ಕೈ ತಪ್ಪಿದ ಸಚಿವ ಸ್ಥಾನ : ಮುಂದಿನ ತಮ್ಮ ನಿರ್ಧಾರ ತಿಳಿಸಿದ ಮುನಿರತ್ನ
ರಾಜರಾಜೇಶ್ವರಿ ನಗರ ಕ್ಷೇತ್ರದ ನೂತನ ಶಾಸಕ ಮುನಿರತ್ನಗೆ ಸದ್ಯ ಬಿಎಸ್ ವೈ ಸಂಪುಟದಲ್ಲಿ ಸಚಿವ ಸ್ಥಾನ ತಪ್ಪಿದ್ದು ಇದೀಗ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಅವರು ತಿಳಿಸಿದ್ದಾರೆ.
ದಾವಣಗೆರೆ (ಜ.16): ಸಚಿವ ಸ್ಥಾನ ಸದ್ಯಕ್ಕೆ ಮುಗಿದ ಅಧ್ಯಾಯವಾಗಿದ್ದು, ಆ ಬಗ್ಗೆ ಈಗ ಚರ್ಚೆ ಬೇಡ. ಅದಕ್ಕೂ ಕಾಲ ಕೂಡಿ ಬರುತ್ತದೆ ಎಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ನಾನು ಪಕ್ಷ ಸಂಘಟನೆ, ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುತ್ತೇನೆ ಎಂದರು.
ಎಲ್ಲದಕ್ಕೂ ದೈವಕೃಪೆ ಬೇಕು. ಯಾವಾಗ ಕಾಲ ಕೂಡಿ ಬರುತ್ತದೋ ನೋಡೋಣ. ನನಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಕಾರಣ ಏನೂ ಇಲ್ಲ. ಆದರೂ, ಯಾಕೆ ಕೈಬಿಟ್ಟರೋ ಗೊತ್ತಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಬಿಟ್ಟು ಬಂದ ಮುನಿರತ್ನಗೆ ಮಂತ್ರಿ ಸ್ಥಾನ ಕೈತಪ್ಪಿದ್ದೇಕೆ? ಕೊನೆಗೂ ಕಾರಣ ಸಿಕ್ತು..
ಅಧಿಕಾರ ಸಿಗಲಿಲ್ಲವೆಂದು ಆರೋಪ-ಪ್ರತ್ಯಾರೋಪ ಮಾಡುವವನು ನಾನಲ್ಲ. ಬಿಜೆಪಿ ವರಿಷ್ಠರು ಹಾಗೂ ಮುಖ್ಯಮಂತ್ರಿ ನನಗೆ ಸಚಿವ ಸ್ಥಾನ ನೀಡಲು ಬದ್ಧರಿದ್ದಾರೆ. ಅವರ ಮೇಲೆ ನಂಬಿಕೆ ಇದೆ. ಅನಿವಾರ್ಯ ಕಾರಣಾಂತರದಿಂದ ಸಚಿವ ಸ್ಥಾನ ಈಗ ಕೈ ತಪ್ಪಿರಬಹುದು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆಂಬ ವಿಶ್ವಾಸವಿದೆ ಎಂದರು.
ಸಿಡಿ ಇದ್ದರೆ ಬಿಡುಗಡೆ ಮಾಡಲಿ...
ದಾವಣಗೆರೆ: ಕೈಯಲ್ಲಿ ಸಿ.ಡಿ. ಇದ್ದರೆ ಬಿಡುಗಡೆ ಮಾಡಲಿ. ಗೊಂದಲ ಮಾಡುವುದು ಬೇಡ. ಸುಳ್ಳು - ಆಧಾರ ರಹಿತ ಆರೋಪ ಮಾಡುವುದು ಶೋಭೆ ತರುವುದಿಲ್ಲ ಎಂದು ಮುನಿರತ್ನ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿದರು.
ರಾಜಕೀಯ ಕಾರಣಕ್ಕೆ ಸಿದ್ದರಾಮಯ್ಯ ಮಾತನಾಡಲೇ ಬೇಕು. ಆದರೆ, ಆಧಾರ ಇಟ್ಟುಕೊಂಡು ಮಾತನಾಡಬೇಕು. ಊಹಾಪೋಹ ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಸುಭದ್ರ ಸರ್ಕಾರ ಇರುತ್ತದೆಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ವತಃ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪನವರೇ ಮುಂದಿನ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಮುನಿರತ್ನ ಹೇಳಿದರು.