ಶೀಘ್ರದಲ್ಲೇ ನಂದಿ ಗಿರಿಧಾಮ ಪ್ರವಾಸಿಗರಿಗೆ ಮುಕ್ತ
- ಪ್ರವಾಸಿಗರಿಗೆ ನಂದಿಯ ಭಾಗಿಲು ಕೇವಲ 10, 15 ದಿನಗಳಲ್ಲಿ ತೆರೆಯಲಿದೆ
- ಆಗಸ್ಟ್ 24 ರಂದು ರಾತ್ರಿ ಜಿಲ್ಲೆಯಲ್ಲಿ ಸಂಭವಿಸಿದ ಪರಿಣಾಮ ಮಳೆಯ ಅರ್ಭಟಕ್ಕೆ ಐತಿಹಾಸಿಕ ನಂದಿ ಗಿರಿಧಾಮದಲ್ಲಿ ಗುಡ್ಡ ಕುಸಿದು ರಸ್ತೆ ಹಾಳಾಗಿತ್ತು
ವರದಿ : ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ಅ.24): ಮಳೆಯ (Rain) ಅರ್ಭಟದ ಪರಿಣಾಮ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ (Nandi Hill) ರಾತ್ರೋರಾತ್ರಿ ಭಾರೀ ದೊಡ್ಡ ಪ್ರಮಾಣದಲ್ಲಿ ಸಂಭವಿಸಿದರಿಂದ ಭೂ ಕುಸಿತವಾಗಿ (Land Slide) ಬರೋಬ್ಬರಿ 2 ತಿಂಗಳು ಕಳೆಯುತ್ತಿದ್ದು ಪ್ರವಾಸಿಗರಿಗೆ ನಂದಿಯ ಭಾಗಿಲು ಕೇವಲ 10, 15 ದಿನಗಳಲ್ಲಿ ತೆರೆಯಲಿದೆ.
ಆಗಸ್ಟ್ 24 ರಂದು ರಾತ್ರಿ ಜಿಲ್ಲೆಯಲ್ಲಿ ಸಂಭವಿಸಿದ ಪರಿಣಾಮ ಮಳೆಯ ಅರ್ಭಟಕ್ಕೆ ಐತಿಹಾಸಿಕ ನಂದಿ ಗಿರಿಧಾಮದಲ್ಲಿ ಗುಡ್ಡ ಕುಸಿದು ರಸ್ತೆಯ ಸುಮಾರು 40 ಮೀಟರ್ ರಸ್ತೆ, 6 ರಿಂದ 7 ಮೀಟರ್ ಅಗಲದ ಸಂಪರ್ಕ ರಸ್ತೆ ಕೊಚ್ಚಿ ಹೋಗಿತ್ತು. ಆಗ ಗಿರಿಧಾಮದ ಮೇಲಿದ್ದ ಪ್ರವಾಸಿಗರನ್ನು (Tourists) ಮೆಟ್ಟಿಲು ಮೂಲಕ ಸುರಕ್ಷಿತವಾಗಿ ಕೆಳಗೆ ಇಳಿಸಿ ಗಿರಿಧಾಮಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿತ್ತು.
ವರದಿಗೆ ಸ್ಪಂದನೆ
ಆದರೆ ರಸ್ತೆ (Road) ಹಾಳಾಗಿ ಒಂದೂವರೆ ತಿಂಗಳಾಗುತ್ತಾ ಬಂದರೂ ಕಾಮಗಾರಿ ಆರಂಭಗೊಳ್ಳದ ಬಗ್ಗೆ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್‌ರ (CC Patil) ಗಮನ ಸೆಳೆದಿತ್ತು. ಸಚಿವರು ಆದ್ಯತೆ ಮೇರೆಗೆ ಕಾಮಗಾರಿ ನಡೆಸುವಂತೆ ಲೋಕೋಪಯೋಗಿ ಇಲಾಖೆಯಲ್ಲಿ ಮೀಸಲಿಟಿದ್ದ ಪ್ರಕೃತಿ ವಿಕೋಪದಿಂದ 80 ಲಕ್ಷ ರು, ಅನುದಾನ ಬಿಡುಗಡೆಗೆ ಆದೇಶಿಸಿದ್ದರು.
ಈಗ ಕಾಮಗಾರಿ ತಿಂಗಳಿಂದ ನಡೆಯುತ್ತಿದ್ದು ಸುಮಾರು ಶೇ.90 ರಷ್ಟುರಸ್ತೆ ಪುನರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಉಳಿದ ಕಾಮಗಾರಿ 10, 15 ದಿನಗಳೊಳಗೆ ಪೂರ್ಣಗೊಂಡು ಪ್ರವಾಸಿಗರ ಸಂಚಾರಕ್ಕೆ ತೆರೆದುಕೊಳ್ಳಲಿದೆಯೆಂದು ಜಿಲ್ಲಾ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಬಿ.ತಿಮ್ಮರಾಯಪ್ಪ ತಿಳಿಸಿದರು.
ಈಗಾಗಲೇ ರಸ್ತೆ ನಿರ್ಮಾಣಕ್ಕೆ ಅಳವಡಿಸಬೇಕಾದ ಪೈಪ್ (Pipe) ಕಾಮಗಾರಿಗಳು ಪೂರ್ಣಗೊಂಡಿದೆ. ಸಿಮೆಂಟ್ ರಸ್ತೆ (cement Road) ನಿರ್ಮಾಣ ಕಾರ್ಯ ಮಾಡಬೇಕಿದೆ. ಮಳೆ ಪದೇ ಪದೇ ಬೀಳುತ್ತಿರುವುದರಿಂದ ಕಾಮಗಾರಿ ತ್ವರಿತವಾಗಿ ಮುಗಿಸಬೇಕೆಂಬ ಉದ್ದೇಶದಿಂದ 45ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ರಸ್ತೆ ಪುನರ್ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆಯೆಂದು ಅವರು ತಿಳಿಸಿದರು.
ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಪ್ರವಾಸಿಗರು
ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮುಕಟ ಪ್ರಾಯವಾಗಿರುವ ನಂದಿಗಿರಿಧಾಮ ಇದೇ ಮೊದಲ ಬಾರಿಗೆ ಎರಡೂವರೆ ತಿಂಗಳ ಕಾಲದಷ್ಟುಪ್ರವಾಸಿಗರಿಂದ ದೂರ ಉಳಿದಿದ್ದು ಈಗ ರಸ್ತೆ ಕಾಮಗಾರಿ ಮುಗಿದ ಮೂಲಕ ಪ್ರವಾಸಿಗರು ದಂಡು ಗಿರಿಧಾಮಕ್ಕೆ ಬರಲು ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.
ನಂದಿ ಗಿರಿಧಾಮಕ್ಕೆ ಆದಾಯ ಖೋತಾ
ಕಳೆದ ಆಗಸ್ಟ್ 24 ರಂದು ಬಂದ್ ಆಗಿರುವ ನಂದಿಗಿರಿಧಾಮದ ಪ್ರವಾಸಿಗರ ಪ್ರವೇಶ ದ್ವಾರದ ಭಾಗಿಗೆ ಬೀಜ ಜಡಿದು ಸುಮಾರು 2 ತಿಂಗಳೂ ಕಳೆಯುತ್ತಿದೆ. ಇದರಿಂದ ನಂದಿಗಿರಿಧಾಮದ ಪ್ರವಾಸಿಗರಿಲ್ಲದೇ ಬೀಕೋ ಎನ್ನುವುದು ಒಂದಡೆಯಾದರೆ ಗಿರಿಧಾಮಕ್ಕೆ ಹರಿದು ಬರುತ್ತಿದ್ದ ಆದಾಯಕ್ಕೂ ಖೋತಾ ಬಿದ್ದಿದೆ. ಪ್ರತಿ ವಾರಾಂತ್ಯದಲ್ಲಿ ಸುಮಾರು 8 ರಿಂದ 9 ಸಾವಿರ ಪ್ರವಾಸಿಗರು ಗಿರಿಧಾಮಕ್ಕೆ ಬಂದು ಹೋಗುತ್ತಿದ್ದರು. ಮಾಸಿಕ 25 ರಿಂದ 30 ಲಕ್ಷ ಆದಾಯ (Income) ಹರಿದು ಬರುತ್ತಿತ್ತು. ಆದರೆ ಭೂ ಕುಸಿದು ರಸ್ತೆ ಹಾಳಾಗಿರುವುದರಿಂದ ಗುಣಮಟ್ಟದ ರಸ್ತೆಗೆ ಸರ್ಕಾರ (Govt) ಆದೇಶಿಸಿರುವ ಕಾರಣಕ್ಕೆ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿಯನ್ನು ಭರದಿಂದ ನಡೆಸಿದ್ದು 10. 15 ದಿನಗಳೊಳಗೆ ಕಾಮಗಾರಿ ಮುಗಿಸುವ ಭರವಸೆ ವ್ಯಕ್ತಪಡಿಸಿದೆ.
ಚಿಕ್ಕಬಳ್ಳಾಪುರದ (Chikkaballapura) ನಂದಿಗಿರಿಧಾಮದಲ್ಲಿ ಭೂ ಕುಸಿತದಿಂದ ಕೊಚ್ಚಿ ಹೋಗಿದ್ದ ರಸ್ತೆಯ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಶೀಘ್ರವೇ ಕಾಮಗಾರಿ ಪೂರ್ಣಗೊಂಡು ಪ್ರವಾಸಿಗರಿಗೆ ಮುಕ್ತವಾಗಲಿದೆ.