ಉಪ್ಪಿನಂಗಡಿ(ಜೂ.16): ತಂದೆ- ಮಕ್ಕಳ ನಡುವೆ ನಡೆದ ಜಗಳ ತಾರಕ್ಕೇರಿದ ಪರಿಣಾಮ ಮಕ್ಕಳಿಬ್ಬರು ತಂದೆಯನ್ನು ಬರ್ಬರವಾಗಿ ಕತ್ತಿಯಿಂದ ಕಡಿದು ಕೊಲೆಗೈದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಮೇಲಿನ ಮುಗ್ಗದ ಆನೆಪಲ್ಲ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ವೇಳೆ ನಡೆದಿದೆ.

ಇಲ್ಲಿನ ನಿವಾಸಿ ಧರ್ಣಪ್ಪ ಪೂಜಾರಿ ಯಾನೆ ಕೊರಗಪ್ಪ ಪೂಜಾರಿ (61) ಕೊಲೆಯಾದವರು. ಮಕ್ಕಳಾದ ಮೋನಪ್ಪ ಪೂಜಾರಿ (34) ಹಾಗೂ ನವೀನ (30) ತಂದೆಯನ್ನು ಕೊಂದ ಆರೋಪಿಗಳು.

ಕಾಸರಗೋಡು ವಿದ್ಯಾರ್ಥಿಗಳಿಗೆ ಗಡಿ ಭಾಗದಿಂದ ಬಸ್‌ ಸೌಲಭ್ಯ..!

ಮೂರ್ತೆದಾರಿಕೆ ಹಾಗೂ ಕೂಲಿ ವೃತ್ತಿ ಮಾಡುತ್ತಿದ್ದ ಧರ್ಣಪ್ಪ ಪೂಜಾರಿ ಸಮಾಜಿಕವಾಗಿ ಸಜ್ಜನಾಗಿದ್ದರು. ಆದರೆ ಮದ್ಯವ್ಯಸನಿಯಾಗಿದ್ದ ಇವರು ಕುಡಿದು ಬಂದು ಮನೆಯವರಿಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಧರ್ಣಪ್ಪ ಪೂಜಾರಿ ಅವರಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದು ಅವರೆಲ್ಲರೂ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಧರ್ಣಪ್ಪ ಪೂಜಾರಿಯ ಮನೆಯ ಪಕ್ಕದಲ್ಲೇ ಅವರ ಸಹೋದರನ ಮನೆಯಿದ್ದು, ಭಾನುವಾರ ಮಧ್ಯಾಹ್ನ ಅಲ್ಲಿ ದೈವಗಳಿಗೆ ತಂಬಿಲ ಸೇವೆ ಇತ್ತು.

ಕಾಡು ಪ್ರಾಣಿ ಎಂದು ತಿಳಿದು ಹಾರಿಸಿದ ಗುಂಡು ಗೆಳಯನಿಗೆ ಬಿತ್ತು...!

ಅದಕ್ಕೆಂದು ಇವರ ಐವರು ಮಕ್ಕಳು ಬಂದು, ಅದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಜಗಳವಾಡಿದ್ದ ಧರ್ಣಪ್ಪ ಪೂಜಾರಿ, ಮಕ್ಕಳು ಮನೆಗೆ ಬಂದಾಗಲೂ ಜಗಳ ಮಾಡಿದ್ದು, ಕತ್ತಿಯಿಂದ ಮಕ್ಕಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆನ್ನಲಾಗಿದೆ. ಈ ವೇಳೆ ಜಗಳ ತಾರಕ್ಕೇರಿ ಹೊೖಕೈ ನಡೆದು ಮಕ್ಕಳು ಅದೇ ಕತ್ತಿಯಿಂದ ತಂದೆಗೆ ಕಡಿದಿದ್ದು, ಅಡಕೆ ಮರದ ಸಲಕೆಯಿಂದಲೂ ಹಲ್ಲೆ ನಡೆಸಿ, ಬರ್ಬರವಾಗಿ ಕೊಲೆಗೈದಿದ್ದಾರೆ. ರಾತ್ರಿ ಸುಮಾರು 11.45ರಿಂದ 12.15ರ ನಡುವೆ ಈ ಘಟನೆ ನಡೆದಿದೆ.

ಸುದ್ದಿ ತಿಳಿದು ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ಗ್ರಾಮಾಂತರ ಪೊಲೀಸ್‌ ವೃತ್ತ ನಿರೀಕ್ಷಕ ನಾಗೇಶ್‌ ಕದ್ರಿ, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಈರಯ್ಯ ಹಾಗೂ ತಂಡ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದು, ಮೃತರ ಪುತ್ರಿ ರಾಜೀವಿ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.