ಶೀಘ್ರದಲ್ಲೇ ಜೆಡಿಎಸ್ ಶಾಸಕ ಕಾಂಗ್ರೆಸ್ ಸೇರ್ಪಡೆ ಶಾಸಕನ ಕಾಂಗ್ರೆಸ್ ಸೇರ್ಪಡೆಯಿಂದ ಒಡೆದ ಮನೆಯಾಗಲಿದೆ ಪಕ್ಷ

 ಕೋಲಾರ (ಆ.03):  ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಸದ್ಯದಲ್ಲೇ ವಿಭಜನೆ ಆಗಲಿದ್ದು ಶಾಸಕ ಕೆ.ಶ್ರೀನಿವಾಸಗೌಡರು ಮುಂದಿನ ದಿನಗಳಲ್ಲಿ ಶಾಸಕ ರಮೇಶ್‌ ಕುಮಾರ್‌ ಜತೆ ಕಾಂಗ್ರೆಸ್‌ ಹೋಗುವುದರಿಂದ ಜೆಡಿಎಸ್‌ ಪರಿಸ್ಥಿತಿ ಒಡೆದ ಮನೆಯಂತಾಗಲಿದೆ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಹೇಳಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ನರಸಾಪುರ ಜಿಪಂ ಹಾಗೂ ತಾಪಂ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಶ್ರೀನಿವಾಸಗೌಡ ಅವರು ರಮೇಶ್‌ಕುಮಾರ್‌ ಜತೆಗೆ ಇರುವುದಾಗಿ ಹೇಳಿಕೊಂಡಿದ್ದಾರೆ. ಹೋಳೂರು ಹೋಬಳಿಯಲ್ಲಿ ತಮ್ಮ ಪುತ್ರನಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಕೊಡಿಸುವ ಪ್ರಯತ್ನವೂ ಅವರದ್ದಾಗಿದೆ ಎಂದರು.

ಜೆಡಿಎಸ್ ಸೇರಲ್ಲ ಎಂದ ಮಾಜಿ ಸಚಿವ : ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ

ಕ್ಷೇತ್ರದಲ್ಲಿ ಶ್ರೀನಿವಾಸಗೌಡತ ಜತೆ ಶೇ.20 ರಷ್ಟುಮಂದಿ ಹೋಗಬಹುದು. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿಲ್ಲ. ಕಾಂಗ್ರೆಸ್‌ ಗೆಲ್ಲಬೇಕಾದರೆ ನಮ್ಮ ಕಾರ್ಯಕರ್ತರೇ ಹೋಗಬೇಕು. ನಾವು ಒಗ್ಗಟ್ಟಾಗಿ ತಾಪಂ, ಜಿಪಂ ಗೆದ್ದರೆ ಕಾಂಗ್ರೆಸ್‌ನವರೇ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ ಎಂದರು.

ತಮ್ಮನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳದೆ ತಿರಸ್ಕರಿಸಿದರೆ ಹೊಲಿಗೆ ಯಂತ್ರ ಚಿನ್ಹೆ ಇದೆ. ನನ್ನ ಮುಂದೆ ಕಾಂಗ್ರೆಸ್‌ ಹೀನಾಯವಾಗಿ ಸೋಲುತ್ತದೆ ಎಂದರು.

ಮುಖಂಡ ಬೆಗ್ಲಿ ಸೂರ್ಯಪ್ರಕಾಶ್‌ ಮಾತನಾಡಿ, ಕಾಂಗ್ರೆಸ್‌ಗೆ ವರ್ತೂರು ಸೇರ್ಪಡೆಗೆ ಸಿದ್ದರಾಮಯ್ಯ ಒಪ್ಪಿದ್ದರೂ ಈಗ ಕಾಲ ಪಕ್ವವಾಗಿಲ್ಲ, ಸಿದ್ದು ಒಪ್ಪಿದರೂ ನಾನು ಒಪ್ಪಲ್ಲ ಎಂದು ಕೆಎಚ್‌ ಮುನಿಯಪ್ಪ ಹೇಳುತ್ತಿದ್ದಾರೆ. ಮರಳಿ ಯತ್ನವ ಮಾಡು ಎಂಬಂತೆ ಪ್ರಯತ್ನ ಮುಂದುವರಿಸುತ್ತೇನೆ. ಆಗದಿದ್ದರೆ ಜಿಪಂನಲ್ಲಿ ನಮ್ಮ ಅಭ್ಯರ್ಥಿಗಳನ್ನು ಪಕ್ಷೇತರನಾಗಿ ನಿಲ್ಲಿಸುತ್ತೇವೆ. ಅವರುಗಳನ್ನು ನೀವು ಗೆಲ್ಲಿಸಿದರೆ ಮುಂದೆ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತದೆ ಎಂದರು.

ಜಿಪಂ ಮಾಜಿ ಸದಸ್ಯ ಅರುಣ್‌ ಪ್ರಸಾದ್‌, ತಾಪಂ ಮಾಜಿ ಅಧ್ಯಕ್ಷ ಸೂಲೂರು ಆಂಜನಪ್ಪ ಮಾತನಾಡಿದರು. ಜಿಪಂ ಮಾಜಿ ಸದಸ್ಯೆ ರೂಪಶ್ರೀ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಕೃಷ್ಣೇಗೌಡ ಇತರರು ಸಭೆಯಲ್ಲಿ ಹಾಜರಿದ್ದರು.