Asianet Suvarna News Asianet Suvarna News

Sri siddeshwar swamiji: ಆಧ್ಯಾತ್ಮದ ಕೊಂಡಿ ಕಳಚಿಕೊಂಡ ನಾಡು; ಕಂಬನಿ ಮೀಡಿದ ಭಕ್ತರು

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಸೋಮವಾರ ಸಂಜೆ ಲಿಂಗೈಕ್ಯರಾಗಿದ್ದಕ್ಕೆ ತಾಳಿಕೋಟೆ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ಕಂಬನಿ ಮಿಡಿದಿದ್ದಾರೆ

Sri siddeshwar who gave pravachan in Talikote 2001
Author
First Published Jan 3, 2023, 6:57 AM IST

ತಾಳಿಕೋಟೆ (ಜ.3) : ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಸೋಮವಾರ ಸಂಜೆ ಲಿಂಗೈಕ್ಯರಾಗಿದ್ದಕ್ಕೆ ತಾಳಿಕೋಟೆ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ಕಂಬನಿ ಮಿಡಿದಿದ್ದಾರೆ.

ಡಿಸೆಂಬರ್‌ 2001ನೇ ಇಸ್ವಿಯಲ್ಲಿ ತಾಳಿಕೋಟೆಯ ಎಸ್‌.ಕೆ.ಕಾಲೇಜ್‌ ಆವರಣದಲ್ಲಿ ಒಂದು ತಿಂಗಳ ಪರ‍್ಯಂತ ಪ್ರವಚನವನ್ನು ಉಣಬಡಿಸಿದ್ದ ಸಿದ್ದೇಶ್ವರ ಶ್ರೀಗಳು ಭಾಗದಲ್ಲಿ ಆಧ್ಯಾತ್ಮಿಕ ರಸದೌತಣ ಪಸರಿಸುವಂತಹ ಕಾರ್ಯವನ್ನು ಮಾಡಿದ್ದರು. ಅವರಿಗೆ ತಿಂಗಳ ಪರ‍್ಯಂತ ಉಳಿದುಕೊಳ್ಳಲು ತುಂಬಗಿ ಗ್ರಾಮದಲ್ಲಿಯ ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ ಅವರ ತೋಟದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇತ್ತೀಚಿಗೆ ತಾಳಿಕೋಟೆ ಭಾಗದ ಅನೇಕ ಮುಖಂಡರುಗಳು ಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿ ಎರಡನೇ ಭಾರಿಗೆ ತಾಳಿಕೋಟೆಗೆ ಪ್ರವಚನ ಸಾರಕ್ಕಾಗಿ ಕರಿಸಿಕೊಳ್ಳಬೇಕು. ಈ ಭಾಗದಲ್ಲಿ ಆಧ್ಯಾತ್ಮಿಕತೆ ಹೆಚ್ಚಿಸಬೇಕು ಎಂದು ಶ್ರೀಗಳನ್ನು ಭೇಟಿಯಾಗಿ ಬಂದಿದ್ದರು. ಆ ಸಮಯದಲ್ಲಿ ಶ್ರೀಗಳು ಶೀಘ್ರದಲ್ಲಿಯೇ ದಿನಾಂಕವನ್ನು ತಿಳಿಸುವುದಾಗಿ ಹೇಳಿದ್ದರಲ್ಲದೇ ಶ್ರೀಗಳ ಒಪ್ಪಿಗೆಯ ನಂತರ ತಾಳಿಕೋಟೆಯಲ್ಲಿ ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕೆಂಬ ಮುಖಂಡರುಗಳು ಚರ್ಚೆಯನ್ನು ಕೂಡಾ ಮಾಡಿದ್ದರು. ಆದರೆ, ಸಿದ್ದೇಶ್ವರ ಶ್ರೀಗಳು ಸದ್ಯ ಲಿಂಗೈಕ್ಯರಾಗಿರುವದರಿಂದ ತಾಳಿಕೋಟೆ ಭಾಗದಲ್ಲಿ ಕಾರ್ಮೋಡ ಕವಿದಂತಾಗಿದ್ದು, ಸದ್ಯ ಈ ಭಾಗದ ಜನರು ಶ್ರೀಗಳ ಅಂತಿಮ ದರ್ಶನದೆಡೆಗೆ ವಿಜಯಪುರಕ್ಕೆ ತೆರಳುತ್ತಿದ್ದಾರೆ.

