Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಇಂದಿ​ನಿಂದ ವಲಸೆ ಕಾರ್ಮಿಕರಿಗೆ ವಿಶೇಷ ರೈಲು..!

ವಲಸೆ ಕಾರ್ಮಿಕರನ್ನು ಕಳಿಸಲು ನಾವು ಸಿದ್ಧರಿದ್ದೇವೆ| ನಮ್ಮ ಪತ್ರಕ್ಕೆ ಆ ರಾಜ್ಯಗಳೇ ಉತ್ತರ ನೀಡಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ| ಮೇ 15ರ ವರೆಗೂ 7 ರಾಜ್ಯ​ಗ​ಳಿಗೆ ನಿತ್ಯ 12 ರೈಲಿಗೆ ನಿರ್ಧಾರ| ಬಿಹಾ​ರ​ದಿಂದ ಮಾತ್ರ ಕಾರ್ಮಿ​ಕ​ರ ಕರೆ​ಸಿ​ಕೊ​ಳ್ಳಲು ಒಪ್ಪಿ​ಗೆ|

Special Train from the Karnataka for Migrant Workers
Author
Bengaluru, First Published May 8, 2020, 8:50 AM IST

ಬೆಂಗಳೂರು(ಮೇ.08): ಕಾರ್ಮಿಕರನ್ನು ಕಳಿಸಲು ಆಯಾ ರಾಜ್ಯಗಳು ಒಪ್ಪಿಗೆ ನೀಡುವುದು ತಡವಾದ ಕಾರಣ ವಲಸೆ ಕಾರ್ಮಿಕರನ್ನು ಕಳಿಸಲಾಗಲಿಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯ ಸರ್ಕಾರ, ಮೇ 8ರಿಂದ 15ರ ವರೆಗೆ ಏಳು ರಾಜ್ಯಗಳಿಗೆ ಪ್ರತಿ ದಿನ ರೈಲು ಸೌಲಭ್ಯ ಕಲ್ಪಿಸಲು ಸಿದ್ಧವಾಗಿದ್ದರೂ ಸಹ ಬಿಹಾರ ಮಾತ್ರ ಕಾರ್ಮಿಕರನ್ನು ಕರೆಸಿಕೊಳ್ಳಲು ಒಪ್ಪಿಗೆ ನೀಡಿದೆ ಎಂದು ಹೇಳಿದೆ.

ಶುಕ್ರವಾರದಿಂದ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್‌ ರಾಜ್ಯಗಳಿಗೆ ಪ್ರತಿ ದಿನ 2 ರೈಲು ಹಾಗೂ ಬಿಹಾರ, ತ್ರಿಪುರ ಮತ್ತು ಮಣಿಪುರಕ್ಕೆ ತಲಾ ಒಂದು ರೈಲು ವ್ಯವಸ್ಥೆಯನ್ನು ಮಾಡಿದೆ. ವೈಯಕ್ತಿಕ ಅಂತರ ಕಾಪಾಡಲು ಪ್ರತಿ ರೈಲಿನಲ್ಲಿ 1200 ಕಾರ್ಮಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಿದೆ. ಈ ಬಗ್ಗೆ ಒಪ್ಪಿಗೆ ನೀಡುವಂತೆ 7 ರಾಜ್ಯಗಳಿಗೆ ಮೇ 3 ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದರು. ಈ ಬಗ್ಗೆ ಉತ್ತರ ಬಾರದ ಹಿನ್ನೆಲೆಯಲ್ಲಿ ಪುನಃ ಗುರುವಾರ (ಮೇ 7) ಪತ್ರ ಬರೆಯಲಾಗಿದೆ.

ಕೊರೋನಾ ಸೋಂಕು ಪತ್ತೆಗಾಗಿ ಮನೆ ಮನೆ ಆರೋಗ್ಯ ಸಮೀಕ್ಷೆ ಆರಂಭ

ರಾಜ್ಯ ಸರ್ಕಾರ ಮೊದಲು ಬರೆದ ಪತ್ರಕ್ಕೆ ಬಿಹಾರ ಸರ್ಕಾರ ಮಾತ್ರ ಉತ್ತರಿಸಿದ್ದು, ಏಕಾಏಕಿ ಹೆಚ್ಚು ಕಾರ್ಮಿಕರನ್ನು ಕಳಿಸಿದರೆ ನಿಭಾಯಿಸಲು ಕಷ್ಟವಾಗುತ್ತದೆ ಹಾಗೂ ಎರಡು ರೈಲುಗಳ ಬದಲು ಒಂದು ರೈಲಿನಲ್ಲಿ ಮಾತ್ರ ಕಾರ್ಮಿಕರನ್ನು ಕಳಿಸುವಂತೆ ಮನವಿ ಮಾಡಿದೆ. ಹೀಗಾಗಿ ಶುಕ್ರವಾರ ಬೆಂಗಳೂರಿನಿಂದ ಬಿಹಾರ ರಾಜ್ಯಕ್ಕೆ ಒಂದು ರೈಲು ಮಾತ್ರ ತೆರಳಲಿದೆ. ಆಯಾ ರಾಜ್ಯಗಳು ಒಪ್ಪಿಗೆ ನೀಡಿದ ನಂತರವೇ ಇತರ ರಾಜ್ಯಗಳಿಗೆ ರೈಲು ಹೊರಡಲಿದೆ ಎಂದು ತಿಳಿಸಿದೆ.

