ಬಳ್ಳಾರಿ(ಫೆ.13): ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮುಖ್ಯಮಂತ್ರಿಗಳು ತುಂಬಾ ಒತ್ತಡದಲ್ಲಿದ್ದು, ಇಂತಹ ವೇಳೆ ಸಚಿವ ಸ್ಥಾನ ಕೇಳುವುದು ಸರಿಯಲ್ಲ ಎಂದಿರುವ ಶಾಸಕ ಜಿ. ಸೋಮಶೇಖರ ರೆಡ್ಡಿ, ‘ಕಾಂಗ್ರೆಸ್‌ನಿಂದ ಬಂದವರಿಗೆ ಮೊದಲು ಸಚಿವ ಸ್ಥಾನ ನೀಡಲಿ’ ಎಂದು ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ಐದು ದಶಕಗಳಿಂದ ಪಕ್ಷಕ್ಕಾಗಿ ದುಡಿದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಡದಲ್ಲಿ ಸಿಲುಕಿಸುವ ಕೆಲಸವನ್ನು ಯಾರೂ ಮಾಡಬಾರದು. ಹೀಗಾಗಿ ನಾನು ಸಚಿವ ಸ್ಥಾನ ನೀಡುವಂತೆ ಅವರನ್ನು ಕೇಳುವು​ದಿಲ್ಲ ಎಂದು ಸ್ಪಷ್ಟಪಡಿಸಿದ​ರು.

ವಿಜಯನಗರ ಜಿಲ್ಲೆ ಉದಯ ಬೆನ್ನಲ್ಲೇ ರೆಡ್ಡಿ ವರ್ಸಸ್ ಸಿಂಗ್ ಕಾದಾಟ ಶುರು

ಜಿಲ್ಲಾ ವಿಭಜನೆ ಮಾಡಿರುವ ಆನಂದ ಸಿಂಗ್‌ ಅವರು ಜಿಲ್ಲಾ ಉಸ್ತುವಾರಿಯಾಗಿ ಮುಂದುವರಿಯಲು ನನ್ನ ಆಕ್ಷೇಪಣೆ ಇದೆ ಎಂದು ಪುನರುಚ್ಛರಿಸಿದ ರೆಡ್ಡಿ, ತರಾತುರಿಯಲ್ಲಿ ಜಿಲ್ಲೆ ವಿಭಜನೆ ಮಾಡುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದರು.
ಇನ್ನು ಆರು ತಿಂಗಳು ಸಮಯವಿದೆ. ಮತ್ತೆ ಬದಲಾವಣೆಯಾಗಬಹುದು. ಈ ಸಂಬಂಧ ಮುಖ್ಯಮಂತ್ರಿಗಳು ಇಬ್ಬರನ್ನೂ ಕರೆಸಿ ಮಾತನಾಡುವೆ ಎಂದಿದ್ದಾರೆ. ಆಕ್ಷೇಪಣೆ ಬರೀ ಐದು ಸಾವಿರ ಬಂದಿದೆ ಎಂಬುದು ಸುಳ್ಳು ಲೆಕ್ಕ ನೀಡಿ, ನೋಟಿಫಿಕೇಷನ್‌ನಲ್ಲಿ ವಿರೋಧವನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ಕುರಿತು ಬೆಂಗಳೂರಿಗೆ ನಾನೇ ಹೋಗಿ ಪರಿಶೀಲಿಸುತ್ತೇನೆ ಎಂದು ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದರು.