ಅದಮಾರು ಕಿರಿಯ ಶ್ರೀ ಈಶಪ್ರಿಯರಿಂದ ಸರ್ವಜ್ಞ ಪೀಠಾರೋಹಣ

ಅದಮಾರು ಮಠದ ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥ ಶ್ರೀಪಾದರು ಈ ಬಾರಿ ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ ಎಂದು ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಘೋಷಿಸಿದ್ದಾರೆ. ಜ.8ರಂದು ನಡೆಯುವ ಪುರಪ್ರವೇಶದ ಸಂದರ್ಭದಲ್ಲಿ ತಾನು ಮೆರವಣಿಗೆಯಲ್ಲಿ ಕಾಲ್ನಡಿಗೆಯ ಮೂಲಕ ರಥಬೀದಿಗೆ ತೆರಳಬೇಕು ಎಂದುಕೊಂಡಿದ್ದೇನೆ ಎಂದು ಈಶಪ್ರಿಯ ತೀರ್ಥ ಶ್ರೀಪಾದರು ಹೇಳೀದ್ದಾರೆ.

Sri Eeshapriya Teertha to ascend peetha in pejawara mutt

ಉಡುಪಿ(ಜ.07): ಅದಮಾರು ಮಠದ ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥ ಶ್ರೀಪಾದರು ಈ ಬಾರಿ ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ ಎಂದು ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಘೋಷಿಸಿದ್ದಾರೆ. ಸೋಮವಾರ ಇಲ್ಲಿನ ಅದಮಾರು ಮೂಲಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಿರಿಯ ಶ್ರೀಗಳು ಈ ಬಗ್ಗೆ ವಿವರಗಳನ್ನು ನೀಡಿದ್ದಾರೆ.

ಜ.18ರಂದು ನಡೆಯಲಿರುವ ಪರ್ಯಾಯೋತ್ಸವದಲ್ಲಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರವನ್ನು ಮತ್ತು ಕೃಷ್ಣಮಠದ ಆಡಳಿತದ ಅಧಿಕಾರ ಸ್ವೀಕರಿಸಲಿದ್ದಾರೆ. ತಾವು ಅದಮಾರು ಮಠದ ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ನೋಡಿಕೊಳ್ಳಲಿದ್ದು, ಕೃಷ್ಣನ ಪೂಜೆ, ಪ್ರವಚನಗಳಲ್ಲಿ ಭಾಗವಹಿಸುವುದಾಗಿ ಪ್ರಕಟಿಸಿದ್ದಾರೆ.

ಪೇಜಾವರ ಶ್ರೀ: ಈಡೇರಿದ 2 ಆಸೆಗಳು, ಈಡೇರದ 3 ಕನಸುಗಳು

ತಮ್ಮ ಗುರುಗಳಾದ ಶ್ರೀ ವಿಭುದೇಶ ತೀರ್ಥ ಶ್ರೀಪಾದರು 1956 - 58ರಲ್ಲಿ ಮತ್ತು 1972 - 7ರಲ್ಲಿ ಪರ್ಯಾಯೋತ್ಸವಗಳನ್ನು ನಡೆಸಿ ನಂತರ ಅಧಿಕಾರವನ್ನು ತಮಗೆ ಬಿಟ್ಟುಕೊಟ್ಟಿದ್ದರು. ನಂತರ ತಾವು 1988- 90ರಲ್ಲಿ ಮತ್ತು 2004- 06ರಲ್ಲಿ ಪರ್ಯಾಯೋತ್ಸವವನ್ನು ನಡೆಸಿದ್ದೇವೆ. ಗುರುಗಳ ದಾರಿಯನ್ನೇ ತಾವು ಅನುಸರಿಸುತ್ತಿದ್ದು, 2 ಪರ್ಯಾಯೋತ್ಸವಗಳ ನಂತರ ಶಿಷ್ಯನಿಗೆ ಅಧಿಕಾರ ಬಿಟ್ಟು ಕೊಡುತ್ತಿದ್ದೇವೆ ಎಂದಿದ್ದಾರೆ.

ಆಜ್ಞೆಯ ಬಳಿಕ ಒಪ್ಪಿಗೆ:

ಮೊದಮೊದಲು ಕಿರಿಯ ಶ್ರೀಗಳು ಪರ್ಯಾಯ ಪೀಠಾರೋಹಣಕ್ಕೆ ಒಪ್ಪಲೇ ಇಲ್ಲ, ಕೊನೆಗೆ ತಾವು ಆಜ್ಞೆ ಮಾಡಬೇಕಾಯಿತು, ಈಗ ಅಪ್ಪಣೆ ಎಂದು ಕಿರಿಯ ಶ್ರೀಗಳು ಒಪ್ಪಿದ್ದಾರೆ ಎಂದರು. ಕಿರಿಯ ಶ್ರೀಗಳು ಪರ್ಯಾಯದ ಸಂದರ್ಭ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಸರಿಯಾಗಿಯೇ ಇರುತ್ತವೆ ಎಂಬ ಭರವಸೆ ತಮಗಿದೆ. ಅದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹಿರಿಯ ಶ್ರೀಗಳು ಹೇಳಿದ್ದಾರೆ.

