ಬೆಂಗಳೂರು(ಫೆ.22): ಎಲ್ಲೆಲ್ಲೂ ಮೊಳಗಿದ ಓಂಕಾರ ನಾದ, ವಿಶೇಷ ಪೂಜೆ, ಅಭಿಷೇಕ, ಹೋಮಗಳು, ಶಿವನ ಸ್ಮರಣೆ, ಶಿವನ ಸಹಸ್ರನಾಮ ಪಠಣ, ಜಾಗರಣೆ ಹಾಗೂ ಸಂಗೀತೋತ್ಸವದ ಸಂಭ್ರಮಗಳೊಂದಿಗೆ ನಗರದ ವಿವಿಧ ಕಡೆ ‘ಮಹಾಶಿವರಾತ್ರಿ ಹಬ್ಬ’ವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ನಗರದಲ್ಲಿರುವ ಈಶ್ವರ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಶಿವನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಗಣಪತಿ ಹೋಮ, ರುದ್ರಹೋಮಗಳು ನಡೆದವು. ಶಿವನ ದೇವಾಲಯಗಳಲ್ಲಿ ವಿಭೂತಿ ಹಾಗೂ ರುದ್ರಾಕ್ಷಿ ಮಾಲೆ, ಹೂಗಳು, ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಿಂದ ಶಿವಲಿಂಗವನ್ನು ಅಲಂಕರಿಸಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಕ್ತಾದಿಗಳು ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು. ಇಡೀ ದಿನ ಉಪವಾಸದಿಂದ ಇದ್ದು, ಶುಚಿರ್ಭೂತರಾಗಿ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಜಾಗರಣೆ ಮಾಡುವ ಮೂಲಕ ಶಿವನ ಸ್ಮರಣೆ ಮಾಡಿದರು. ಶಿವನ ದೇವಾಲಯಗಳಲ್ಲಿ ಶಿವಭಕ್ತರ ದಂಡೇ ನೆರೆದಿತ್ತು. ಜನರು ಶಿವದರ್ಶನ ಮಾಡಿ ಕೃತಾರ್ಥರಾದರು.

ನಗರದ ಗವಿಪುರದ ಗವಿಗಂಗಾಧರೇಶ್ವರ ದೇವಾಲಯ, ಕಾಡು ಮಲ್ಲೇಶ್ವರ ಮಲ್ಲಿಕಾರ್ಜುನ ಸ್ವಾಮಿ, ಕೆಂಗೇರಿ ಉಪನಗರದ ಕಾಳಿಕಾಂಬ ದೇವಸ್ಥಾನ, ಗುಟ್ಟಹಳ್ಳಿಯ ಪಂಚಲಿಂಗೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಸೋಮೇಶ್ವರ, ಮುರುಗೇಶಪಾಳ್ಯದ ಶಿವ ದೇವಾಲಯ, ಆನಂದರಾವ್‌ ವೃತ್ತದ ಶಿವಸಾಯಿ ದೇವಾಲಯ, ಆಂಧ್ರಹಳ್ಳಿಯ ಮುಖ್ಯರಸ್ತೆಯ ಕಾಳಿಕಾನಗರದ ಮಂಜುನಾಥೇಶ್ವರ ದೇವಾಲಯ, ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಇರುವ ಕಾಶಿ ವಿಶ್ವನಾಥಸ್ವಾಮಿ, ಕಾವೇರಿ ನಗರದ ಕುರುಬರಹಳ್ಳಿಯ ಬನಶಂಕರಿ ದೇವಾಲಯ ಸೇರದಂತೆ ಹಲವು ದೇವಾಲಯಗಳಲ್ಲಿ ಇಡೀ ದಿನ ಧಾರ್ಮಿಕ ಕಾರ್ಯಗಳು ನೆರವೇರಿದವು.

ದೇವಾಲಯಗಳಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆದವು. ದೇವಾಲಯಗಳಿಗೆ ಹೆಚ್ಚು ಭಕ್ತರು ಬಂದ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಕೆಲವು ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಸಹ ವಿತರಿಸಲಾಯಿತು.

ಸಂಘ ಸಂಸ್ಥೆಗಳಿಂದ ಮಹಾಶಿವರಾತ್ರಿ ಆಚರಣೆ

ಕೆಂಗೇರಿಯ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಓಂಕಾರ ಆಶ್ರಮದ ಶ್ರೀದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಓಂಕಾರೇಶ್ವರ ಜ್ಯೋತಿರ್ಲಿಂಗ ಗರ್ಭಗುಡಿ ಪ್ರವೇಶಿಸಿ ದರ್ಶನ ಮಾಡಿದರು. ಬಸವೇಶ್ವರನಗರದ ಗಣಪತಿ ಸೇವಾ ಟ್ರಸ್ಟ್‌ ಮಹಾಶಿವರಾತ್ರಿ ಮತ್ತು ರುದ್ರಹೋಮ ಏರ್ಪಡಿಸಿತ್ತು. ಮಲ್ಲೇಶ್ವರದ 5ನೇ ಅಡ್ಡರಸ್ತೆಯಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘದಿಂದ ಹರಿಹರಪುರ ಮಠದ ಶ್ರೀಗಳು ಅನುಗ್ರಹಿಸಿರುವ ಮೃತ್ತಿಕಾ ಶಿವಲಿಂಗವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶಿವರಾತ್ರಿ ಹಬ್ಬದಂದು ನಾಟಕ, ಭಜನೆ, ಸಂಗೀತ, ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.