Asianet Suvarna News Asianet Suvarna News

ಒಬಿಸಿ ಪಟ್ಟಿಗೆ ಶೀಘ್ರ ಕುಂಚಿಟಿಗರು : ಜಯಚಂದ್ರ

ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ನಡೆಸಿದ ಕುಲಶಾಸ್ತ್ರ ಅಧ್ಯಯನದ ವರದಿ ಈಗಾಗಲೇ ರಾಷ್ಟ್ರಪತಿಗಳ ಕಚೇರಿಯಲ್ಲಿದೆ ಎಂದು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

Sooner Kunchatigas will join in OBC list: Jayachandra snr
Author
First Published Aug 14, 2023, 8:06 AM IST

  ತುಮಕೂರು :  ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ನಡೆಸಿದ ಕುಲಶಾಸ್ತ್ರ ಅಧ್ಯಯನದ ವರದಿ ಈಗಾಗಲೇ ರಾಷ್ಟ್ರಪತಿಗಳ ಕಚೇರಿಯಲ್ಲಿದೆ ಎಂದು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

ಅಖಿಲ ಕುಂಚಿಟಿಗರ ಮಹಾಮಂಡಲ ಬೆಂಗಳೂರು ಮತ್ತು ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ ತುಮಕೂರು ಸಹಭಾಗಿತ್ವದಲ್ಲಿ ನಗರದ ಕೋತಿತೋಪು ರಸ್ತೆಯ ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಕುಂಚಿಟಿಗರಿಗೆ ಕೇಂದ್ರ ಸರ್ಕಾರದಿಂದ ಒಬಿಸಿ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಕುಂಚಿಟಿಗ ಸಮುದಾಯಕ್ಕೆ ಶಕ್ತಿ ತುಂಬಲು ಕೇಂದ್ರದ ಒಬಿಸಿ ಮೀಸಲಾತಿ ಅವಶ್ಯಕತೆ ಇದೆ. ಈಗಾಗಲೇ ರಾಷ್ಟ್ರಪತಿಗಳ ಕಚೇರಿ ಮೆಟ್ಟಿಲು ಹತ್ತಿರುವ ವರದಿ ಕುಂಚಿಟಿಗರ ಪರವಾಗಿ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಮಾಜದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ಸಮಾಜಗಳಿಗೆ ಶಕ್ತಿ ತುಂಬಲು ಹಾವನೂರು ಆಯೋಗ ರಚನೆ ಮಾಡಿದ್ದರು. ಹಾವನೂರು ಆಯೋಗವೂ ಸಹ ಕುಂಚಿಟಿಗ ಸಮುದಾಯ ಅತ್ಯಂತ ಹಿಂದುಳಿದ ಸಮಾಜ ಎಂದು ವರದಿ ನೀಡಿತ್ತು. ಆ ನಂತರ 1978ರಲ್ಲಿ ಮಂಡಲ್‌ ಕಮಿಷನ್‌ ವರದಿ ಬಂತು. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ವರದಿ ನೀಡಬೇಕು ಎಂಬ ಆದೇಶದ ಹಿನ್ನಲೆಯಲ್ಲಿ ಗಂಗಟಗಾರರು, ಕುಂಚಿಟಿಗರು, ಒಕ್ಕಲಿಗರು ಗೌಡ ಎಲ್ಲರೂ ಹಿಂದುಳಿದ ಸಮಾಜಗಳೇ ಎಂದು ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಮಾಡಲಾಯಿತಾದರೂ ಅಂದು ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಯಿಂದ ಕೈಬಿಟ್ಟಪರಿಣಾಮ ಕುಂಚಿಟಿಗ ಸಮುದಾಯದ ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ಸೌಲಭ್ಯ ಸಿಗದೆ ವಂಚಿತರಾಗುತಿ್ತದ್ದಾರೆ ಎಂದರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಕೃಷಿ ಮತ್ತು ಹೈನುಗಾರಿಕೆ ಸಮಾಜದ ಮೂಲ ಕಸುಬಾಗಿದ್ದು, ಕುಂಚಿಟಿಗರು ಶ್ರಮಜಿವೀಗಳು, ಸ್ವಾಭಿಮಾನಿಗಳಾಗಿದ್ದು, ಯಾರ ಬಳಿಯೂ ಕೈಚಾಚಿದವರಲ್ಲ. ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ರಾಜಕೀಯ ಹೊಂದಾಣಿಕೆ ಕೊರತೆಯಿಂದ ಸ್ವಲ್ಪ ಹಿನ್ನಡೆಯಾಗಿದೆ. ಸಮುದಾಯ ವಿಧಾನಸೌಧ ಮತ್ತು ಸಂಸತ್‌ ಭವನಕ್ಕೆ ಪ್ರವೇಶಿಸಲು ರಾಜಕೀಯ ಪ್ರಾತಿನಿಧ್ಯ ಬೇಕಾಗಿದೆ. ಆದರೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ನಮ್ಮ ಸಮುದಾಯ ಇಲ್ಲದೇ ಇರುವುದು ವಿಪರ್ಯಾಸ ಎಂದರು.

