ಬೆಂಗಳೂರು [ಡಿ.11]:  ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿಗಮ ಸಿಹಿ ಸುದ್ದಿ ನೀಡಿದೆ. ಜನವರಿ 1ರಿಂದ ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಅರ್ಧ ಗಂಟೆ ವಿಸ್ತರಿಸಲು ನಿರ್ಧರಿಸಿದ್ದು, ಈ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ತನ್ನ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನೀಡಿದೆ.

ಮೆಟ್ರೋ ರೈಲು ಸಂಚಾರದ ಅವಧಿ ಜ.1ರಿಂದ ಅರ್ಧಗಂಟೆ ವಿಸ್ತರಣೆಗೊಳ್ಳಲಿದೆ. ಇದು ವಾರದ ಎಲ್ಲ ದಿನವೂ ಮುಂದುವರಿಯಲಿದೆ. ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ (ಮೆಜೆಸ್ಟಿಕ್‌) ಯಾವುದೇ ಪ್ರಯಾಣಿಕರು ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಮೆಜೆಸ್ಟಿಕ್‌- ನಾಗಸಂದ್ರ, ಮೆಜೆಸ್ಟಿಕ್‌- ಯಲಚೇನಹಳ್ಳಿ, ಮೆಜೆಸ್ಟಿಕ್‌- ಮೈಸೂರು ರಸ್ತೆ, ಮೆಜೆಸ್ಟಿಕ್‌- ಬೈಯ್ಯಪ್ಪನಹಳ್ಳಿ ಹೀಗೆ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 12ಕ್ಕೆ ಹೊರಡಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿ ನಡೆಯುವ ಸಂದರ್ಭದಲ್ಲಿ ಅಥವಾ ಡಿ.31ರ ಹೊಸ ವರ್ಷ ಆಚರಣೆ ವೇಳೆ ಎಂ.ಜಿ.ರಸ್ತೆ ಮತ್ತು ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣದಿಂದ ಹೊರಡುವ ಮೆಟ್ರೋ ರೈಲಿನ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗುತ್ತಿತ್ತು. ಈ ಹೊರತು ಇತರ ದಿನಗಳಲ್ಲಿ ಎಂದಿನಂತೆಯೇ ರಾತ್ರಿ 11ಕ್ಕೆ ಕೊನೆಯ ಮೆಟ್ರೋ ರೈಲು ಟರ್ಮಿನಲ್‌ ನಿಲ್ದಾಣಗಳಿಂದ ಹೊರಡುತ್ತಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರ ಅವಧಿಯನ್ನು ವಿಸ್ತರಿಸಬೇಕು ಎಂಬುದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿತ್ತು. ಬಿಎಂಟಿಸಿ ಬಸ್‌ಗಳು ತಡರಾತ್ರಿವರೆಗೂ ಸಂಚರಿಸಿದರೂ ಕೆಲವು ಕಡೆಗಳಲ್ಲಿ ಅನಾನುಕೂಲತೆ ಆಗುತ್ತಿದ್ದರಿಂದ ಮೆಟ್ರೋ ನಿಗಮದ ಮೇಲೆ ಹೆಚ್ಚಿನ ಒತ್ತಡ ಇತ್ತು. ಆದ್ದರಿಂದ ಜ.1ರಿಂದ ಅರ್ಧಗಂಟೆ ಅವಧಿ ವಿಸ್ತರಿಸಲಾಗಿದೆ. ಆದರೆ ಮೊದಲ ಮೆಟ್ರೋ ರೈಲು ಸೇವಾ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ಸೇಠ್‌ ಮಾಹಿತಿ ನೀಡಿದ್ದಾರೆ.

ಪರಿಷ್ಕೃತ ವೇಳಾ ಪಟ್ಟಿ

ಟರ್ಮಿನಲ್‌ ನಿಲ್ದಾಣಗಳು ಈಗಿನ ವೇಳೆ ಪರಿಷ್ಕೃತ ವೇಳೆ

ಮೈಸೂರು ರಸ್ತೆ ರಾತ್ರಿ 11.05 ರಾತ್ರಿ 11.40

ಬೈಯಪ್ಪನಹಳ್ಳಿ ರಾತ್ರಿ 11.00 ರಾತ್ರಿ 11.35

ನಾಗಸಂದ್ರ ರಾತ್ರಿ 10.50 ರಾತ್ರಿ 11.25

ಯಲಚೇನಹಳ್ಳಿ ರಾತ್ರಿ 11.00 ರಾತ್ರಿ 11.35