ಬಳ್ಳಾರಿ(ಏ.13): ರಾಜ್ಯದಲ್ಲಿ ದಿನ ದಿನಕ್ಕೆ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜನರ ದುಗಡವೂ ಹೆಚ್ಚುತ್ತಿದೆ. ಆದರೆ, ನಗರದಲ್ಲಿ ಲಾಕ್‌ಡೌನ್‌ ಲೆಕ್ಕಿಸದೆ ಅನೇಕ ವ್ಯಾಪಾರ-ವಹಿವಾಟು ಸದ್ದಿಲ್ಲದೆ ನಡೆಯುತ್ತಿದೆ.

ಬೆಳಗ್ಗೆ ನಗರದ ವಿವಿಧಡೆಗಳಲ್ಲಿ ಕ್ಷೌರಿಕರು ಅಂಗಡಿ ಬಂದ್‌ ಮಾಡಿಕೊಡು ಸದ್ದಿಲ್ಲದೆ ವೃತ್ತಿ ಮುಂದುವರಿಸುತ್ತಿರುವ ದೃಶ್ಯ ಕಂಡು ಬಂತು. ಮೊದಲು ಒಂದಿಬ್ಬರು ಗ್ರಾಹಕರನ್ನು ಒಳಗೆ ಕಳಿಸಿ ಒಳಗಿನಿಂದ ಬಾಗಿಲು ಬಂದ್‌ ಮಾಡಿಕೊಂಡು ಕ್ಷೌರ ಮಾಡಿ, ಬಳಿಕ ಮತ್ತಿಬ್ಬರನ್ನು ಒಳಗೆ ಕರೆದು ಕ್ಷೌರ ಮಾಡುತ್ತಿರುವ ದೃಶ್ಯ ಕಂಡು ಬಂತು. ಈ ಕುರಿತು ಸವಿತಾ ಸಮಾಜದ ಮುಖಂಡರು ತಿಳಿ ಹೇಳಿಕೆಗೂ ಜಗ್ಗದೆ ನಗರದ ಅನೇಕ ಕಡೆ ಕ್ಷೌರಿಕರು ತಮ್ಮ ವೃತ್ತಿಯನ್ನು ಕದ್ದು ಮುಚ್ಚಿ ಮಾಡುತ್ತಿರುವುದು ಕಂಡು ಬಂದಿದೆ.

ನಗರಗಳಿಗೆ ಸೀಮಿತವಾಗುತ್ತಿರುವ ದಾನಿಗಳು: ಮಾಸ್ಕ್‌, ಸ್ಯಾನಿಟೈಜರ್‌ ಹಳ್ಳಿಗರಿಗೆ ಬೇಕಿಲ್ವಾ?

ದಿನಸಿ, ತರಕಾರಿ ಖರೀದಿಗೆಂದು ಬೆಳಗ್ಗೆ 11 ಗಂಟೆ ವರೆಗೆ ಸಮಯ ನಿಗದಿಗೊಳಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ವ್ಯಾಪಾರ ಚಟುವಟಿಕೆ ತೆರೆದುಕೊಳ್ಳುತ್ತಿದ್ದು, ದಿನಸಿ, ತರಕಾರಿ ಹೊರತಾಗಿಯೂ ಕೆಲವರು ಕದ್ದುಮುಚ್ಚಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂತು.

ಅಲ್ಲಲ್ಲಿ ಟೀ ವ್ಯಾಪಾರ ಶುರು:

ನಗರದಲ್ಲಿ ಅಲ್ಲಲ್ಲಿ ಬೆಳಿಗ್ಗೆ ಟೀ ವ್ಯಾಪಾರ ಶುರುವಾಗಿದೆ. ಬೀದಿ ಬದಿಯ ಸಣ್ಣಪುಟ್ಟವ್ಯಾಪಾರಿಗಳು ಹೋಟೆಲ್‌ ಶುರು ಮಾಡಿಕೊಂಡಿದ್ದಾರೆ. ಇನ್ನು ಬಳೆ ಅಂಗಡಿ, ಬಟ್ಟೆ ಅಂಗಡಿಗಳು ಕದ್ದು ಮುಚ್ಚಿ ವ್ಯಾಪಾರ ಕುದುರಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ನಡುವೆಯೂ ಜನರು ಕದ್ದು ಮುಚ್ಚಿ ವ್ಯಾಪಾರಕ್ಕೆ ಇಳಿಯಲು ಬಂದ ಧೈರ್ಯ ಎಲ್ಲಿಂದ ಎಂಬ ಪ್ರಶ್ನೆಗೆ ‘ಬೆಳಿಗ್ಗೆ ತರಕಾರಿ ಹಾಗೂ ದಿನಸಿ ವ್ಯಾಪಾರ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ ನೂರಾರು ಜನರು ರಸ್ತೆ, ಮಾರುಕಟ್ಟೆಯಲ್ಲಿ ಜಮಾಯಿಸುತ್ತಾರೆ. ಬೆಳಗ್ಗೆ ಯಾವ ಪೊಲೀಸರು ಸಹ ಈ ಕಡೆ ಕಣ್ಣಾಯಿಸುವುದಿಲ್ಲ. 11 ಗಂಟೆಯ ಬಳಿಕವಷ್ಟೇ ಪೊಲೀಸ್‌ ತಂಡ ರಸ್ತೆಗಳು ಹಾಗೂ ಓಣಿಗಳಲ್ಲಿ ಓಡಾಟ ಶುರು ಮಾಡುತ್ತದೆ. ಹೀಗಾಗಿ ಕದ್ದುಮುಚ್ಚಿ ವ್ಯಾಪಾರ ಮಾಡಿಕೊಳ್ಳುತ್ತೇವೆ’ ಎಂದು ಕೆಲ ವ್ಯಾಪಾರಿಗಳು ಹೇಳುತ್ತಾರೆ.

