ಬೆಂಗಳೂರು [ಡಿ.17]: ನಮ್ಮ ಮೆಟ್ರೋ ಯೋಜನೆಯ ಜಮೀನು ಪಡೆದುಕೊಳ್ಳಲು ನೈಸ್‌ ಸಂಸ್ಥೆಗೆ ನೀಡಬೇಕಿರುವ ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿಯಿಟ್ಟು ಕಾಮಗಾರಿ ಆರಂಭಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಮ್ಮ ಮೆಟ್ರೋ ಯೋಜನೆ ಕುರಿತು ಬಿಎಂಆರ್‌ಸಿಎಲ್‌ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನೈಸ್‌ ಸಂಸ್ಥೆಯ ಅಶೋಕ್‌ ಖೇಣಿ ಅವರಿಂದಾಗಿ ಮೆಟ್ರೋ ಕಾಮಗಾರಿ ತಡವಾಗುವುದು ಬೇಡ. ಶೀಘ್ರವೇ ಸಂಸ್ಥೆಯಿಂದ ಜಮೀನು ಪಡೆದು ಕೆಲಸ ಆರಂಭಿಸುವ ಕುರಿತು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿಯಾಗಿಟ್ಟು, ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.

ಮೆಟ್ರೋ ಯೋಜನೆಗಾಗಿ ಹೊಸೂರು ರಸ್ತೆ, ತುಮಕೂರು ರಸ್ತೆಗಳಲ್ಲಿ ಸುಮಾರು 4 ಎಕರೆ ಜಮೀನು ಸ್ವಾದೀನ ಪಡಿಸಿಕೊಳ್ಳುವ ಅಗತ್ಯವಿದೆ. ಭೂಸ್ವಾದೀನಗೊಳ್ಳಬೇಕಿರುವ ಜಮೀನಿನ ಕೆಲ ಭಾಗ ಮೂಲ ಮಾಲಿಕರಿಂದ ನೈಸ್‌ಗೆ ಹೋಗಿದೆ. ಹೀಗಾಗಿ ನೈಸ್‌ ಸಂಸ್ಥೆಯಿಂದ ಸದರಿ ಜಮೀನನ್ನು ಮೆಟ್ರೋಗಾಗಿ ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ. ಆದರೆ, ನೈಸ್‌ ಸಂಸ್ಥೆ ಈ ಭೂಸ್ವಾದೀನ ಪ್ರಕ್ರಿಯೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಸಭೆಗೆ ತಿಳಿಸಿದರು.

ಹೊಸ ವರ್ಷಕ್ಕೆ ಮೆಟ್ರೋದಿಂದ ಗುಡ್ ನ್ಯೂಸ್...

ನೈಸ್‌ ಸಂಸ್ಥೆ ಮಾತ್ರವಲ್ಲದೆ, ಮೆಟ್ರೋಗೆ ಬೇಕಿರುವ ಜಮೀನಿನ ಪೈಕಿ ಕೆಲ ಸರ್ಕಾರಿ ಜಮೀನನ್ನು ಲೀಸ್‌ ಮೇಲೆ ಖಾಸಗಿಯವರಿಗೆ ನೀಡಲಾಗಿದೆ. ಅದನ್ನುತೆರವು ಗೊಳಿಸಬೇಕಿದೆ ಎಂದು ವಿವರಿಸಿದರು.

ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮೆಟ್ರೋ ಯೋಜನೆಗೆ ಅಡ್ಡಿಯಾಗದಂತೆ ಎಲ್ಲ ರೀತಿಯ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಿಕೊಂಡು ಯೋಜನೆಯ ಕಾಮಗಾರಿ ಆರಂಭಿಸಬೇಕು. ಮೆಟ್ರೋಗೆ ಎಲ್ಲೆಲ್ಲಿ ಜಮೀನು ಬರಬೇಕಿದೆಯೋ ಅದನ್ನು ಪಡೆದು ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೆಟ್ರೋ ನಿಗಮದ ಅಧಿಕಾರಿಗಳೇ ಸೂಚನೆ ನೀಡಿದರು.

ಸಭೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.