ಹೊಸಕೋಟೆ (ನ.17):  ಪಟ್ಟಣಕ್ಕೆ ಸುಸಜ್ಜಿತವಾದ ಆಸ್ಪತ್ರೆಯ ಅವಶ್ಯಕತೆ ಇದ್ದು, ಶೀಘ್ರದಲ್ಲೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಬಿ.ಎನ್‌.ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಬಾಣಾರಹಳ್ಳಿ, ಮೇಡಿಹಳ್ಳಿ ಕ್ರಾಸ್‌ನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಬೆಂಗಳೂರು ನಗರದ ಸೆರಗಿನಂಚಿನಲ್ಲಿರುವ ಹೊಸಕೋಟೆ ಜನಸಂಖ್ಯೆ ಅಲ್ಲದೆ ವಾಣಿಜ್ಯೇತರವಾಗಿಯೂ ಶರವೇಗದಲ್ಲಿ ಬೆಳೆಯುತ್ತಿದೆ.

ಆದರೆ ಈಗಿರುವ ತಾಲೂಕು ಆಸ್ಪತ್ರೆ ಕಿರಿದಾಗಿರುವ ಕಾರಣ, ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುತ್ತಿದ್ದಾರೆ. ಅಲ್ಲದೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಸಜ್ಜಿತ ಆಸ್ಪತ್ರೆ ಅಗತ್ಯವಿರುವ ಕಾರಣ ಹೊಸಕೋಟೆ- ನಗರೇನಹಳ್ಳಿ ರಸ್ತೆಯಲ್ಲಿರುವ ಬಮೂಲ್‌ ಚಿಲ್ಲಿಂಗ್‌ ಸೆಂಟರ್‌ ಮುಂಭಾಗದಲ್ಲಿ 4 ಎಕರೆ ಜಾಗವನ್ನು ಗುರ್ತಿಸಿದ್ದು ತ್ವರಿತವಾಗಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಈ ವಿಚಾರವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಬಳಿಯೂ ಚರ್ಚೆ ಮಾಡಲಾಗಿದ್ದು ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಶಾಸಕ ಶರತ್‌ ಬಚ್ಚೇಗೌಡ ಕೆಂಡಾಮಂಡಲ : ಖಡಕ್ ವಾರ್ನಿಂಗ್ .

ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ದೇವನಗೊಂದಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೇಡಿಹಳ್ಳಿ ಕ್ರಾಸ್‌ನಿಂದ ಮೇಡಿಹಳ್ಳಿ ಗ್ರಾಮದ ಮೂಲಕ ಸೋಮಲಾಪುರ ಸೇರುವ ರಸ್ತೆಗೆ ಮರು ಡಾಂಬರೀಕರಣ ಮಾಡುವ ಉದ್ದೇಶದಿಂದ ಪಂಚಾಯತ್‌ ರಾಜ್‌ ಇಲಾಖೆ ವತಿಯಿಂದ 36ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯತ್‌ ಸದಸ್ಯೆ ರೂಪಾ ಮರಿಯಪ್ಪ, ಬಮೂಲ್‌ ನಿರ್ದೇಶಕ ಕೆಎಂಎಂ ಮಂಜುನಾಥ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಎಲ್‌ಅಂಡ್‌ಟಿ ಮಂಜು, ನಿರ್ದೇಶಕ ಬಾಬುರೆಡ್ಡಿ, ಎಪಿಎಂಸಿ ನಿರ್ದೇಶಕ ಹಾರೋಹಳ್ಳಿ ದೇವರಾಜ್‌, ಮುಖಂಡ ಭೋಧನಹೊಸಹಳ್ಳಿ ಪ್ರಕಾಶ್‌ ಇದ್ದರು.