ಚಿಕ್ಕಮಗಳೂರು (ಡಿ.04): ಷಷ್ಠಿಯ ದಿನದಂದು ಸುಬ್ರಹ್ಮಣ್ಯಸ್ವಾಮಿ ದರ್ಶನಕ್ಕೆ ವಿಶೇಷವಾದ ನಾಗರ ಹಾವೊಂದು ಬಂದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ಮೂಡಿಗೆರೆ ತಾಲೂಕಿನ ಅಗ್ರಹಾರದ ಆದಿಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಷಷ್ಠಿಪೂಜೆ ನಡೆಯುತ್ತಿತ್ತು. ಸುಬ್ರಹ್ಮಣ್ಯನ ದರ್ಶನಕ್ಕೆ ವಿಭೂತಿಧರಿಸಿಕೊಂಡಂತೆ ಇದ್ದ ನಾಗರಹಾವನ್ನು ಕಂಡು ಭಕ್ತರು ‘ಸುಬ್ರಹ್ಮಣ್ಯಸ್ವಾಮಿಗೆ ಉಘೇ.. ಉಘೇ’ ಎಂದಿದ್ದಾರೆ. ಷಷ್ಠಿಯ ದಿನದಂದು ಪ್ರತಿ ವರ್ಷವೂ ಇಲ್ಲಿಗೆ ಹಾವು ಬರುತ್ತಿತ್ತು. ಆದರೆ ಈ ವರ್ಷ ಬಂದ ನಾಗರಹಾವಿನ ಹೆಡೆಯಲ್ಲಿ ವಿಭೂತಿಯೂ ಇತ್ತು. ಇಂಥ ನಾಗರ ಕಂಡ ಭಕ್ತರು ತಾವೇ ಧನ್ಯರು ಅಂತ ಅಭಿಪ್ರಾಯಪಟ್ಟಿದ್ದಾರೆ.

ಹಾವು ತುಂಬಾ ದೊಡ್ಡದ್ದೇನಲ್ಲ. ಚಿಕ್ಕದ್ದೂ ಅಲ್ಲ. ಮಿಂಚಿನ ವೇಗದಲ್ಲಿ ಸಂಚರಿಸುತ್ತಿದ್ದ ಹಾವನ್ನ ಕಂಡು ಜನರು ಇದು ‘ದೈವದ ಹಾವೇ’ ಎಂದು ಕೈ ಮುಗಿದಿದ್ದಾರೆ. ಹಾವಿನ ಹೆಡೆಗೆ ವಿಭೂತಿ ಹಚ್ಚುವ ಧೈರ್ಯವನ್ನಂತೂ ಯಾರು ಮಾಡಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಈ ಹಾವಿನ ಹೆಡೆಯಲ್ಲಿ ಮೂರು ಬೆರಳಿನ ವಿಭೂತಿ ಆಕಾರ ಸ್ಪಷ್ಟವಾಗಿ ಕಾಣುತ್ತಿದ್ದು ಜನರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿತ್ತು. ಈ ಕುರಿತ ಮಾಹಿತಿ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದೆ ಎನ್ನಲಾಗಿದೆ.