ಗೋಕಾಕನಲ್ಲಿ ಶೀಘ್ರದಲ್ಲೇ ಕೈಗಾರಿಕಾ ಪ್ರದೇಶ, ಸಾವಿರಾರು ಜನರಿಗೆ ಉದ್ಯೋಗ
ಗೋಕಾಕನಲ್ಲಿ ಶೀಘ್ರದಲ್ಲೇ ಕೈಗಾರಿಕಾ ಪ್ರದೇಶ. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ರಮೇಶ ಜಾರಕಿಹೊಳಿ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲು ಗುರಿಯಿಟ್ಟುಕೊಂಡಿರುವ ಗೋಕಾಕ ಶಾಸಕ ಜಾರಕಿಹೊಳಿ.
ಬೆಳಗಾವಿ (ಆ.12): ಜನತೆಯ ಬಹುದಿನಗಳ ಕನಸು ಈಗ ಈಡೇರುವ ಹಂತಕ್ಕೆ ಬಂದಿದ್ದು ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು, ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲು ಗುರಿಯಿಟ್ಟುಕೊಂಡಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಈಗ ಕೈಗಾರಿಕಾ ಪ್ರದೇಶ ಗುರುತಿಸಿ ಅದಕ್ಕೆ ಕಾಯಕಲ್ಪ ನೀಡಲು ಮುಂದಾಗಿದ್ದಾರೆ. ಕೈಗಾರಿಕಾ ಪ್ರದೇಶ ನಿರ್ಮಾಣಗೊಂಡಲ್ಲಿ ಗೋಕಾಕ ಜನತೆಗೆ ಉದ್ಯೋಗ, ನೌಕರಿ ಸುಲಭವಾಗಿ ಸಿಗಲಿವೆ. 400 ಎಕರೆ ಪ್ರದೇಶವನ್ನು ಕೈಗಾರಿಕಾ ವಲಯವನ್ನಾಗಿ ಮಾರ್ಪಡಿಸಿ, ಬೃಹತ್, ಮಧ್ಯಮ ಹಾಗೂ ಸಣ್ಣ ಕೈಗಾರಿಕಾ ಉದ್ಯಮಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ. ತಾಲೂಕಿನ ಶಿವಾಪೂರ ಗ್ರಾಮದ ಮರಡಿಸಿದ್ದಪ್ಪ ದೇವಸ್ಥಾನದ ಹತ್ತಿರ ಶುಕ್ರವಾರ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಕೈಗಾರಿಕಾ ವಲಯ ಸ್ಥಾಪನೆಗೆ ಸೂಕ್ತ ಜಾಗ ಗುರುತಿಸಿದರು. ಬಹುತೇಕ ವಲಯ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದು ಕಾರ್ಯಾರಂಭಗೊಳ್ಳಲಿದೆ.
ಈ ಬಗ್ಗೆ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ, ಗೋಕಾಕ ಜನತೆಯ ಹಲವು ವರ್ಷಗಳ ಬೇಡಿಕೆಯನ್ನು ಇಡೇರಿಸಲು ಹಾಗೂ ಜನರಿಗೆ ಸುಲಭವಾಗಿ ಉದ್ಯೋಗ ನೌಕರಿ ಒದಗಿಸಲು ಕೈಗಾರಿಕಾ ಪ್ರದೇಶ ನಿರ್ಮಾಣಗೊಳ್ಳುತ್ತಿದೆ. ಈ ಪ್ರದೇಶದಲ್ಲಿ ನೂರಾರು ಕಂಪನಿಗಳು ಕಾರ್ಖಾನೆಗಳನ್ನು ಆರಂಭಿಸಲಿವೆ. ಜೊತೆಗೆ ಉದ್ಯಮಿದಾರರು ಕಾರ್ಖಾನೆ ನಿರ್ಮಿಸಲು ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಈ ಕೈಗಾರಿಕಾ ವಲಯ ಸ್ಥಾಪನೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವಲಯ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯಗಳ ಒದಗಿಸಲಾಗುವದು. ಕಾರ್ಖಾನೆಗಳನ್ನು ಆರಂಭಿಸುವ ಉದ್ಯಮಿದಾರರಿಗೆ ಯಾವುದೇ ಅಡಚಣೆ ಆಗದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುವುದು.
ಕೊಣ್ಣೂರ ಗ್ರಾಮೀಣ, ಸಾವಳಗಿ, ಶಿವಾಪೂರ, ಖಾನಾಪುರ, ನಂದಗಾಂವ ಸೇರಿ ವಿವಿಧ ಹಳ್ಳಿಗಳ ಜನರಿಗೂ ಇದರ ಲಾಭ ಸಿಗಲಿದೆ. ಉದ್ಯೋಗ ಹುಡುಕಿಕೊಂಡು ಬೇರೆ ನಗರಗಳಿಗೆ ವಲಸೆ ಹೋಗುವ ಬದಲು ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ. ಮುಖ್ಯವಾಗಿ ಗೋಕಾಕ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಮೊದಲ ಆದ್ಯತೆ ನೀಡಲಾಗುವುದು. ಶೀಘ್ರದಲ್ಲಿಯೇ ಈ ಕೈಗಾರಿಕಾ ಪ್ರದೇಶ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಕೃಷಿ ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್, KIADB ವಿರುದ್ಧ ತಿರುಗಿಬಿದ್ದ ರೈತರು
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಕೊಣ್ಣೂರ ಪುರ ಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ, ಕೈಗಾರಿಕಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Mysuru: ಸರ್ಕಾರದಿಂದ ನವೋದ್ಯಮ ನೀತಿ ರೂಪಿಸಿ ಕೈಗಾರಿಕೆಗೆ ಪ್ರೋತ್ಸಾಹ: ಡಾ.ಇ.ವಿ. ರಮಣರೆಡ್ಡಿ
ಗೋಕಾಕ ತಾಲೂಕಿನ ಶಿವಾಪೂರ ಗ್ರಾಮದ ಮರಡಿಸಿದ್ದಪ್ಪ ದೇವಸ್ಥಾನದ ಹತ್ತಿರ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.