ಜಿಲ್ಲೆ ವಿಭಜಿಸಿದವರಿಗೆ ಉಸ್ತುವಾರಿ: ರೆಡ್ಡಿ ಬೇಸರ
- ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿದವರನ್ನು ಉಸ್ತುವಾರಿ ಮಂತ್ರಿಯನ್ನಾಗಿ ಮಾಡಿರುವುದು ನಮ್ಮ ಜಿಲ್ಲೆಯ ದುರ್ದೈವ
- ಬಿಜೆಪಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅಸಮಾಧಾನ
ಬಳ್ಳಾರಿ (ಆ.22): ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿದವರನ್ನು ಉಸ್ತುವಾರಿ ಮಂತ್ರಿಯನ್ನಾಗಿ ಮಾಡಿರುವುದು ನಮ್ಮ ಜಿಲ್ಲೆಯ ದುರ್ದೈವ ಎಂದು ಬಿಜೆಪಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಸ್ತುವಾರಿ ಬದಲಾವಣೆ ಮಾಡಿ ಎಂದು ನಾವು ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ, ಬದಲಿಸಿಲ್ಲ. 3-4 ದಿನಗಳಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ರಾಮುಲುಗೆ ಉಸ್ತುವಾರಿ ನೀಡುವಂತೆ ಮನವಿ ಮಾಡುವೆ. ಬಳ್ಳಾರಿ ರಾಮುಲು ಕರ್ಮಭೂಮಿ. ಹೀಗಾಗಿ, ಈ ಜಿಲ್ಲೆಯ ಉಸ್ತುವಾರಿ ಅವರಿಗೇ ನೀಡಬೇಕೆಂದು ಒತ್ತಾಯಿಸುವೆ’ ಎಂದರು.
ಬೊಮ್ಮಾಯಿ ಬೆಳಗಾವಿ ಭೇಟಿ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ
ಆನಂದಸಿಂಗ್ ಅವರ ವಿರುದ್ಧ ನನಗೆ ವೈಯುಕ್ತಿಕ ಅಸಮಾಧಾನವಿಲ್ಲ. ನಮ್ಮ ಜಿಲ್ಲೆಯನ್ನು ವಿಭಜನೆ ಮಾಡಿದರು ಎಂಬ ನೋವಿದೆ. ಶ್ರೀರಾಮುಲು ಅವರನ್ನು ಜಿಲ್ಲಾ ಮಂತ್ರಿಯನ್ನಾಗಿ ಮಾಡಿದರೆ ಈ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಜತೆಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಸಹೋದರ ಆಗಮನ ಆನೆ ಬಲ : ನನ್ನ ಸಹೋದರ ಜನಾರ್ದನ ರೆಡ್ಡಿ ಬಂದಿರುವುದು ನಮಗೆ ದೊಡ್ಡ ಬಲ ಬಂದಂತಾಗಿದೆ ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ತಿಳಿಸಿದರು.
ಜನಾರ್ದನ ರೆಡ್ಡಿ ಕುಟುಂಬ ಸದಸ್ಯರು ಎಲ್ಲರೂ ಸೇರಿ ಮನೆಯಲ್ಲಿ ವರ ಮಹಾಲಕ್ಷ್ಮೇ ಪೂಜೆ ನೆರವೇರಿಸಿದ್ದೇವೆ. ಜನಾರ್ದನ ರೆಡ್ಡಿ ಅವರು ಕೆಲ ದಿನಗಳ ಕಾಲ ಸಾರ್ವಜನಿಕರಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುತ್ತಾರೆ ಎಂದರು.