ಆರೋಪ ಅಲ್ಲಗಳೆದ ಸರ್ಕಾರ

ಬುಧವಾರ ಹೊರ ರಾಜ್ಯಕ್ಕೆ ಹೊರಡಬೇಕಿದ್ದ ಮೂರು ರೈಲು ಸೇವೆಯನ್ನು ರದ್ದುಗೊಳಿಸಿ ಮಂಗಳವಾರ ಹೊರಡಿಸಿದ್ದ ಆದೇಶದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್‌ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು, ಮಾನವ ಹಕ್ಕುಗಳ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಊರಿಗೆ ಹೋಗಲು ಮುಂದಾದ ಕಾರ್ಮಿಕರಿಗೆ ರೈಲು ಸೇವೆ ರದ್ದು ಮಾಡಿರುವುದು ಜೀತಪದ್ಧತಿಗೆ ಸಮನಾಗಿದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಟೀಕೆ ಮಾಡಿದ್ದವು. ಇದಕ್ಕೆ ಉತ್ತರಿಸಿರುವ ಸರ್ಕಾರ, ನಾವು ಕಳಿಸಲು ಸಿದ್ಧರಿದ್ದೇವೆ. ಆದರೆ, ಒಂದೇ ಬಾರಿಗೆ ಕ್ವಾರಂಟೈನ್‌ ಮಾಡಲು ಕಷ್ಟಎಂದು ಆ ರಾಜ್ಯಗಳೇ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಹೇಳಿದೆ.

ಕಾಂಗ್ರೆಸ್‌ ರಾಜಕೀಯ

ವಲಸೆ ಕಾರ್ಮಿಕರನ್ನು ರಾಜ್ಯದಲ್ಲಿ ಬಲವಂತವಾಗಿ ಇಟ್ಟುಕೊಂಡಿಲ್ಲ. ಅನಗತ್ಯವಾಗಿ ಕಾಂಗ್ರೆಸ್‌ ವಲಸೆ ಕಾರ್ಮಿಕರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಅಲ್ಲಿನ ಸರ್ಕಾರಗಳಿಂದ ಅನುಮತಿ ಬೇಕು. ಅದು ಇನ್ನೂ ಸಿಕ್ಕಿಲ್ಲ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. 

ಬಿಹಾರವೇ ಬೇಡ ಅಂತು

ಬಿಹಾರ ಸರ್ಕಾರ ಅಷ್ಟೂಜನರನ್ನು ಒಂದೇ ಬಾರಿ ಕಳಿಸಬೇಡಿ ಎಂದು ತಿಳಿಸಿದೆ. ದಿನಕ್ಕೆ ಒಂದು ರೈಲಿನಲ್ಲಿ ಮಾತ್ರ ಕಳಿಸಿದರೆ ಕಾರ್ಮಿಕರನ್ನು ಕ್ವಾರೆಂಟೈನ್‌ನಲ್ಲಿಡಲು ವ್ಯವಸ್ಥೆ ಮಾಡಬಹುದು ಎಂದು ಹೇಳಿದೆ. ಅದರಂತೆ ಕಳಿಸುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. 

ಹೈಕೋರ್ಟ್‌ಗೂ ಸರ್ಕಾರದ ಸ್ಪಷ್ಟನೆ

ವಲಸೆ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳಿಸದೆ ಸರ್ಕಾರ ತಡೆಹಿಡಿದಿದೆ ಎಂದು ಆಕ್ಷೇಪಿಸಿ ಎಐಟಿಸಿಯು ಸಂಘಟನೆ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಅದಕ್ಕೆ ಗುರುವಾರ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ, ನಿಮ್ಮ ರಾಜ್ಯದಿಂದ ಬಂದ ಕಾರ್ಮಿಕರನ್ನು ವಾಪಸ್‌ ಕಳುಹಿಸುತ್ತೇವೆ ಎಂದು ಆಯಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅಲ್ಲಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಪ್ರತಿಕ್ರಿಯೆ ಬಂದಕೂಡಲೇ ಕಳುಹಿಸುತ್ತೇವೆ ಎಂದು ತಿಳಿಸಿದೆ.
 

Follow Us:
Download App:
  • android
  • ios