ರಾಯಚೂರು(ಜೂ.21): ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಇಂದು(ಭಾನು​ವಾರ) ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಹೋಮ ನಡೆಯುತ್ತಿದೆ. 

ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ನೇತೃತ್ವದಲ್ಲಿ ಮಠದ ಆವರಣದಲ್ಲಿರುವ ಯಜ್ಞಮಂಟಪದಲ್ಲಿ ಸೂರ್ಯಗ್ರಹಣ ನಿಮಿತ್ತ ವಿಶೇಷ ಹೋಮ ನಡೆಸಲಾಗುತ್ತಿದೆ. ಇದರಲ್ಲಿ ಶ್ರೀಮಠದ ಪಂಡಿತರು, ವಿದ್ವಾಂಸರು, ಸಿಬ್ಬಂದಿ ಮಾತ್ರ ಭಾಗವಹಿಸಿದ್ದಾರೆ. ಒಂದೂವರೆ ಗಂಟೆ ಕಾಲ ಹೋಮ ಜರುಗಲಿದೆ. ಮಧ್ಯಾಹ್ನ ಸೂರ್ಯಗ್ರಹಣ ಪೂರ್ಣಗೊಂಡ ಬಳಿಕ ಮಠವನ್ನು ಸ್ವಚ್ಛಗೊಳಿಸಿ ರಾಯರಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ.

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ (ಮಾ.20) ರಂದು ಶ್ರೀಮಠವನ್ನು ಬಂದ್‌ ಮಾಡಿ, ಭಕ್ತರು ಬಾರದಂತೆ ನಿರ್ಬಂಧನೆ ಏರಲಾಗಿತ್ತು. ಕೇಂದ್ರ ಸರ್ಕಾರದ ಸೂಚನೆಯಂತೆ ಜೂ.8ರಿಂದ ಮಠ ಆರಂಭವಾಗಬೇಕಾಗಿತ್ತು. ಆದರೆ ವೈರಸ್‌ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಠದಲ್ಲಿ ಮತ್ತಷ್ಟು ಮುಂಜಾಗೃತ ಕ್ರಮ ವಹಿಸುವ ನಿಟ್ಟಿನಲ್ಲಿ ಭಕ್ತರ ಆಗಮನಕ್ಕೆ ಅವಕಾಶ ನೀಡಿಲ್ಲ. ಆದರೆ, ಮಠದ ಅಧಿಕಾರಿ, ಸಿಬ್ಬಂದಿ ಹಾಗೂ ಸ್ಥಳೀಯರು ರಾಯರ ದರ್ಶನ ಪಡೆಯುತ್ತಿದ್ದಾರೆ. ಈ ಸಮಯದಲ್ಲಿಯೇ ಸೂರ್ಯಗ್ರಹಣ ಬಂದಿದ್ದು, ಭಕ್ತರಿಗೆ ಅವಕಾಶವಿಲ್ಲದ ಕಾರಣಕ್ಕೆ ಶ್ರೀಮಠದ ಪಂಡಿತರು, ವಿದ್ವಾಂಸರು ಹಾಗೂ ಸಿಬ್ಬಂದಿ ಗ್ರಹಣದ ವಿಶೇಷ ಪೂಜೆ ನೆರವೇರಿಸಲಿದ್ದಾರೆ.

ಸೂರ್ಯಗ್ರಹಣ ಶಾಂತಿಗಾಗಿ ವಿಶೇಷ ಹೋಮ: ಇಲ್ಲಿವೆ ಫೋಟೋಸ್

ಸೂಗೂರೇಶ್ವರ ದೇವಸ್ಥಾನ ವಿಶೇಷ ಪೂಜೆ

ಗ್ರಹಣಗಳ ಸಮಯದಲ್ಲಿ ಧಾರ್ಮಿಕ ಕೇಂದ್ರಗಳು, ಮಠಮಾನ್ಯಗಳು, ದೇವಸ್ಥಾನಗಳಲ್ಲಿ ಪೂಜೆ, ದರ್ಶನಕ್ಕೆ ಭಕ್ತರಿಗೆ ಪ್ರವೇಶಕ್ಕೆ ಇರು​ವುದಿಲ್ಲ. ಆದರೆ ರಾಯಚೂರಿನಲ್ಲಿ ಯಾವುದೇ ಗ್ರಹಣವಿದ್ದರು ದೇಷವಿಲ್ಲದಂತಹ ದೇವಸ್ಥಾನವಿದೆ.
ತಾಲೂಕಿನ ದೇವಸುಗೂರು ಗ್ರಾಮದಲ್ಲಿರುವ ಸೂಗೂರೇಶ್ವರ ದೇವಸ್ಥಾನವೇ ಗ್ರಹಣ ದೋಷವಿಲ್ಲದ ಗುಡಿಯಾಗಿದೆ. ತೆಲಂಗಾಣ ಗಡಿಭಾಗದ ಸಮೀಪದಲ್ಲಿ ಹರಿದು ಹೋಗಿರುವ ಕೃಷ್ಣಾ ನದಿ ತಟದಲ್ಲಿ ಸೂಗೂರೇಶ್ವರ ದೇವಸ್ಥಾನವಿದೆ. ಸುಮಾರು 800 ವರ್ಷಗಳ ಹಳೆ ದೇವಸ್ಥಾನವು ಹಲವು ವಿಶೇಷತೆ ಹೊಂದಿದೆ. ಹಿಂದೂ ಧರ್ಮಶಾಸ್ತ್ರ, ವಾಸ್ತು ಪ್ರಕಾರ ದೇವಸ್ಥಾನ ನಿರ್ಮಿಸಲಾಗಿದೆ. ಯಾವುದೇ ಗ್ರಹಣವಿದ್ದರೂ ಗುಡಿಯಲ್ಲಿರುವ ಸೂಗೂರೇಶ್ವರ ದೇವರಿಗೆ ನಿತ್ಯ ನಡೆಯುವ ಪೂಜಾ-ಕೈಂಕಾರ್ಯಗಳು ಜರುಗುತ್ತಲೇ ಇರುತ್ತವೆ.