Sri Siddeshwar swamiji: ಪ್ರವಚನದಿಂದ ಸನ್ಮಾರ್ಗ ತೋರಿದ ಮಹಾ ಸಂತ

ಸಿದ್ದೇಶ್ವರ ಶ್ರೀಗಳ ಲಿಂಗೈರಾಗಿದ್ದಕ್ಕೆ ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೂರ ಗುರುಜಯಸಿದ್ದೇಶ್ವರ ಮಹಾಸ್ವಾಮಿಗಳು, ತುಂಬಗಿ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕಲಕೇರಿಯ ಮಡಿವಾಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು, ಪಡೇಕನೂರನ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಅಸ್ಕಿಯ ವಿರುಪಾಕ್ಷ ಶಿವಾಚಾರ್ಯರು, ಕೆಸರಟ್ಟಿಯ ಸೋಮಲಿಂಗ ಮಹಾಸ್ವಾಮಿಗಳು, ನಾವದಗಿ ರಾಜೇಂದ್ರ ಒಡೆಯರ ಸ್ವಾಮಿಗಳು, ಚಬನೂರ ರಾಮಲಿಂಗ ಮಹಾಸ್ವಾಮಿಗಳು ಹಾಗೂ ಮುಖಂಡರುಗಳಾದ ಪ್ರಭುಗೌಡ ಮದರಕಲ್ಲ, ಕಾಶಿನಾಥ ಮುರಾಳ, ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ, ಪವಾಡೆಪ್ಪ ಯಾಳವಾರ, ಈರಪ್ಪಣ್ಣ ಜಾಲವಾದಿ, ಮಹಾದೇವಪ್ಪಣ್ಣ ಕುಂಬಾರ, ಶಿವು ಪಾಲ್ಕಿ, ಮುರುಗೆಪ್ಪ ಸರಶೆಟ್ಟಿ, ಈರಯ್ಯ ಮಠ, ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

ಸಮಾಧಿ, ಪ್ರತಿಮೆ ಬೇಡ, 8 ವರ್ಷದ ಹಿಂದೆ ಶ್ರೀಗಳು ಬರೆದಿದ್ದ ಪತ್ರದಂತೆ ಅಂತ್ಯಕ್ರಿಯೆ!

ನಾಡಿನ ಹೆಸರಾಂತ ಸಂತರಲ್ಲಿ ಹೆಸರುವಾಸಿಯಾಗಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ಕಾರ್ಮೋಡ ಕವಿದ್ದಂತಾಗಿದೆ. ಸಾಕಷ್ಟುಜನ ಸ್ವಾಮಿಜಿಗಳಿಗೆ ಮಾರ್ಗದರ್ಶನವನ್ನು ಕೂಡಾ ಮಾಡಿದ್ದ ಸಿದ್ದೇಶ್ವರ ಶ್ರೀಗಳು ನಮ್ಮೆಲ್ಲರ ನಡುವೆ ಸದ್ಯ ಇಲ್ಲವೆಂಬ ಕೊರಗು ಕಾಡುತ್ತಿದೆ. ಶ್ರೀಗಳು ನಾಡಿಗೆ ನೀಡಿದ ಆಧ್ಯಾತ್ಮಿಕ ಪ್ರವಚನದ ಕೊಡುಗೆ ಬಸವಣ್ಣನವರ ವಚನಗಳ ಹಾಗೆ ತಲೆತಲಾಂತರವಾಗಿ ಉಳಿದುಕೊಳ್ಳಲಿದೆ.

ಬಾಲಶಿವಯೋಗಿ ಸಿದ್ದಲಿಂಗ ಶ್ರೀಗಳು, ಖಾಸ್ಗತೇಶ್ವರ ಮಠ ತಾಳಿಕೋಟೆ.