ಜಸ್ಟೀಸ್‌ ರೋಹಿಣಿ ಅವರನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕ ಮಾಡಿದ ನಂತರ ಮೈಸೂರು ನಡೆಸಿದ ಕುಲಶಾಸ್ತ್ರ ಅಧ್ಯಯನದಿಂದ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ 3ಎ ಮೀಸಲಾತಿ ನೀಡಿದ್ದು, ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಸಿಕ್ಕರೆ ಸಮುದಾಯಕ್ಕೆ ಎಲ್ಲಾ ರೀತಿಯಿಂದಲೂ ಪ್ರಾತಿನಿಧ್ಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಚಿದಾನಂದ ಗೌಡ ಮಾತನಾಡಿ, ಕುಂಚಿಟಿಗ ಸಮುದಾಯದ ಬೇಡಿಕೆ 28 ವರ್ಷಗಳದ್ದಾಗಿದ್ದು, ಅತ್ಯಂತ ದೊಡ್ಡ ಜನಸಂಖ್ಯೆಯುಳ್ಳ ನಮ್ಮ ಸಮಾಜದ ಮುಂದಿನ ಪೀಳಿಗೆಗಾಗಿ ಕೇಂದ್ರದ ಒಬಿಸಿ ಮೀಸಲಾತಿ ಅವಶ್ಯಕತೆ ಇದೆ. ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ.ಜಯಚಂದ್ರ ಅವರ ಹೆಗಲಿಗೆ ಈ ಬೇಡಿಕೆಯನ್ನು ಹಾಕುವುದರ ಮೂಲಕ ಅದರ ಲಾಭ, ನಷ್ಟ, ಕೀರ್ತಿ ಎಲ್ಲವೂ ಅವರಿಗೆ ಸಲ್ಲಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಶಕ್ತಿ ಟಿ.ಬಿ.ಜಯಚಂದ್ರ ಅವರಿಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ನವೀನ್‌ ಮಾತನಾಡಿ, ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ದೆಹಲಿಯಲ್ಲಿ ಕನಿಷ್ಠ 15 ಮಂದಿ ಸಂಸದರನ್ನು ನಿಮ್ಮ ಬಳಿಗೆ ಕರೆದುಕೊಂಡು ಬರುತ್ತೇವೆ. ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲೂ ಸಹ ನಾವೆಲ್ಲರೂ ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದು ಟಿ.ಬಿ.ಜಯಚಂದ್ರ ಅವರಿಗೆ ಭರವಸೆ ನೀಡಿದರು.

ಸಭೆಯಲ್ಲಿ ಕುಂಚಿಟಿಗರಿಗೆ ಕೇಂದ್ರ ಸರ್ಕಾರದಿಂದ ಒಬಿಸಿ ಹಕ್ಕೊತ್ತಾಯದ ಮನವಿಯನ್ನು ಸಂಸದ ಜಿ.ಎಸ್‌. ಬಸವರಾಜು ಮತ್ತು ರಾಜ್ಯ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರಿಗೆ ಸಲ್ಲಿಸಲಾಯಿತು.

