ಕಲಬುರಗಿ(ಮೇ  05)  ಕಾಶ್ಮೀರದ ಗಡಿಯಲ್ಲಿ ದೇಶ ಸೇವೆಯಲ್ಲಿರುವ ಯೋಧನೋರ್ವ ಕೊರೋನಾ ಸೋಂಕಿಗೆ ತುತ್ತಾಗಿ ಉಸಿರಾಟದ ತೊಂದರೆ ಎದುರಿಸುತ್ತಿರುವ ತಾಯಿಯನ್ನು ಬದುಕಿಸಿಕೊಡಿ ಎಂದು  ಗಡಿಯಿಂದಲೇ ಕಣ್ಣೀರಿಟ್ಟಿರುವ ಈ ಪ್ರಸಂಗ ನಡೆದಿದೆ.

ಕೊರೋನಾ ಸೋಂಕಿನಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ತನ್ನ ತಾಯಿಗೆ ಆಮ್ಲಜನಕ ಒದಗಿಸಿಕೊಡಿ ಎಂದು ಕಲಬುರಗಿ ತಾಲೂಕಿನ ಪಾಣೆಗಾಂವ್ ಗ್ರಾಮದ ಯೋಧ ಸಂಜೀವ್ ರಾಠೋಡ್ ತನ್ನ ಹೆತ್ತಮ್ಮನಿಗಾಗಿ ಗಳಗಳನೆ ಕಣ್ಣೀರು ಹಾಕಿದ್ದಾರೆ. 

ಕಲಬುರಗಿ ಜಿಲ್ಲೆಯ ಪಾಣೆಗಾಂವ್‍ನಲ್ಲಿರುವ ಇವರ ತಾಯಿಗೆ ಕೊರೋನಾ ಸೋಂಕು ಧೃಢಪಟ್ಟಿದ್ದು ಉಸಿರಾಟ ತೊಂದರೆ ಕಾಡುತ್ತಿದೆ, ಆಸ್ಪತ್ರೆಯಲ್ಲಿ ಆಮ್ಲಜನಕ ಸೌಲಭ್ಯ ಇರುವ ಹಾಸಿಗೆ ಕೊಡಿಸಿರಿ ಎಂದು ಕಾಶ್ಮೀರದಿಂದಲೇ ಈ ಸೈನಿಕ ಎಲ್ಲರಿಗೂ ಕೈ ಜೋಡಿಸಿ ಮನವಿ ಮಾಡುವ ವಿಡಿಯೋ ರವಾನಿಸಿದ್ದಾರೆ. ಸೈನಿಕನ ಈ ಮನ ಕಲಕುವಂತಹ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

 ಸಿಆರ್‍ಪಿಫ್ ಬಟಾಲಿಯನ್‍ನಲ್ಲಿ ಯೋಧನಾಗಿರುವ ಸಂಜೀವ ಸದ್ಯ ಕಾಶ್ಮೀರ ಗಡಿಯಲ್ಲಿ ಕೆಲಸದಲ್ಲಿದ್ದಾರೆ. ಅಲ್ಲಿಂದಲೇ ವಿಡಿಯೋ ಮಾಡಿ ತನ್ನ ತಾಯಿಯ ಸಹಾಯಕ್ಕೆ ಯಾರಾದರೂ ಮುಂದೆ ಬನ್ನಿ ಅಂತ ಪರಿಪರಿಯಾಗಿ ಬೇಡಿಕೊಂಡು ಕಣ್ಣೀರು ಹಾಕಿದ್ದಾರೆ.

ಕೊರೋನಾದಿಂದ ಗುಂಮುಖರಾದ ಅಜ್ಜಿಯ ಮುದ್ದಾಡಿದ ವೈದ್ಯ.. ಭಾವನಾತ್ಮಕ ಸಂದೇಶ

ಸೈನಿಕ ಸಂಜೀವ್ ಅವರ ತಾಯಿಗೆ ನಾಲ್ಕು ದಿನಗಳ ಹಿಂದೆ ಕೊರೋನಾ ಸೋಂಕು ದೃಢಪಟ್ಟಿದೆ. ಪಾಣೆಗಾಂವ್ ಗ್ರಾಮದ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿದ್ದು, ದಿನದಿಂದ ದಿನಕ್ಕೆ ಆಕ್ಸೀಜನ್ ಸ್ಯಾಚುರೇಷನ್ ಕಡಿಮೆಯಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಕಲಬುರಗಿಯಲ್ಲಿ ಆಮ್ಲಜನಕ, ಆಸ್ಪತ್ರೆ ಬೆಡ್ಗಾಗಿ ಪರದಾಟ ಸಾಗಿರೋದರಿಂದ ಯಾರಾದರೂ ತಮ್ಮ ತಾಯಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿ, ಬದುಕಿಸಿಕೊಟ್ಟಲ್ಲಿ ಜೀವನದ ಕೊನೆಯ ಉರಿಸು ಇರೋವರೆಗೂ ಋಣಿಯಾಗಿರುತ್ತೇನೆಂದು ಸೈನಿಕ ಸಂಜೀವ ಕೈ ಜೋಡಿಸಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

ಕಳೆದ 15 ವರ್ಷಗಳಿಂದ ದೇಶ ಸೇವೆಯಲ್ಲಿರುವ ಸಂಜೀವ ತನ್ನ ತಾಯಿಗೆ ಒದಗಿರುವ ಘೋರ ದುರವಸ್ಥೆಗೆ ತೀವ್ರ ಕಳವಳಗೊಂಡಿದ್ದಾರೆ. ಕಲಬುರಗಿಯಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಇಲ್ಲವೆಂಬ ಆಘಾತಕಾರಿ ಸುದ್ದಿಯೂ ಆತ ಬಂಧುಗಳಿಂದ ಪಡೆದುಕೊಂಡಿರೋದರಿಂದ ಅವರ ಮನದಲ್ಲಿನ ದುಗುಡು ದುಪ್ಪಟ್ಟಾಗಿದೆ.

ಅದಕ್ಕಾಗಿಯೇ ಹೇಗಾದರೂ ಮಾಡಿ ಹೆತ್ತಮ್ಮನನ್ನು ಕೊರೋನಾ ಪಾಶದಿಂದ ಬಿಡಿಸಿಕೊಂಡರೆ ಸಾಕೆಂದು ಅಸಹಾಯಕತೆಯಿಂದ ಕಾಶ್ಮೀರದಿಂದಲೇ ಆಕ್ಸಿಜನ್ ಗಾಗಿ ಮನವಿ ಮಾಡಿ ಕಣ್ಣೀರಿಟ್ಟಿದ್ದಾರೆ.

"