2023-24ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಲಾಗಿದ್ದು, ಚುನಾವಣೆ ಇರುವುದರಿಂದ ಈ ಆಯವ್ಯಯದಲ್ಲಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮ ಅನುಷ್ಠಾನ ಮಾಡುವ ಕೆಲಸಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿಲ್ಲ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಮಾ.01): ಬಿಬಿಎಂಪಿಯಲ್ಲಿ ಆದಾಯಕ್ಕೆ ತಕ್ಕಂತೆ ಬಜೆಟ್ ರೂಪಿಸುವುದರೊಂದಿಗೆ ಅನಗತ್ಯ ಯೋಜನೆಗಳ ಘೋಷಣೆಗೆ ಮೂಗುದಾರ ಹಾಕುವ ಹಾಗೂ ಸ್ವಾಲಂಬನೆ ಹೊಂದುವ ಉದ್ದೇಶದಿಂದ ಕಳೆದ ಮಾರ್ಚ್‌ನಲ್ಲಿ ಜಾರಿಗೊಳಿಸಿದ ‘ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮ-2021’ ಈ ಬಾರಿಯ ಬಿಬಿಎಂಪಿಯ ಆಯವ್ಯಯದಲ್ಲಿ ಅನುಷ್ಠಾನ ಆಗುವುದಿಲ್ಲ.
ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿದ್ದಾಗ ಪ್ರತಿವರ್ಷವು ವಾಸ್ತವ ವರಮಾನಕ್ಕಿಂತ ಹೆಚ್ಚು ವರಮಾನ ನಿರೀಕ್ಷಿಸಿ ಬಜೆಟ್ ಮಂಡಿಸಲಾಗುತ್ತಿತ್ತು. ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಣಕಾಸಿನ ಕೊರತೆ ಎದುರಾಗುತ್ತಿತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ, ಬಜೆಟ್ ರೂಪಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ‘ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮ-2021’ ರೂಪಿಸಿ ಕಳೆದ ವರ್ಷ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವು ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಿತ್ತು. ಆದರೆ, ಶಾಸಕರು ಮತ್ತು ಜನಪ್ರತಿನಿಧಿಗಳ ಒತ್ತಡದಿಂದ ಕಳೆದ 2022-23ನೇ ಸಾಲಿನ ಆಯವ್ಯಯದಲ್ಲಿ ಜಾರಿಗೊಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ.
ಇದೀಗ 2023-24ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಲಾಗಿದ್ದು, ಚುನಾವಣೆ ಇರುವುದರಿಂದ ಈ ಆಯವ್ಯಯದಲ್ಲಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮ ಅನುಷ್ಠಾನ ಮಾಡುವ ಕೆಲಸಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿಲ್ಲ.
ಬೆಂಗಳೂರು: ನಾಳೆ ಬಿಬಿಎಂಪಿ ಬಜೆಟ್ ಮಂಡನೆ
ಕೊರೋನಾ ನೆಪ
‘ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮ ಪ್ರಕಾರ ಬಜೆಟ್ ರೂಪಿಸಬೇಕಾದರೆ, ಕಳೆದ ಐದು ವರ್ಷದ ಬಿಬಿಎಂಪಿಯ ವರಮಾನದ ಸರಾಸರಿ ಅವಲೋಕಿಸಬೇಕು. ಆದರೆ, ಕೊರೋನಾ ಸಂದರ್ಭದಲ್ಲಿ ಎರಡು ವರ್ಷ ಬಿಬಿಎಂಪಿಗೆ ನಿರೀಕ್ಷಿತ ಆದಾಯ ಬಂದಿಲ್ಲ, ಹೀಗಾಗಿ, ಪ್ರಸಕ್ತ ವರ್ಷದ ಬಿಬಿಎಂಪಿಯಲ್ಲಿ ಈ ನಿಯಮ ಪಾಲನೆ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸಬೂಬು ಹೇಳುತ್ತಾರೆ.
ಚುನಾವಣೆ ಒತ್ತಡವೇ?
ಮುಂಬರುವ ಮಾಚ್‌ರ್‍ನಲ್ಲಿ ವಿಧಾನಸಭಾ ಚುನಾವಣೆ ನಡೆಯುವುದರಿಂದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ಜನಮನ ಗೆಲ್ಲುವ ಸಲುವಾಗಿ ಆಡಳಿತ ಪಕ್ಷ ಸೇರಿದಂತೆ ಎಲ್ಲಾ ಪಕ್ಷದ ಶಾಸಕರು ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಪಡೆಯಲು ಸರ್ಕಾರ ಮತ್ತು ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯ ಅಧಿಕಾರಿಗಳು ಈ ಬಾರಿಯೂ ವಿತ್ತೀಯ ಹೊಣೆಗಾರಿಕೆ ನಿಯಮ ಜಾರಿಗೆ ಮುಂದಾಗಿಲ್ಲ ಎನ್ನಲಾಗುತ್ತಿದೆ.
ಏನಿದು ನಿಯಮ?