ಯಾಕೆ ದೋಷವಿಲ್ಲ:

ಸೂಗೂರೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾಗಿದ್ದು. ಶಿಲ್ಪಕಲೆ, ವಾಸ್ತುಶಾಸ್ತ್ರ ಅಳವಡಿಸಿಕೊಂಡು ದೇವಸ್ಥಾನ ನಿರ್ಮಿಸಲಾಗಿದೆ. ಇಲ್ಲಿಯ ಗೋಪುರ, ಪ್ರವೇಶ ದ್ವಾರ, ಹಾಲ್ಗಂಬ, ಪ್ರದಕ್ಷಿಣೆ ಮಾರ್ಗ, ಗರ್ಭಗುಡಿ, ಸುತ್ತಲು ಮಂಟಪ ನಿರ್ಮಿಸಲಾಗಿದೆ. ದೇವಸ್ಥಾನದಲ್ಲಿ ಸೂರ್ಯಚಂದ್ರನ ನಡುವೆ ಶಿವನಿರುವಂತಹ ಹಾಲ್ಗಂಬ ಪ್ರತಿಷ್ಠಾಪಿಸಿರುವುದರಿಂದ ಗ್ರಹಣದ ದೋಷ ಗುಡಿಗೆ ಅಂಟುವುದಿಲ್ಲ. ಆದ್ದರಿಂದ ಎಂದಿನಂತೆ ಪೂಜೆ ನಡೆಯುತ್ತ​ದೆ.
ಭಾನುವಾರ ಸೂರ್ಯಗ್ರಹಣವಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಕೊರೋನಾ ಭೀತಿ ನಡುವೆಯೇ ಕಳೆದ ಜೂ.8ರಿಂದ ಪ್ರಾರಂಭಗೊಂಡಿರುವ ಸೂಗೂರೇಶ್ವರ ದೇವಸ್ಥಾನಕ್ಕೆ ಭಕ್ತರು ಬರುತ್ತಿದ್ದಾರೆ. ಭಾನುವಾರ ಸೂರ್ಯಗ್ರಹಣ ಹಾಗೂ ರಜೆ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು, ಕೊರೋನಾ ನಿಯಮಗಳನ್ನು ಪಾಲಿಸಿ ಸೂಗೂರೇಶ್ವರ ದರ್ಶನ ಪಡೆದುಕೊಳ್ಳಲು ಅನುಕೂಲವಾಗುವಂತೆ ದೇವಸ್ಥಾನದಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಯಚೂರಿನಲ್ಲಿ 3 ಗಂಟೆ 27 ನಿಮಿಷ ಗ್ರಹಣ

ಜಿಲ್ಲೆಯಲ್ಲಿ ಸೂರ್ಯಗ್ರಹಣವು ಭಾನುವಾರ ಬೆಳಗ್ಗೆ 10.11 ನಿಮಿಷಕ್ಕೆ ಪ್ರಾರಂಭಗೊಂಡು ಮಧ್ಯಾಹ್ನ 1.38 ನಿಮಿಷಕ್ಕೆ ಮುಕ್ತಾಯವಾಗಿದೆ. ಒಟ್ಟು 3 ಗಂಟೆ 27 ನಿಮಿಷಗಳ ಕಾಲ ಸಂಭವಿಸಲಿರುವ ಗ್ರಹಣದಲ್ಲಿ 11 ಗಂಟೆ 50 ನಿಮಿಷವು ಗ್ರಹಣದ ಮಧ್ಯ ಕಾಲವಾಗಿರುತ್ತದೆ. 
#NewsIn100Seconds | ಈ ಕ್ಷಣದ ಪ್ರಮುಖ ಸುದ್ದಿಗಳು

"