ಅಧ್ಯಾತ್ಮದ ಕೊಂಡಿ ಕಳಚಿಕೊಂಡ ನಾಡು

ನಡೆದಾಡುವ ದೇವರು, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಅಗಲಿಕೆಯಿಂದ ಅತೀವ ದುಃಖವಾಗಿದೆ. ನಿಸ್ವಾರ್ಥ ಸೇವೆ, ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಖನಿಜವಾಗಿದ್ದ ಶ್ರೀಗಳು ತಮ್ಮ ಗುರುಗಳ ಮಾರ್ಗದರ್ಶನದಲ್ಲಿಯೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದರು. ಅವರ ಅಗಲಿಕೆಯಿಂದ ನಾಡಿನ ಆಧ್ಯಾತ್ಮಿಕ ಕೊಂಡಿಯೊಂದು ಕಳಚಿದಂತಾಗಿದೆ. ವೈಯಕ್ತಿಕವಾಗಿ ಶ್ರೀಗಳ ಜತೆಗಿನ 50 ವರ್ಷಗಳ ಸುದೀರ್ಘ ಒಡನಾಟ ಅಂತ್ಯಗೊಂಡಿದ್ದು, ದುಃಖತಂದಿದೆ. ಶ್ರೀಗಳ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

- ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ನಡೆದಾಡುವ ವಿಶ್ವಕೋಶವಾಗಿದ್ದರು

ಸಿದ್ದೇಶ್ವರ ಸ್ವಾಮೀಜಿ ನಡೆದಾಡುವ ವಿಶ್ವಕೋಶ. ಅವರ ಜ್ಞಾನ ಬೋಧನೆಯ ಲಾಭ ಪಡೆದು ಸನ್ಮಾರ್ಗದಲ್ಲಿ ನಡೆಯಬೇಕು. ಅವರ ಜ್ಞಾನ ಖ್ಯಾತಿ ದೇಶ-ವಿದೇಶಗಳಲ್ಲಿ ಪಸರಿಸಿದೆ. ಇಂತಹ ಜ್ಞಾನಿಯ ಜ್ಞಾನ ಸುಧೆಯ ಬೆಳಕಿನಲ್ಲಿ ಎಲ್ಲರೂ ಮುನ್ನಡೆಯುವ ಅಗತ್ಯ ಇದೆ. ಮಹಾ ಸಂತನೊಬ್ಬನನ್ನು ಕಳೆದುಕೊಂಡು ದುಃಖದಲ್ಲಿರುವ ಅವರ ಅಸಂಖ್ಯಾತ ಭಕ್ತರಿಗೆ ಶ್ರೀಗಳ ಅಗಲಿಕೆಯ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಆ ದೇವರು ಕರುಣಿಸಲಿ.

- ಮುರುಗೇಶ್‌ ನಿರಾಣಿ, ಕೈಗಾರಿಕಾ ಸಚಿವ

ಪಂಚಭಾಷಾ ಪ್ರವೀಣರಾಗಿದ್ದರು

ನಾಡುಕಂಡ ಅಪರೂಪದ ಸಂತ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರಸ್ವಾಮೀಜಿ ಅವರು ಭೌತಿಕವಾಗಿ ಇನ್ನಿಲ್ಲವಾದುದು ಅತ್ಯಂತ ದುಃಖದ ಸಂಗತಿ. ಸ್ವಾಮೀಜಿಯವರು ಪಂಚಭಾಷಾ ಪ್ರವೀಣರಾಗಿದ್ದರು. ವಾಗ್ದೇವಿಯ ಆರಾಧಕರಾಗಿದ್ದರು. ಕಠಿಣವಾದ ತತ್ವಗಳನ್ನು ಜನ ಸಾಮಾನ್ಯರಿಗೆ ನಿಲುಕುವ ಭಾಷೆಯಲ್ಲಿ ಬೋಧಿಸಿ ಪಂಡಿತ ಪಾಮರರಿಗೂ ಜ್ಞಾನಸುಧೆಯನ್ನು ಉಣಬಡಿಸುತ್ತಿದ್ದರು. ತಮ್ಮ ನಡೆಗೂ ನುಡಿಗೂ ಅಂತರವಿರದಂತೆ ಬಾಳಿದ ನಿಜ ಸಂತರಾದ ಸಿದ್ದೇಶ್ವರ ಸ್ವಾಮೀಜಿ ಅವರು ಇನ್ನಿಲ್ಲವಾದುದರಿಂದ ಆಧ್ಯಾತ್ಮಿಕ ಲೋಕಕ್ಕೆ ಭರಿಸಲಾರದ ನಷ್ಟವುಂಟಾಗಿದೆ. ಪೂಜ್ಯರ ಅಗಲಿಕೆಯಿಂದ ದುಃಖ ತಪ್ತರಾದ ಭಕ್ತವೃಂದಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು, ಪೂಜ್ಯರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಆಶಿಸುತ್ತೇನೆ.

- ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

 

ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳ ನಿಧನರಾದ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು. ನಮ್ಮ ಶ್ರೀಗಳ ನಿಧನದಿಂದ ಇಡೀ ನಾಡೇ ಶೋಕ ಸಾಗರದಲ್ಲಿ ಮುಳುಗಿದೆ. ಅತ್ಯಂತ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ದೇಶವಲ್ಲದೇ ಜಾಗತಿಕವಾಗಿಯೂ ಹಲವಾರು ರಾಷ್ಟ್ರಗಳಲ್ಲಿ ಪ್ರವಚನಗಳನ್ನು ನೀಡಿದ್ದರು. ಕನ್ನಡವಲ್ಲದೇ ಇಂಗ್ಲಿಷ್‌ನಲ್ಲಿಯೂ ಅಪಾರ ಪಾಂಡಿತ್ಯ ಪಡೆದಿದ್ದರು. ಇವರೊಬ್ಬ ಈ ಶತಮಾನದ ಮಹಾನ್‌ ಸಂತ. ಕನ್ನಡ ನಾಡು ಕಂಡ ಅತೀ ಶ್ರೇಷ್ಠ ವಾಗ್ಮಿ. ತುಮಕೂರು ಸಿದ್ಧಗಂಗಾಮಠದ ಹಿಂದಿನ ಪೀಠಾಧಿಪತಿಯಾಗಿದ್ದ ಲಿಂ. ಶಿವಕುಮಾರ್‌ ಸ್ವಾಮೀಜಿಗಳಂತೆಯೇ ನಮ್ಮ ಹೆಮ್ಮೆಯ ಉ.ಕ ಭಾಗದಲ್ಲಿ ನಡೆದಾಡುವ ದೇವರು. ಶ್ರೀಗಳ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ನೀಡಲಿ. ಲಕ್ಷಾಂತರ ಭಕ್ತರ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.

- ಬಾಲಚಂದ್ರ ಜಾರಕಿಹೊಳಿ, ಶಾಸಕರು, ಕೆಎಂಎಫ್‌, ಅಧ್ಯಕ್ಷರು

ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಅಗಲಿಕೆಯಿಂದ ಅತೀವ ದುಃಖವಾಗಿದೆ. ಅಪರೂಪದ ಯೋಗಿಗಳಾಗಿದ್ದ ಸಿದ್ದೇಶ್ವರ ಶ್ರೀಗಳ ನಿಧನದಿಂದ ನಾಡಿನ ಆಧ್ಯಾತ್ಮಿಕ ಕೊಂಡಿಯೊಂದು ಕಳಚಿದಂತಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ.

-ಗುರುಸಿದ್ದ ಸ್ವಾಮೀಜಿ, ಕಾರಂಜಿಮಠ ಬೆಳಗಾವಿ

ನಡೆದಾಡುವ ದೇವರು ವಿಜಯಪುರ ಜ್ಞಾನ ಯೋಗಾಮಶ್ರಯದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದರೆಂಬ ವಿಚಾರ ತಿಳಿದು ನೋವಾಗಿದೆ. ಅವರ ಆತ್ಮಕ್ಕೆ ಪರಮಾತ್ಮ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸೋಣ.

- ಲಕ್ಷ್ಮಿ ಹೆಬ್ಬಾಳಕರ, ಬೆಳಗಾವಿ ಗ್ರಾಮೀಣ ಶಾಸಕಿ.

Follow Us:
Download App:
  • android
  • ios