ಮಹಾಮಳೆಗೆ ತೊಂದರೆ ಆಗದಂತೆ ಈ ಬಾರಿ 2 ಸಾವಿರ ಕೋಟಿಯಲ್ಲಿ ರಾಜಕಾಲುವೆ ಅಭಿವೃದ್ಧಿ, 3 ವಿವಿಧ ಮಾದರಿ ಚರಂಡಿ: ಬೊಮ್ಮಾಯಿ

ಬೆಂಗಳೂರು(ಫೆ.08): ನಗರದ ರಾಜಕಾಲುವೆ ಪುನರ್‌ ನಿರ್ಮಾಣಕ್ಕೆ ಐಐಎಸ್ಸಿ ಸೇರಿದಂತೆ ಇತರೆ ವರದಿಗಳನ್ನು ಆಧಾರಿಸಿ ವಿಶೇಷ ಮಾಸ್ಟರ್‌ ಪ್ಲಾನ್‌ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣಾಗೊಳಿಸಿ ಮಾತನಾಡಿದ ಅವರು, ಹೊಸ ಮಾದರಿ ರಸ್ತೆ, ಮೂರು ವಿವಿಧ ಮಾದರಿಯ ಚರಂಡಿ ವ್ಯವಸ್ಥೆ ಸುಧಾರಣೆ ಮಾಡಿ ಬೆಂಗಳೂರು ನಗರದ ನೀರು ಹರಿದು ಹೊರಗೆ ಹೋಗುವಂತೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಬೇಕಾದ ಅನುದಾನ ನೀಡಲಾಗುತ್ತಿದೆ. ಕೆಲವು ದೊಡ್ಡ ಅಡೆತಡೆಗಳನ್ನು ನಿವಾರಿಸಲು ಹಲವು ತಾಂತ್ರಿಕ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿ ಮಳೆಯಿಂದ ನಗರಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ .2 ಸಾವಿರ ಕೋಟಿ ವೆಚ್ಚದಲ್ಲಿ ಹೊಸ ರಾಜಕಾಲುವೆಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ವಾಹನ ದಟ್ಟಣೆ ನಿವಾರಣೆ

ನಗರದಲ್ಲಿ ಪ್ರತಿ ದಿನ ಐದು ಸಾವಿರಕ್ಕೂ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ನಗರದ ಜನಸಂಖ್ಯೆ 1.25 ಕೋಟಿ ಇದ್ದರೆ, ವಾಹನಗಳ ಸಂಖ್ಯೆ 1.6 ಕೋಟಿ ಇದೆ. ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸಲು ಹೊಸ ವ್ಯವಸ್ಥೆ ರೂಪಿಸಲಾಗಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ನಗರದ ವಾಹನ ದಟ್ಟಣೆಯಲ್ಲಿ ಸುಗಮಗೊಳಿಸಲಾಗಿದೆ. ನಗರದ ವಾಹನ ದಟ್ಟಣೆಯ ನಿವಾರಣೆಗೆ ವಿಶೇಷ ಆಯುಕ್ತರನ್ನು ನೇಮಿಸಲಾಗಿದೆ ಎಂದು ಹೇಳಿದರು.

RajaKaluve Encroachment: ಹೊಸ ವರ್ಷಕ್ಕೆ ಮತ್ತೆ ಜೆಸಿಬಿ ಆರ್ಭಟ, ಒತ್ತುವರಿ ಸರ್ವೆ ಕಾರ್ಯ ಮುಗಿಸಿದ ಕಂದಾಯ ಇಲಾಖೆ

