* ಒಂದೂವರೆ ತಿಂಗಳಲ್ಲಿ 69 ಮಕ್ಕಳ ರಕ್ಷಣೆ* ಆಪ್ತಸಮಾಲೋಚನೆ ನಡೆಸಿ ಮರಳಿ ಪೋಷಕರ ಮಡಿಲಿಗೆ* ಯಶವಂತಪುರ ನಿಲ್ದಾಣದಲ್ಲೂ ಶೀಘ್ರ ಆರಂಭ
ಜಯಪ್ರಕಾಶ್ ಬಿರಾದಾರ್
ಬೆಂಗಳೂರು(ಮೇ.24): ಮನೆ ತೊರೆದು ಬೆಂಗಳೂರಿಗೆ ಬರುವ ಅಪ್ರಾಪ್ತರ ರಕ್ಷಣೆಯಲ್ಲಿ ಸಿಟಿ ರೈಲ್ವೆ ನಿಲ್ದಾಣದ ‘ಖುಷಿ ಹಬ್’ ಯಶಸ್ವಿಯಾಗಿದೆ. ಹಬ್ ಕಾರ್ಯಾರಂಭವಾದ ಕಳೆದ ಒಂದೂವರೆ ತಿಂಗಳಲ್ಲಿಯೇ 69 ಮಕ್ಕಳನ್ನು ರಕ್ಷಿಸಿದ್ದು, ಅವರೊಂದಿಗೆ ಆಪ್ತಸಮಾಲೋಚನೆ ನಡೆಸಿ ಪೋಷಕ ಮಡಿಲು ಸೇರಿಸಿದೆ.
ಪೋಷಕರೊಂದಿಗೆ ಜಗಳ, ಅಪರಾಧ ಚಟುವಟಿಕೆಗಳಲ್ಲಿ ಭಾಗಿ, ಕಳ್ಳಸಾಗಣೆ ಜಾಲಕ್ಕೆ ಸಿಕ್ಕಿ, ಬಡತನ ಕಾರಣದಿಂದ ದುಡಿಯಲು ಸೇರಿದಂತೆ ಹಲವು ಕಾರಣಗಳಿಂದ ರೈಲ್ವೆ ಮೂಲಕ ಬರುವ ಮಕ್ಕಳ ರಕ್ಷಣೆಗೆ ‘ಖುಷಿ ಹಬ್’ ಸ್ಥಾಪಿಸಲಾಗಿದೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ 1ರಲ್ಲಿ ಸ್ಥಾಪಿಸಿರುವ ಈ ಕೇಂದ್ರದಲ್ಲಿ ಆಟಿಕೆಗಳು, ಪುಸ್ತಕಗಳು, ಅಡುಗೆಮನೆ, ಶೌಚಾಲಯ, ಸಮಾಲೋಚನಾ ಕೊಠಡಿ, ಉತ್ತಮ ಆಸನ ವ್ಯವಸ್ಥೆ ಇದ್ದು, ಮಕ್ಕಳನ್ನು ಆಕರ್ಷಿಸುವ ವಾತಾವಣ ನಿರ್ಮಿಸಲಾಗಿದೆ.
Operation Nanhe Farishte: ವರ್ಷದಲ್ಲಿ 543 ಮಕ್ಕಳನ್ನ ರಕ್ಷಿಸಿದ ನೈರುತ್ಯ ರೈಲ್ವೆ
ಕಾರ್ಯಾರಂಭಗೊಂಡ ಕಳೆದ ಏಪ್ರಿಲ್ 8ರಿಂದ ಮೇ 22ವರೆಗೂ 56 ಗಂಡು, 13 ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದೆ. ಈ ಪೈಕಿ 40 ಮಕ್ಕಳು ಹೊರರಾಜ್ಯದಿಂದ ಮತ್ತು 29 ಮಕ್ಕಳು ಕರ್ನಾಟಕದವರಾಗಿದ್ದಾರೆ. ಆರ್‌ಪಿಎಫ್ ಮಾನವ ಕಳ್ಳಸಾಗಣೆ ನಿಗ್ರಹ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಚೈಲ್ಡ್ ಲೈನ್ ಇಂಡಿಯಾ ಎನ್‌ಜಿಒ ಒಟ್ಟಾಗಿ ಈ ಕೇಂದ್ರವನ್ನು ನಿರ್ವಹಣೆ ಮಾಡುತ್ತಿವೆ.
