೆಂದರೆ ಈ ಹಿಂದಿನ ಮತದಾರರ ನವೀಕರಣದ ಜೊತೆಗೆ ಹೊಸ ಮತದಾರರನ್ನು ನೋಂದಾಯಿಸಬೇಕಾದ ಜವಾಬ್ದಾರಿ ಇದೆ. ಮತದಾರರ ಸಂಖ್ಯೆ ಕಡಿಮೆ ಇದ್ದಾಗ ದಕ್ಷಿಣ ಪದವೀಧರರ ಕ್ಷೇತ್ರವು ಬಿಜೆಪಿ ತೆಕ್ಕೆಯಲ್ಲಿತ್ತು. ಇತ್ತೀಚೆಗೆ ಎಲ್ಲಾರೂ ನೋಂದಾಯಿಸಿಕೊಳ್ಳುತ್ತಿರುವುದರಿಂದ ಜೆಡಿಎಸ್‌ ಪಾಲಾಗಿದೆ ಎಂದರು.

'2023ಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ'

ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಯು ಜೆಡಿಎಸ್‌ನ ಭದ್ರಕೋಟೆ. ಇಲ್ಲಿ 16 ಮಂದಿ ಜೆಡಿಎಸ್‌ ಶಾಸಕರು, ಕಾಂಗ್ರೆಸ್‌ ಮತ್ತು ಬಿಜೆಪಿಯ ತಲಾ 4 ಶಾಸಕರಿದ್ದಾರೆ. ಅಂತೆಯೇ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಮೈಲುಗೈ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳು ತಮ್ಮ ಊರು, ವಾರ್ಡ್‌ ಮತ್ತು ರಸ್ತೆಯಲ್ಲಿನ ಪದವಿ ಪಡೆದು 3 ವರ್ಷ ಪೂರೈಸಿದವರನ್ನು ನೋಂದಾಯಿಸಬೇಕು. ಆಗ ಖಂಡಿತವಾಗಿಯೂ ಈ ಕ್ಷೇತ್ರವು ಜೆಡಿಎಸ್‌ ಪಾಲಾಗುತ್ತದೆ. ಅನೇಕ ಪದವೀಧರರಿಗೆ ತಮಗೆ ಮತದಾನದ ಹಕ್ಕಿದೆ ಎಂಬುದೇ ಗೊತ್ತಿಲ್ಲ. ಆ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.

ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದೊಂದು ಪೂರ್ವ ಸಿದ್ಧತಾ ಸಭೆಯಂತಿದೆ. ಸಾಮಾನ್ಯ ಚುನಾವಣೆಗಳು ಒಂದೆರಡು ತಿಂಗಳ ಮುಂಚೆ ಆರಂಭವಾಗುತ್ತವೆ. ಆದರೆ ನಾವು ಈ ಚುನಾವಣೆ ಪ್ರಕ್ರಿಯೆಯನ್ನು 11 ತಿಂಗಳ ಮುಂಚೆಯೆ ಆರಂಭಿಸಿದ್ದೇವೆ. ನಮಗೆ ನಾಲ್ಕೂ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಕಂದಾಯ ಇಲಾಖೆ ಸೇರಿದಂತೆ ಹಲವು ಒಟ್ಟು 64 ಇಲಾಖೆಯ ಪ್ರತಿನಿಧಿಗಳ ಬೆಂಬಲವು ಎಚ್‌.ಕೆ. ರಾಮು ಅವರ ಮೂಲಕ ಲಭ್ಯವಾಗಿದೆ. ಎಚ್‌.ಕೆ. ರಾಮು ಅವರು ನಾಲ್ಕು ಬಾರಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತದಾರರ ನೋಂದಣಿ, ಪಕ್ಷ ಸಂಘಟನೆ ನಮ್ಮ ಉದ್ದೇಶ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್‌.ಕೆ. ರಾಮು, ನಗರ ಜೆಡಿಎಸ್‌ ಅಧ್ಯಕ್ಷ ಕೆ.ಟಿ. ಚಲುವೇಗೌಡ, ನಗರ ಪಾಲಿಕೆ ಜೆಡಿಎಸ್‌ ನಾಯಕಿ ಅಶ್ವಿನಿ ಅನಂತು, ಸದಸ್ಯರಾದ ರಮೇಶ್‌, ಪ್ರೇಮಾ ಶಂಕರೇಗೌಡ, ಮಾಜಿ ಸದಸ್ಯ ಕೆ.ವಿ. ಮಲ್ಲೇಶ್‌, ಮಂಡ್ಯ ಜಿಪಂ ಮಾಜಿ ಅಧ್ಯಕ್ಷ ವೆಂಕಟೇಶ್‌, ಕಸಾಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್‌ ಮೊದಲಾದವರು ಇದ್ದರು.

ನಾನು ಎರಡು ಬಾರಿ ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಮುಂದಿನ ಬಾರಿ ಬೇರೆ ಚುನಾವಣೆಗೆ ಹೋಗಬೇಕು ಎಂಬ ಕಾರಣಕ್ಕೆ ಈ ಕ್ಷೇತ್ರವನ್ನು ತೆರವು ಮಾಡಿಕೊಡುತ್ತಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಪರಿಷತ್‌ನ ಒಳಗೆ ಮತ್ತು ಹೊರಗೆ ಹೋರಾಟ ನಡೆಸಿದ್ದೇನೆ. ಇಂದು ಜೆಡಿಎಸ್‌ ಪರವಾದ ನೋಂದಣಿಗೆ ನಾವು ಚಾಲನೆ ನೀಡುತ್ತಿದ್ದೇವೆ.

- ಕೆ.ಟಿ. ಶ್ರೀಕಂಠೇಗೌಡ, ವಿಧಾನ ಪರಿಷತ್‌ ಸದಸ್ಯರು.

Follow Us:
Download App:
  • android
  • ios