ತಮ್ಮ ಗುರು ಶ್ರೀ ವಿಭುದೇಶ ತೀರ್ಥರಂತೆ ತಾವು ಕೂಡ ಶಿಷ್ಯನ ಪರ್ಯಾಯೋತ್ಸವದ ಮೆರವಣಿಗೆಯಲ್ಲಾಗಲಿ ಅಥವಾ ದರ್ಬಾರ್‌ನಲ್ಲಾಗಲಿ ಭಾಗವಹಿಸುವುದಿಲ್ಲ ಎಂದು ಹಿರಿಯ ಶ್ರೀಗಳು ಸ್ಪಷ್ಟಪಡಿಸಿದರು.

ಊಹಾಪೋಹ ಸಲ್ಲದು:

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಮತ್ತು ಅದಮಾರು ಪರ್ಯಾಯೋತ್ಸವದ ಬಗ್ಗೆ ನಾನಾ ರೀತಿಯ ಊಹಪೋಹಗಳು ಹರಿದಾಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, ಪೀಠ ಮತ್ತು ಪರ್ಯಾಯದ ಬಗ್ಗೆ ಜನರು ಸರಿಯಾಗಿ ತಿಳಿದು ಮಾತನಾಡಬೇಕು, ತಮಗೆ ಸಂಬಂಧ ಇಲ್ಲದ ವಿಷಯಗಳ ಬಗ್ಗೆ ಮಾತನಾಡುವುದು ಸಲ್ಲ ಎಂದರು.

ಶಾಸ್ತ್ರಬದ್ಧ ಪರ್ಯಾಯ:

ಸಾಧಕನಿಗೆ ಅಧಿಕಾರ ಬಾಧಕವಾಗುತ್ತದೆ, ಆದ್ದರಿಂದ ಪರ್ಯಾಯೋತ್ಸವದ ಅಧಿಕಾರ ತಮಗೆ ಈಗಲೇ ಬೇಡ ಎಂದಿದ್ದೆವು. ಆದರೆ ಗುರುಗಳ ಆಜ್ಞೆಯನ್ನು ಒಪ್ಪಿ ಪರ್ಯಾಯ ಪೀಠಾರೋಹಣ ಮಾಡುತಿದ್ದೇವೆ ಎಂದು ಕಿರಿಯ ಶ್ರೀ ಈಶಪ್ರಿಯ ತೀರ್ಥರು ಹೇಳಿದ್ದಾರೆ.

ಪರ್ಯಾಯೋತ್ಸವದ 2 ವರ್ಷಗಳ ಅವಧಿಯಲ್ಲಿ ಯಾವುದೇ ಯೋಜನೆಗಳನ್ನು ಈಗ ಹಾಕಿಕೊಂಡಿಲ್ಲ, ಸಂದರ್ಭಾನುಸಾರ ಅವುಗಳನ್ನು ನಡೆಸಲಾಗುತ್ತದೆ. ಆದರೆ ಎಲ್ಲವೂ ಮಠದ ಶಾಸ್ತ್ರ ಸಂಪ್ರದಾಯಗಳಿಗನುಗುಣವಾಗಿರುತ್ತದೆ ಎಂದವರು ಹೇಳಿದ್ದಾರೆ.

ಕಾಲ್ನಡಿಗೆಯಲ್ಲಿ ಪುರಪ್ರವೇಶ?

ಜ.8ರಂದು ನಡೆಯುವ ಪುರಪ್ರವೇಶದ ಸಂದರ್ಭದಲ್ಲಿ ತಾನು ಮೆರವಣಿಗೆಯಲ್ಲಿ ಕಾಲ್ನಡಿಗೆಯ ಮೂಲಕ ರಥಬೀದಿಗೆ ತೆರಳಬೇಕು ಎಂದುಕೊಂಡಿದ್ದೇನೆ. ಆದರೆ ಭಕ್ತರು ಅಲಂಕೃತ ವಾಹನದಲ್ಲಿ ಕುಳಿತು ಮೆರವಣಿಗೆಯಲ್ಲಿ ಬರಬೇಕು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಇನ್ನೂ ಇತ್ಯರ್ಥವಾಗಿಲ್ಲ ಎಂದು ಶ್ರೀಈಶಪ್ರಿಯ ತೀರ್ಥರು ಹೇಳಿದ್ದಾರೆ.

Latest Videos
Follow Us:
Download App:
  • android
  • ios