ಪೊಲೀಸರಿಂದ ಬೀದಿನಾಟಕ:

ಲಾಕ್‌ಡೌನ್‌ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾ ಪೊಲೀಸ್‌ ಇಲಾಖೆ 15 ನಿಮಿಷಗಳ ಬೀದಿನಾಟಕವನ್ನು ಪ್ರದರ್ಶನ ನೀಡಲು ಮುಂದಾಗಿದೆ. ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜರ್‌ ಬಳಕೆಯಿಂದಾಗುವ ಪ್ರಯೋಜನಗಳ ಕುರಿತು ಬೀದಿನಾಟಕದ ಮೂಲಕ ಅರಿವು ಮೂಡಿಸಲಾಗುತ್ತಿದ್ದು, ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿನ ತರಕಾರಿ ಮಾರುಕಟ್ಟೆಯ ಬಳಿ ಭಾನುವಾರ ಬೀದಿನಾಟಕ ಪ್ರದರ್ಶಿಸಲಾಯಿತು.

ಇಬ್ಬರು ವ್ಯಕ್ತಿಗಳಿಗೆ ಕಪ್ಪುಬಟ್ಟೆಹಾಕಿ ಕೋರೋನಾ ಪಾತ್ರದ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಆಗುವ ಅಪಾಯದ ಕುರಿತು ಜನರಿಗೆ ತಿಳಿಸಿಕೊಡಲಾಯಿತು. ಜಿಲ್ಲಾ ಸಶಸ್ತ್ರ ಪಡೆಯ ಪೊಲೀಸರು ನಾಟಕ ಪ್ರದರ್ಶನ ನೀಡಿದರು.

ಬೇಕರಿಗೆ ಮುಗಿಬೀಳುವ ಗ್ರಾಹಕರು

ರಾಜ್ಯ ಸರ್ಕಾರ ಬೇಕರಿ ತೆರೆಯಲು ಅವಕಾಶ ಮಾಡಿಕೊಟ್ಟಿರುವುದು ಶಾಪವಾಗಿ ಪರಿಣಮಿಸಿದೆ. ನಗರದ ವಿವಿಧ ಬೇಕರಿಗಳ ಬಳಿ ನೂರಾರು ಜನರು ಜಮಾಯಿಸುತ್ತಿದ್ದು, ಸಾಮಾಜಿಕ ಅಂತರಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ. ಲಾಕ್‌ಡೌನ್‌ ಸಮಯದಲ್ಲೂ ಬೇಕರಿಯ ಸಿಹಿ ತಿಂಡಿಗಳು ಸಹ ಖರೀದಿಗೆ ಜನರು ಮುಂದಾಗುತ್ತಿರುವುದು ಕಂಡು ಬರುತ್ತಿದೆ. ಇನ್ನು ಎಂದಿನಂತೆ ಪೊಲೀಸರ ಗಸ್ತು ತಿರುಗಾಟ ಮುಂದುವರಿದಿದೆ. 11 ಗಂಟೆಯ ಬಳಿಕ ಪೊಲೀಸರು ಹೊರ ಬರುವ ಜನರ ವಿರುದ್ಧ ‘ಕಾರ್ಯಾ’ಚರಣೆ ಮುಂದುವರಿಸುತ್ತಿದ್ದಾರೆ. ಲಾಠಿ ಏಟು, ಬಸ್ತಿ ಶಿಕ್ಷೆ, ಬೈಕ್‌ ಸೀಜ್‌ ಕೆಲಸ ನಡೆದಿದ್ದು ಪೊಲೀಸರ ಬಿಗಿ ನಡುವೆಯೂ ಜನರ ಓಡಾಟ ಕಂಡು ಬಂತು.