ಶೇ.90 ಮಕ್ಕಳ ಮನೆಗೆ ಮರಳಿದ್ದಾರೆ:
ಖುಷಿ ಹಬ್‌ನಿಂದ ರಕ್ಷಿಸಿದ್ದ ಸಂತ್ರಸ್ತ ಮಕ್ಕಳ ಪೈಕಿ ಶೇ.90 ರಷ್ಟು ಮಕ್ಕಳು ಮನೆಗೆ ಹಿಂದಿರುಗಿದ್ದಾರೆ. ಮಕ್ಕಳ ಆಪ್ತ ಸಮಾಲೋಚಕರಿಂದ ಮಕ್ಕಳ ಮನ ಒಲಿಸಲಾಗುತ್ತದೆ. ಪೋಷಕರಿಂದ ಸಮಸ್ಯೆಯಾದರೆ ಜಿಲ್ಲಾ ಮಕ್ಕಳ ಕಲ್ಯಾಣ ಅಧಿಕಾರಿಗೆ ತಿಳಿಸುವಂತೆ ಧೈರ್ಯ ತುಂಬಲಾಗುತ್ತದೆ. ಪೋಷಕರು ಬಡತನ ಕಾರಣದಿಂದ ಮಕ್ಕಳನ್ನು ಸಾಕಲು ಆಗುತ್ತಿಲ್ಲ ಎಂದಾದರೆ ಅರ್ಹ ಎನ್‌ಜಿಒಗಳನ್ನು ಆಯ್ಕೆ ಮಾಡಿ ಅಲ್ಲಿಗೆ ಮಕ್ಕಳು ಕಳುಹಿಸಲಾಗುತ್ತದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ಅಧಿಕಾರಿ ಕುಸುಮಾ ಹರಿಪ್ರಸಾದ್ ತಿಳಿಸಿದ್ದಾರೆ.
ಯಶವಂತಪುರ ನಿಲ್ದಾಣದಲ್ಲೂ ಶೀಘ್ರ ಆರಂಭ
ಯಶವಂತಪುರಕ್ಕೂ ಹೊರರಾಜ್ಯಗಳಿಂದ ಸಾಕಷ್ಟು ಮಂದಿ ಆಗಮಿಸುತ್ತಿದ್ದು, ಅಲ್ಲಿಯೂ ಸಂತ್ರಸ್ತ ಮಕ್ಕಳು ಪತ್ತೆಯಾಗುತ್ತಿದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಯಶವಂತಪುರ ರೈಲು ನಿಲ್ದಾಣದಲ್ಲಿ ‘ಖುಷಿ ಹಬ್’ ಕೇಂದ್ರ ತೆರೆಯಲಾಗುತ್ತದೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಲ್ಲಿ (ಸಿಎಸ್‌ಆರ್) ಸಂಸ್ಥೆಗಳು ಮುಂದೆ ಬಂದರೆ ಮಂಗಳೂರು, ಮೈಸೂರು, ಹುಬ್ಬಳ್ಳಿ ನಿಲ್ದಾಣಗಳಲ್ಲಿಯೂ ಖುಷಿ ಹಬ್ ತೆರೆಯಲಾಗುತ್ತದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಖುಷಿ ಹಬ್ ಸಂತ್ರಸ್ತ ಮಕ್ಕಳ ರಕ್ಷಣೆಯಲ್ಲಿ ಅತ್ಯಂತ ಸಹಕಾರಿಯಾಗಿದೆ. ಮಕ್ಕಳ ಸ್ನೇಹಿ ವಾತಾವರಣವಿದ್ದು, ನೊಂದು ಬಂದ ಮಕ್ಕಳಿಗೆ ಮಾನಸಿಕ, ಸಾಮಾಜಿಕವಾಗಿ ಧೈರ್ಯ ತುಂಬುತ್ತಿದೆ. ಶೀಘ್ರದಲ್ಲಿಯೇ ಯಶವಂತಪುರ ನಿಲ್ದಾಣದಲ್ಲಿಯೂ ಖುಷಿ ಹಬ್ ತೆರೆಯಲಾಗುವುದು ಅಂತ ನೈರುತ್ಯ ರೈಲ್ವೆ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದಾರೆ.