ಸಬ್‌ ಅರ್ಬನ್‌ ರೈಲು ಕಾಮಗಾರಿ ಕೆಲಸ ಪ್ರಾರಂಭವಾಗಿದೆ. ಬೆಂಗಳೂರು ಹೊರ ವಲಯದಲ್ಲಿ ಸ್ಯಾಟ್‌ಲೈಟ್‌ ರಿಂಗ್‌ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ಪೆರಿಫೆರಲ್‌ ರಿಂಗ್‌ ರಸ್ತೆಯ ನಿರ್ಮಾಣದಲ್ಲಿರುವ ತಾಂತ್ರಿಕ ಹಾಗೂ ಕಾನೂನಾತ್ಮಕ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದ್ದು, ನಂತರ ಈ ಕಾಮಗಾರಿಯನ್ನೂ ಆರಂಭಿಸಲಾಗುವುದು. ಮೆಟ್ರೋ 3ನೇ ಹಂತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಬೆಂಗಳೂರು ನಗರವನ್ನು ಮೈಕ್ರೋ ಹಾಗೂ ಮ್ಯಾಕ್ರೋ ಹಂತದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ಮಹಾಲಕ್ಷ್ಮಿ ಲೇಔಟ್‌ನ ಅಭಿವೃದ್ಧಿ ಕಾರ್ಯಕ್ರಮಗಳು ಮಾದರಿಯಾಗಿವೆ. ಇಲ್ಲಿನ ಜನರಿಗೆ ಉತ್ತಮ ಮೂಲ ಸೌಕರ್ಯ, ಆರೋಗ್ಯ, ಶಿಕ್ಷಣಗಳನ್ನು ಪೂರೈಸಲು ಸಚಿವ ಗೋಪಾಲಯ್ಯ ಅವಿರತ ಶ್ರಮಿಸುತ್ತಿದ್ದಾರೆ. ಅಮೃತ ನಗರೋತ್ಥಾನ ಯೋಜನೆಯ ಅನುದಾನದ ಸದುಪಯೋಗವಾಗಿದೆ. ಗೋಪಾಲಯ್ಯ ಕೋವಿಡ್‌ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮೂಲಕ ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಕೆ.ಸುಧಾಕರ್‌ ಮಾತನಾಡಿ, ಒಂದೇ ಸೂರಿನಡಿ ಎಲ್ಲಾ ರೀತಿಯ ಆರೋಗ್ಯ ಸೇವೆ ಸೇರಿದಂತೆ ಬಡವರ, ಮಧ್ಯಮ ವರ್ಗದವರ ಮತ್ತು ಕೊಳಗೇರಿ ನಿವಾಸಿಗಳ ಸಂಜೀವಿನಿಯಾಗಿ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸಲಿವೆ. ಬಾಣಂತಿಯರ ಸೇವೆಗಳು, ನವಜಾತ ಶಿಶುವಿನ ಆರೋಗ್ಯ ಸೇವೆಗಳು, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಸೇವೆಗಳು, ರಾಷ್ಟ್ರೀಯ ಲಸಿಕಾಕರಣ ಸೇರಿದಂತೆ 12 ವಿವಿಧ ರೀತಿಯ ಸೇವೆಗಳನ್ನು ನಮ್ಮ ಕ್ಲಿನಿಕ್‌ ನೀಡಲಿದೆ ಎಂದು ವಿವರಿಸಿದರು.

ಈ ವೇಳೆ ಮಾಜಿ ಶಾಸಕ ನೆಲ ನರೇಂದ್ರಬಾಬು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್‌ ಚಂದ್ರ, ಪಶ್ಚಿಮ ವಲಯ ಆಯುಕ್ತ ಡಾ. ಆರ್‌.ಎಲ್‌.ದೀಪಕ್‌ ಉಪಸ್ಥಿತರಿದ್ದರು.

2 ವಾರದಲ್ಲಿ ಉಳಿದ ಕ್ಲಿನಿಕ್‌ ಶುರು: ಸುಧಾಕರ್‌

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಲಿದ್ದು, ಸದ್ಯ 108 ಕ್ಲಿನಿಕ್‌ಗಳು ಉದ್ಘಾಟನೆಯಾಗಿದೆ. ಇನ್ನು ಎರಡು ವಾರಗಳಲ್ಲಿ ಉಳಿದ ನಮ್ಮ ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಗುವುದು. ಕೆಲವೇ ದಿನಗಳಿಗೆ ಮಹಿಳೆಯರಿಗೆ ಆಯುಷ್ಮತಿ ಕ್ಲಿನಿಕ್‌ ಕೂಡ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಸುಧಾಕರ್‌ ತಿಳಿಸಿದರು.

Bengaluru: ನಾಗರಿಕರ ಜಲ ಮಾರ್ಗಕ್ಕೆ ತ್ಯಾಜ್ಯ ಎಸೆದವರ ಮೇಲೆ ಬಿಬಿಎಂಪಿ ಕಾನೂನು ಕ್ರಮ

‘ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಾದರಿ ಸರ್ಕಾರಿ ಶಾಲೆಗಳು’

ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಬೆಂಗಳೂರು ನಗರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನವನ್ನು ನಮ್ಮ ಬಿಜೆಪಿ ಸರ್ಕಾರ ನೀಡಿದೆ. ಕಳೆದ ಮೂರು ವರ್ಷಗಳಿಂದ ನಮ್ಮ ಸರ್ಕಾರದಿಂದ ಉತ್ತಮ ಕೆಲಸಗಳು ಆಗಿದೆ. ಸುಮಾರು 15 ಉದ್ಯಾನವನಗಳನ್ನು ಜನರ ಅನುಕೂಲಕ್ಕೆ ತಕ್ಕಂತೆ ಮಾಡಲಾಗಿದೆ. ಖಾಸಗಿ ಶಾಲೆಗಳಿಗಿಂತಲೂ ಅತ್ಯುತ್ತಮವಾದ ಸರ್ಕಾರಿ ಶಾಲೆಗಳು ಮಹಾಲಕ್ಷ್ಮಿ ಲೇಔಟ್‌ನಲ್ಲಿವೆ. ಕ್ಷೇತ್ರದ ಜನರ ಅನಿಸಿಕೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ಸರ್ಕಾರವು ಬ್ರ್ಯಾಂಡ್‌ ಬೆಂಗಳೂರಿಗಾಗಿ ಶ್ರಮಿಸುತ್ತಿದೆ. ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿಯೇ ಮಂತ್ರ. ಆದರೆ, ವಿಪಕ್ಷಗಳ ಕೆಲಸ ಕೇವಲ ಟೀಕೆಗೆ ಮಾತ್ರ ಸೀಮಿತವಾಗಿದೆ ಅಂತ ಆರೋಗ್ಯಸಚಿವ ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ.