ಬೆಳಗಾವಿಯ ಶಾಹು ನಗರದಲ್ಲಿ ಅಂಜನಾ ಧಾಮೋನೆ ಎಂಬ ವೃದ್ಧೆ ನಿಧನರಾದಾಗ, ಅವರ ಇಬ್ಬರು ಪುತ್ರರು ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ್ದಾರೆ. ಮಕ್ಕಳ ಅಮಾನವೀಯ ವರ್ತನೆಯಿಂದಾಗಿ, ಸ್ಥಳೀಯ ಸಮಾಜ ಸೇವಕರೇ ಮುಂದೆ ಬಂದು ವೃದ್ಧೆಯ ಅಂತಿಮ ಸಂಸ್ಕಾರವನ್ನು ನೆರವೇರಿಸಿದ್ದಾರೆ.
ಬೆಳಗಾವಿ (ಏ.21): ತಾಯಿಯೇ ಜೀವದ ಮೂಲ ಎಂದು ಹೇಳಿಕೊಳ್ಳುವ ಸಮಾಜದಲ್ಲೇ ಇಬ್ಬರು ಪುತ್ರರು ತಮ್ಮ ತಾಯಿಯ ಅಂತ್ಯಕ್ರಿಯೆಗೂ ಬಾರದೆ ಅಮಾನವೀಯವಾಗಿ ವರ್ತಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಬ್ಬರು ಪುತ್ರರಿದ್ರೂ ತಾಯಿ ಒಂಟಿ ಬದುಕು
ಬೆಳಗಾವಿಯ ಶಾಹು ನಗರದ ಅಂಜನಾ ಧಾಮೋನೆ ಎಂಬ ವೃದ್ಧೆ ಏ.15ರಂದು ನಿಧನರಾಗಿದ್ದರು. ಆಕೆಗೆ ಇಬ್ಬರು ಪುತ್ರರು. ಕಷ್ಟದಲ್ಲಿ ಸಾಕಿ ಸಲುಹಿ ದೊಡ್ಡವರನ್ನಾಗಿ ಬೆಳೆಸಿದ್ದ ತಾಯಿ. ಆದರೆ ತಾಯಿ ಮಾತ್ರ ತನ್ನ ಕೊನೆ ದಿನಗಳನ್ನ ಒಂಟಿಯಾಗಿ ಕಳೆದಿರುವುದು ದುರಂತ.
'ನೀವೇ ಮಾಡಿಕೊಳ್ಳಿ' ಎಂದ ಪುತ್ರರು; ತಾಯಿ ಅಂತ್ಯಕ್ರಿಯೆಗೆ ನೆರವಾದ ಸಮಾಜ ಸೇವಕರು
ಆ ತಾಯಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಜೀವನದ ಕೊನೆಯ ದಿನಗಳನ್ನು ಒಂಟಿಯಾಗಿಯೇ ಕಳೆದಿದ್ದರು. ವೃದ್ಧೆಯ ನಿಧನದ ವಿಷಯವನ್ನು ಸ್ಥಳೀಯರು ತಕ್ಷಣವೇ ಮಕ್ಕಳಿಗೆ ತಿಳಿಸಿದ್ದಾರೆ. ಆದರೆ, ಪುತ್ರರು ಯಾವುದೇ ದುಃಖ ವ್ಯಕ್ತಪಡಿಸದೇ ನೀವೇ ಅಂತ್ಯಕ್ರಿಯೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಇವರೆಂತಹ ಮಕ್ಕಳು! ಹೆತ್ತ ತಾಯಿಯ ಅಂತ್ಯಕ್ರಿಯೆಗೂ ಬಾರದದ ಮಕ್ಕಳ ಬಗ್ಗೆ ಬೇಸರ ವ್ಯಕ್ತಪಡಿಸಿ ನಗರದ ಸಮಾಜ ಸೇವಕರೇ ವೃದ್ಧೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.


