ಬಳ್ಳಾರಿ(ಜ.25): ಕೇವಲ ಆನಂದ ಸಿಂಗ್ ಒಬ್ಬರಿಗಾಗಿ ಮಾತ್ರ ಬಳ್ಳಾರಿ ವಿಭಜನೆಯನ್ನ ಮಾಡಲಾಗುತ್ತಿದೆ. ಬೇರೆ ಯಾರು ಕೂಡ ‌ಜಿಲ್ಲೆ ವಿಭಜನೆ ಮಾಡುವಂತೆ ಕೇಳಿರಲಿಲ್ಲ ಎಂದು ಹೇಳುವ ಮೂಲಕ ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರಕ್ಕೆ ಶಾಸಕ ಸೋಮಶೇಖರ ರೆಡ್ಡಿ ಮತ್ತೊಮ್ಮೆ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ. 

ವಿಭಜನೆಯಾದರೆ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಬೇಕು ಎನ್ನುವ ಆಂಧ್ರ ಮುಖಂಡರ ಹೇಳಿಕೆ ವಿಚಾರಕ್ಕೆ ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕಕ್ರಿಯೆ ನೀಡಿದ ಅವರು, ಬಳ್ಳಾರಿ ವಿಭಜನೆಯಾದ್ರೇ ಈ ರೀತಿಯ ಕೂಗು ಹೆಚ್ಚಾಗುತ್ತದೆ ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹೇಳಿದ್ದೆ, ಆದ್ರೇ ಅವರು ಕೇಳಲಿಲ್ಲ ಕೇವಲ ಆನಂದ ಸಿಂಗ್ ಅವರಿಗಾಗಿ ಜಿಲ್ಲೆಯನ್ನ ವಿಭಜನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬೆಳಗಾವಿ ಆಯ್ತು ಇದೀಗ ಬಳ್ಳಾರಿ ಆಂಧ್ರಕ್ಕೆ ಸೇರಿಸಲು ಒತ್ತಾಯ

ಯಾವುದೇ ಕಾರಣಕ್ಕೂ ಬಳ್ಳಾರಿ ಆಂಧ್ರಕ್ಕೆ ಸೇರಿಸುವ ಪ್ರಶ್ನೆಯೇ ಇಲ್ಲ, ಮೈಸೂರು ಸರ್ಕಾರದಲ್ಲಿ ಆಂಧ್ರದ ಕೆಲ ತಾಲೂಕುಗಳು ಬಳ್ಳಾರಿಯಲ್ಲಿ ಇದ್ದವು, ಬಳ್ಳಾರಿಯಿಂದ  ಕೆಲ ತಾಲೂಕುಗಳು ಆಂಧ್ರಕ್ಕೆ ಹೋಗಿವೆ. ನಮ್ಮಿಂದ ಅವರು ಹೋಗಿದ್ದಾರೆ ನಾವು ಅವರಿಂದ ಹೊರಗೆ ಬಂದಿಲ್ಲ. ಜಿಲ್ಲೆ ವಿಭಜನೆಯಾದ್ರೇ ಈ ರೀತಿಯ ಸಮಸ್ಯೆಗಳು ಬರುತ್ತವೆ. ಬಳ್ಳಾರಿ ಮತ್ತೊಂದು ಬೆಳಗಾವಿ ಆಗಬಾರದು ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ. ಕೆಲವೊಮ್ಮೆ ಏನು ಮಾಡಲಾಗಲ್ಲ, ಬಳ್ಳಾರಿ ರಾಜ್ಯದಲ್ಲಿಯೇ ಇರುತ್ತದೆ ಈ ಸಮಸ್ಯೆಯನ್ನ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ತಿಳಿಸಿದ್ದಾರೆ.