'ಡಿಕೆಶಿ ನೇತೃತ್ವದಲ್ಲಿ ಶೀಘ್ರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ನಿಶ್ಚಿತ'
ಕಾಂಗ್ರೆಸ್ ಶಿಘ್ರದಲ್ಲೇ ಡಿಕೆಶಿ ನೇತೃತ್ವದಲ್ಲಿ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿಯಲಾಗಿದೆ.
ಹೊಸಕೋಟೆ (ನ.05): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಲಕ್ಕೊಂಡಹಳ್ಳಿ ಪ್ರಸಾದ್ ತಿಳಿಸಿದರು.
ನಗರದ ಹೊರವಲಯದ ಸಯ್ಯದ್ ಪ್ಯಾಲೆಸ್‌ನಲ್ಲಿ ನಡೆದ ತಾಲೂಕು ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮುಕ್ತ ಹಾಗೂ ಅಭಿವೃದ್ಧಿಶೀಲ ಆಡಳಿತ ನೀಡುವುದರ ಮೂಲಕ ಮತದಾರರ ಮನಸ್ಸನ್ನು ಗೆದ್ದಿದೆ. ಆದರೆ ಬಿಜೆಪಿ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದು ಅಧಿಕಾರ ನಡೆಸುತ್ತಿದ್ದು, ಭ್ರಷ್ಟಾಚಾರದ ಮೂಲಕ ರಾಜ್ಯದ ಅಭಿವೃದ್ಧಿ ಮರೆತಿದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟಬಹುಮತದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಬಿಜೆಪಿಯೇ 2 ಸೀಟು ಗೆಲ್ಲಲಿದೆ : ಗುಪ್ತಚರ ಇಲಾಖೆಯಿಂದ ಮಾಹಿತಿ
ಕೆಪಿಸಿಸಿ ಸದಸ್ಯ ತಿರುವರಂಗ ನಾರಾಯಣಸ್ವಾಮಿ ಮಾತನಾಡಿ, ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ವ್ಯಾಪಕ ಚರ್ಚೆಯಾಗಿದೆ. ಆದರೆ ತಾಲೂಕಿನಲ್ಲಿ ಕಾಂಗ್ರೆಸ್ ಕಟ್ಟಾಳುಗಳು ಯಾರೇ ಬಂದರೂ ಪಕ್ಷಕ್ಕಾಗಿ ದುಡಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೂಲ ಕಾಂಗ್ರೆಸ್‌ಗರನ್ನು ಸಮನ್ವಯತೆಯಿಂದ ಕರೆದುಕೊಂಡುವ ಹೋಗುವ ದೊಡ್ಡ ಜವಾಬ್ದಾರಿ ಕೂಡ ಅವರ ಮೇಲಿದೆ. ಸಂಪೂರ್ಣ ವರದಿಯನ್ನು ಕೆಪಿಸಿಸಿಗೆ ನೀಡಿದ್ದು, ಅವರ ತೀರ್ಮಾನ ಅಂತಿಮವಾಗಿರುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ, ಕೆಪಿಸಿಸಿ ಸದಸ್ಯ ಶಿವಕುಮಾರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಎಚ್.ಕೆ. ರಮೇಶ್‌ರೆಡ್ಡಿ, ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ತಾ.ರಾ.ವೆಂಕಟೇಶ್, ಮುಖಂಡ ನಾರಾಯಣಗೌಡ, ತಾಪಂ ಸದಸ್ಯೆ ಮುತ್ಸಂದ್ರ ಇಂದುಮತಿ ಕೃಷ್ಣಾರೆಡ್ಡಿ (ಕಿಟ್ಟಿ), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಗೀರ್ ಅಹಮದ್, ಹೇಮಂತ್ ಕುಮಾರ್, ಚಂದ್ರೇಗೌಡ, ಲಕ್ಕೊಂಡಹಳ್ಳಿ ಮಂಜುನಾಥ್, ಕೃಷ್ಣಮೂರ್ತಿ ಇತರೆ ಮುಖಂಡರು ಹಾಜರಿದ್ದರು.