ಬೆಂಗಳೂರು ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ರಂಗಹನುಮಯ್ಯ, ಗೌರವಾಧ್ಯಕ್ಷ ಪುಟ್ಟೀರಪ್ಪ, ಕಸುವನಹಳ್ಳಿ ರಮೇಶ್‌ ಮಾತನಾಡಿದರು. ಸಭೆಯಲ್ಲಿ ಉದ್ಯಮಿ ಚಿತ್ರದುರ್ಗ ನವೀನ್‌, ನೇತಾಜಿ ಶ್ರೀಧರ್‌ ಕೆ., ಮಹಿಳಾ ಅಧ್ಯಕ್ಷೆ ಲಲಿತಾ ಮಲ್ಲಪ್ಪ, ಆಂಧ್ರಪ್ರದೇಶದ ಅನಂತರಾಜು, ಚಿಕ್ಕಮಗಳೂರಿನ ರಂಗನಾಥ್‌, ಮಧುಗಿರಿಯ ತುಂಗೋಟಿ ರಾಮಣ್ಣ, ಮಹಾಮಂಡಲದ ಕಾರ್ಯದರ್ಶಿ ಪೊ›.ನಾಗೇಂದ್ರ, ಚಿಕ್ಕಬಳ್ಳಾಪುರದ ಶ್ರೀನಿವಾಸಗೌಡ, ದೊಡ್ಡೇಗೌಡ, ಚಿತ್ರದುರ್ಗದ ರಾಜು, ಶಿವಮೊಗ್ಗದ ಕಾಂತರಾಜು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಖಿಲ ಕುಂಚಿಟಿಗರ ಮಹಾಮಂಡಲದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಜಿಲ್ಲಾ ಮತ್ತು ತಾಲ್ಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

 

1978ರಲ್ಲಿ ಶಾಸಕನಾಗಿ ಆಯ್ಕೆಯಾಗಿ ಸುದೀರ್ಘವಾಗಿ 50 ವರ್ಷಗಳ ಕಾಲ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಇನು ್ನಮುಂದೆ ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದು, ಕೆಲವರು ಜಯಚಂದ್ರ ಅವರಿಗೆ ವಯಸ್ಸಾಗಿದೆ ಎಂದು ಹೇಳುತ್ತಾರೆ. ಆದರೆ ಜಯಚಂದ್ರ ಶಕ್ತಿ ಏನೆಂಬುದು ಅವರಿಗೆ ಗೊತ್ತಿಲ್ಲ.

ಟಿ.ಬಿ.ಜಯಚಂದ್ರ ಶಾಸಕ

 

ಕೇಂದ್ರದ ಒಬಿಸಿ ಪಟ್ಟಿಗೆ ಕುಂಚಿಟಿಗ ಸಮುದಾಯವನ್ನು ಸೇರಿಸುವ ಬಹಳ ವರ್ಷಗಳ ಬೇಡಿಕೆಯಾಗಿದ್ದು, ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇಲೆ ಕೇಂದ್ರದಲ್ಲಿ ಈಗಾಗಲೇ ಪ್ರಧಾನಿಯವರನ್ನು ಮೂರ್ನಾಲ್ಕು ಭಾರಿ ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಲಾಗಿದೆ. ಮತ್ತೊಮ್ಮೆ ರಾಜ್ಯದ 25 ಸಂಸದರೂ ಸೇರಿ ಪ್ರಧಾನಿಗಳಿಗೆ ಮನವಿ ಸಲ್ಲಿಸಿ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಮನವಿ ಮಾಡಲಾಗುವುದು.

ಜಿ.ಎಸ್‌.ಬಸವರಾಜು ಸಂಸದ

Follow Us:
Download App:
  • android
  • ios