‘ಬಿಬಿಎಂಪಿ ಹಣಕಾಸು ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ ನಿಯಮ-2021’ ಪ್ರಕಾರ ಕಳೆದ ಐದು ವರ್ಷದಲ್ಲಿ ಏರಿಕೆ ಆಗುತ್ತಿರುವ ಸರಾಸರಿ ಆದಾಯಕ್ಕೆ ಅನುಗುಣವಾಗಿ ಪ್ರಸ್ತುತ ಸಾಲಿನ ಬಜೆಟ್ ಮಂಡಿಸಬೇಕು. ಒಂದು ರೂಪಾಯಿ ಆದಾಯ ಬಂದರೆ ಆ ಹಣವನ್ನು ಯಾವ ಯಾವ ವಲಯಗಳಿಗೆ ವೆಚ್ಚ ಮಾಡಬೇಕಾಗಲಿದೆ ಎಂಬುದನ್ನು ಬಜೆಟ್‌ದಲ್ಲಿ ಪ್ರಸ್ತಾಪಿಸಬೇಕು. ಬಜೆಟ್‌ನ ವಿತ್ತೀಯ ಕೊರತೆಯು ಬಜೆಟ್ ಗಾತ್ರದ ಶೇ.3 ಅನ್ನು ಮೀರುವಂತಿಲ್ಲ. ಪಾಲಿಕೆಯ ಹಣಕಾಸು ಸ್ಥಿತಿಗತಿಯನ್ನು ಅವಲೋಕಿಸುವುದಕ್ಕೆ ಸೂಚ್ಯಂಕಗಳನ್ನು ರೂಪಿಸಲಾಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ಪಾಲಿಕೆಯ ವಾರ್ಷಿಕ ಬೆಳವಣಿಗೆಯ ಸಂಯುಕ್ತ ದರ (ಸಿಎಜಿಆರ್) ಆಧರಿಸಿ ಬಜೆಟ್ ಗಾತ್ರವನ್ನು ನಿಗದಿಪಡಿಸಬೇಕು. ಸಿಎಜಿಆರ್ ದರದಷ್ಟುಪ್ರಮಾಣದಲ್ಲಿ ಬಜೆಟ್ ಗಾತ್ರವನ್ನು ಹೆಚ್ಚಿಸುವುದಕ್ಕೆ ಅವಕಾಶ ಇರುತ್ತದೆ. ಉದಾಹರಣೆಗೆ, ಹಿಂದಿನ ವರ್ಷದ ಕಂದಾಯ ಸ್ವೀಕೃತಿ .4 ಸಾವಿರ ಕೋಟಿ ಆಗಿದ್ದರೆ, ಸಿಎಜಿಆರ್ ದರ 10 ಇದ್ದರೆ, ಕಂದಾಯ ಸ್ವೀಕೃತಿಯನ್ನು .4,400 ಕೋಟಿ ಎಂದು ಅಂದಾಜು ಮಾಡಿ ಅದಕ್ಕೆ ಬಂಡವಾಳ ಸ್ವೀಕೃತಿಯನ್ನು ಸೇರಿಸಿ ಬಜೆಟ್ ಗಾತ್ರವನ್ನು ನಿಗದಿಪಡಿಸಬಹುದು.
ಅನುಷ್ಠಾನದ ಲಾಭ ಏನು?
ಬಜೆಟ್‌ನಲ್ಲಿ ಹೆಚ್ಚಿನ ಆದಾಯದ ಸಂಗ್ರಹ ತೋರಿಸಿಕೊಂಡು ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಘೋಷಣೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಿಗದಿತ ಸಮಯಕ್ಕೆ ಗುತ್ತಿಗೆದಾರರಿಗೆ ಬಿಲ್ ಪಾವತಿ. ಅನಗತ್ಯ ಆರ್ಥಿಕ ಹೊರೆ ಇರುವುದಿಲ್ಲ. ಸಾಲ ಮತ್ತು ಸರ್ಕಾರದ ಅನುದಾನ ನೆಚ್ಚಿಕೊಳ್ಳುವ ಅವಶ್ಯಕತೆ ಇಲ್ಲ. ಆರ್ಥಿಕ ಸ್ವಾಲಂಬನೆ ಹೊಂದಬಹುದು.
Bengaluru: 9000 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್: ಆಸ್ತಿ ತೆರಿಗೆದಾರರಿಗೆ ಸಿಹಿ ಸುದ್ದಿ
‘ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮ-2021’ ಪ್ರಕಾರ ಐದು ವರ್ಷದ ಆದಾಯ ಸರಾಸರಿ ಆಧಾರ ಮೇಲೆ ಬಜೆಟ್ ರೂಪಿಸಬೇಕು. ಆದರೆ, ಕೊರೋನಾ ಕಾಲದಲ್ಲಿ ನಿರ್ದಿಷ್ಟಸಂಪನ್ಮೂಲ ಸಂಗ್ರಹವಾಗಿಲ್ಲ. ನಂತರ ಉತ್ತಮವಾಗಿ ತೆರಿಗೆ ಸಂಗ್ರಹವಾಗಿದೆ. ಹೀಗಾಗಿ, ಈ ಬಾರಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮಯಡಿ ಬಜೆಟ್ ರಚನೆ ಮಾಡುವುದಕ್ಕೆ ಸಾಧ್ಯವಾಗಿಲ್ಲ ಅಂತ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ತಿಳಿಸಿದ್ದಾರೆ.
2023-24ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಲಾಗಿದ್ದು, ಚುನಾವಣೆ ಇರುವುದರಿಂದ ಈ ಆಯವ್ಯಯದಲ್ಲಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮ ಅನುಷ್ಠಾನ ಮಾಡುವ ಕೆಲಸಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿಲ್ಲ.
