'ಜೆಡಿಎಸ್‌ನ ಹಾಲಿ, ಮಾಜಿ ಶಾಸಕರು ಕಾಂಗ್ರೆಸ್‌ಗೆ'

ಶೀಘ್ರ ಅನೇಕ ಜೆಡಿಎಸ್‌ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುವ ಸೂಚನೆ ಸಿಕ್ಕಿದೆ. ಇದರಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಪಡೆ ಇದೆ ಎನ್ನಲಾಗಿದೆ. 

Soon  Many JDS Leaders To Join Congress Says Madhu Bangarappa  snr

ತುಮಕೂರು (ಮಾ.26): ಮುಂದಿನ ದಿನಗಳಲ್ಲಿ ಜಿಲ್ಲೆಯ ಜೆಡಿಎಸ್‌ನ ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ ಎಂಬ ಸುಳಿವನ್ನು ಮಾಜಿ ಶಾಸಕ ಮಧು ಬಂಗಾರಪ್ಪ ನೀಡಿದರು.

ನಗರದ ಹೊರವಲಯದ ಭೀಮಸಂದ್ರದಲ್ಲಿರುವ ಜಿ.ಪಂ. ಮಾಜಿ ಸದಸ್ಯ ಟಿ.ಎಚ್‌. ಕೃಷ್ಣಪ್ಪನವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನ ಕೆಲ ಹಾಲಿ ಮತ್ತು ಮಾಜಿ ಶಾಸಕರು ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುವ ವಿಶ್ವಾಸ ತಮಗಿದೆ ಎಂದು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ಹಾಲಿ ಶಾಸಕರು ಪಕ್ಷ ಬದಲಾಯಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ನಡೆಯಬೇಕಾಗುತ್ತದೆ. ಹಾಗಾಗಿ ಆ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡುವುದಿಲ್ಲ. ಅವರು ಕಾಂಗ್ರೆಸ್‌ಗೆ ಬಂದಾಗ ಸ್ವಾಗತ ಮಾಡಲು ನಾನು ತುದಿಗಾಲಲ್ಲಿ ನಿಂತಿದ್ದೇನೆ. ನಿರಂತರವಾಗಿ ಅವರ ಸಂಪರ್ಕದಲ್ಲೂ ಇದ್ದೇನೆ ಎಂದರು.

ಕಾಂಗ್ರೆಸ್‌ನಲ್ಲಿ ಡಿಕೆಶಿ ಸ್ಫೋಟಿಸುವ ಯತ್ನ : ಅಧಿಕೃತ ಸಂದೇಶದ ಬಗ್ಗೆ ಬಿಜೆಪಿಗರ ಸ್ಫೋಟಕ ಹೇಳಿಕೆ ..

ಜಿ.ಪಂ. ಮಾಜಿ ಸದಸ್ಯ ಟಿ.ಹೆಚ್‌. ಕೃಷ್ಣಪ್ಪನವರನ್ನು ಒಂದೇ ಪಕ್ಷದಲ್ಲಿ ಜತೆಯಲ್ಲಿರೋಣ ಎಂದು ಕಾಂಗ್ರೆಸ್‌ ಪಕ್ಷಕ್ಕೆ ಕರೆದಿದ್ದೇನೆ. ಭವಿಷ್ಯದ ದೃಷ್ಠಿಯಿಂದ ಕೃಷ್ಣಪ್ಪನವರು ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ತಮಗಿದೆ, ನಾನು ಈಗಾಗಲೇ ಕಾಂಗ್ರೆಸ್‌ ಪಕ್ಷ ಸೇರಿದ್ದೇನೆ. ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ರವರೊಂದಿಗೆ ಚರ್ಚೆ ನಡೆಸಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟಿಕಾಯತ್‌ ವಿರುದ್ಧ ಕೇಸು: ಖಂಡನೆ

ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರು ರಾಜ್ಯಕ್ಕೆ ಆಗಮಿಸಿದ್ದ ವೇಳೆ ಶಿವಮೊಗ್ಗ ಮತ್ತು ಹಾವೇರಿಯಲ್ಲಿ ಅವರ ವಿರುದ್ಧ 2 ಕೇಸುಗಳನ್ನು ದಾಖಲಿಸಿರುವ ಕ್ರಮ ಖಂಡನೀಯ. ಬಿಜೆಪಿ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಅನ್ನದಾತ ಮೇಲೆ ದಾಖಲಿಸಿರುವ ಕೇಸುಗಳನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಅನ್ನದಾತರ ವಿರುದ್ಧ ಹಾಕಿರುವ ಕೇಸುಗಳನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಸ್ವರೂಪದ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಕ್ಕನ್ನು ಕಸಿಯುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಮೂಲಕ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾರೆ. ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಇವರ ಮೇಲೆ ಕೇಸು ದಾಖಲಿಸದೆ ಅನ್ನದಾತರ ಮೇಲೆ ಕೇಸು ದಾಖಲಿಸುವ ಇವರಿಗೆ ಅಧಿಕಾರದಲ್ಲಿ ಮುಂದುವರೆಯು ನೈತಿಕತೆ ಇಲ್ಲ ಎಂದರು.

ಆರೋಗ್ಯ ಸಚಿವರ ಏಕಪತ್ನಿ ವ್ರತಸ್ಥ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಧಾನಸೌಧದಂತಹ ಪವಿತ್ರ ಸ್ಥಳದಲ್ಲಿ ಇಂತಹ ಅಸಹ್ಯ ಹುಟ್ಟಿಸುವ ಮಾತುಗಳನ್ನಾಡುವುದು ಸರಿಯಲ್ಲ. ಬಿಜೆಪಿಯವರಿಗೆ ಮಾನಮರ್ಯಾದೆ ಏನೂ ಇಲ್ಲ. ನನಗೆ ಆ ಬಗ್ಗೆ ಮಾತನಾಡಲು ಇಷ್ಟವಿಲ್ಲ ಎಂದು ಅವರು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಟಿ.ಹೆಚ್‌. ಕೃಷ್ಣಪ್ಪ ಮಾತನಾಡಿ ಮಧುಬಂಗಾರಪ್ಪ ಅವರು ನಮ್ಮ ತಂದೆಯ ನಿಧನದ ನಂತರ ಮನೆಗೆ ಭೇಟಿ ನೀಡುವುದಾಗಿ ಹೇಳಿದ್ದರು ಅದರಂತೆ ಖಾಸಗಿ ಕಾರ್ಯಕ್ರಮಕ್ಕಾಗಿ ತುಮಕೂರಿಗೆ ಬಂದಿದ್ದ ಅವರು, ಮನೆಗೆ ಸೌಹಾರ್ದಯುತ ಭೇಟಿ ನೀಡಿದ್ದಾರೆ, ರಾಜಕೀಯವಾಗಿ ಜೊತೆಯಲ್ಲಿದ್ದಾಗ ಅವರೊಂದಿಗೆ ಉತ್ತಮ ಒಡನಾಟ ಇತ್ತು ಎಂದು ಹೇಳಿದರು.

ಈ ವೇಳೆ ವೇಳೆ ಕೆ.ವಿ.ಇಂದಿರಮ್ಮ, ಮಂಜುಳಾ, ಶಿಲ್ಪಾರಾಜಣ್ಣ, ಲೋಕೇಶ್‌, ಕಿಶನ್‌, ಮಹಾಜನ್‌, ಗೋವಿಂದಣ್ಣ ಸೇರಿದಂತೆ ಇತರರು ಇದ್ದರು.

Latest Videos
Follow Us:
Download App:
  • android
  • ios