Asianet Suvarna News Asianet Suvarna News

Uttarakannada: ಯೋಧನ ಸ್ಮಾರಕಕ್ಕೆ ಕಾರವಾರ ವಾರ್ಡ್ ಸದಸ್ಯನಿಂದ ಕಾಟ

ಆತ ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಹೆಮ್ಮೆಯ ವೀರಯೋಧ. ಈತನ ನೆನಪಿಗಾಗಿ ಕುಟುಂಬದವರು, ಸ್ನೇಹಿತರು ಅಭಿಮಾನಿಗಳು ಸೇರಿ ಮನೆಯ ಸಮೀಪದ ರಸ್ತೆ ಪಕ್ಕದ ಖಾಸಗಿ ಜಮೀನಿನಲ್ಲಿ ಸ್ಮಾರಕವೊಂದನ್ನು ನಿರ್ಮಿಸಿದ್ದರು. ಇದೀಗ ವಾರ್ಡ್ ಸದಸ್ಯ ಮತ್ತು ಮನೆಯವರಿಂದ ಈ ಸ್ಮಾರಕಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

soldier memorial Troubled by Karwar Ward Member gow
Author
First Published Dec 6, 2022, 10:29 PM IST

ವರದಿ: ಭರತ್‌ರಾಜ್ ಕಲ್ಲಡ್ಕ , ಏಷಿಯಾನೆಟ್ ಸುವರ್ಣ ನ್ಯೂಸ್ 

ಕಾರವಾರ (ಡಿ.6): ಆತ ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಹೆಮ್ಮೆಯ ವೀರಯೋಧ. ಕಿರಿಯ ವಯಸ್ಸಿನಲ್ಲೇ ಹುತಾತ್ಮನಾದ ಯೋಧನ ನೆನಪಿಗಾಗಿ ಕುಟುಂಬಸ್ಥರು, ಗೆಳೆಯರು ಹಾಗೂ ಅಭಿಮಾನಿಗಳು ಆತನ ಮನೆಯ ಸಮೀಪದ ರಸ್ತೆ ಪಕ್ಕದ ಖಾಸಗಿ ಜಮೀನಿನಲ್ಲಿ ಸ್ಮಾರಕವೊಂದನ್ನು ನಿರ್ಮಿಸಿದ್ದರು. ಆದರೆ, ಇದೀಗ ಸ್ಮಾರಕವಿರುವ ಪ್ರದೇಶದ ಹತ್ತಿರದ ಮನೆಯವರು ಸ್ಮಾರಕವಿರುವ ಭಾಗದಲ್ಲೇ ಗೇಟ್ ನಿರ್ಮಿಸಿದ್ದು, ಸ್ಮಾರಕಕ್ಕೆ ಹಾನಿ ಮಾಡಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಕಾರಣದಿಂದ ಯೋಧನ ಮನೆಯವರು ರಕ್ಷಣೆಗಾಗಿ ಅಧಿಕಾರಿಗಳ‌‌ ಮೊರೆ ಹೋಗುತ್ತಿದ್ದಾರೆ. ದೇಶಕ್ಕಾಗಿ ಹುತಾತ್ಮನಾದ ಯೋಧನ ಸ್ಮಾರಕ ಇದೀಗ ಖಾಸಗಿ ವ್ಯಕ್ತಿಗಳ ರಾಜಕೀಯದಿಂದಾಗಿ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ ಎಂದು ಯೋಧನ‌ ಮನೆಯವರು ನೋವು ವ್ಯಕ್ತಪಡಿಸುತ್ತಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಸಾಯಿಕಟ್ಟಾ ನಿವಾಸಿ ಸುರೇಶ್ ನಾಯ್ಕ್ ಎಂಬವರ ಕಿರಿಯ ಮಗ ವಿಜಯಾನಂದ ನಾಯ್ಕ ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ. 2018ರ ಜುಲೈ 9 ರಂದು ಛತ್ತೀಸ್‌ಗಢದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ನಕ್ಸಲರ ಬಾಂಬ್ ದಾಳಿಗೆ ತುತ್ತಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮನಾಗಿದ್ದ. ಆತನ ಹುಟ್ಟೂರಾದ ಕಾರವಾರದಲ್ಲಿ ಬೃಹತ್ ಮೆರವಣಿಗೆ ಮಾಡುವ ಮೂಲಕ ಹುತಾತ್ಮ ಯೋಧನ ಅಂತ್ಯಸಂಸ್ಕಾರ ನೆರವೇರಿಸಿದ್ದು, ಅದರಂತೆ ಆತನ ನೆನಪಿಗಾಗಿ ಮನೆಯ ಸಮೀಪದ ಖಾಸಗಿ ಜಮೀನಿನಲ್ಲಿ ರಸ್ತೆಗೆ ಹೊಂದಿಕೊಂಡು ಸ್ಮಾರಕವೊಂದನ್ನು ನಿರ್ಮಿಸಲಾಗಿತ್ತು. 

ಅಂದಿನಿಂದ ಇಂದಿನವರೆಗೂ ಆಗಸ್ಟ್ 15ರಂದು, ಜನವರಿ 26ರಂದು ಇಲ್ಲಿ ಧ್ವಜಾರೋಹಣ ಕೂಡಾ ನಡೆಸಲಾಗುತ್ತದೆ.‌ ಇದಾಗಿ ಎರಡು ವರ್ಷಗಳ ಬಳಿಕ 2020ರಲ್ಲಿ ಸ್ಮಾರಕವಿದ್ದ ಪ್ರದೇಶಕ್ಕೆ ಹೊಂದಿಕೊಂಡಿದ್ದ ಜಾಗವನ್ನು ವಾರ್ಡ್ ಸದಸ್ಯ ಮೋಹನ್ ಶಿವಾ ನಾಯ್ಕ್ ಹಾಗೂ ಶ್ಯಾಮ್ ಶಿವಾ ನಾಯ್ಕ್ ಎಂಬವರು ಖರೀದಿಸಿದ್ದು, ಸ್ಮಾರಕವಿರುವ ಪ್ರದೇಶದ ಬಳಿ ತಮ್ಮ ಕಾಂಪೌಂಡ್ ತೆರವುಗೊಳಿಸಿ ಗೇಟ್ ನಿರ್ಮಿಸಿಕೊಂಡಿದ್ದಾರೆ. ವಾರ್ಡ್ ಸದಸ್ಯ ಮೋಹನ್ ಶಿವಾ ನಾಯ್ಕ್ ಹಾಗೂ ಆತನ‌ ಸಹೋದರ ಶ್ಯಾಮ್ ಶಿವಾ ನಾಯ್ಕ್ ದುರುದ್ದೇಶಪೂರ್ವಕವಾಗಿ ಸ್ಮಾರಕಕ್ಕೆ ಹಾನಿಯಾಗುವಂತೆ ವಾಹನವನ್ನು ಚಲಾಯಿಸುತ್ತಿದ್ದು, ಇದನ್ನು ಪ್ರಶ್ನಿಸಿದರೆ ವಿನಾಕಾರಣ ಜಗಳ ತೆಗೆದು ಸ್ಮಾರಕ ತೆರವುಗೊಳಿಸೋದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಅಲ್ಲದೇ, ಪಾಲಿಕೆಯ ಆದೇಶವಿದೆ ಎಂದು ಸ್ಮಾರಕಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ.

KARWAR WARSHIP MUSEUM: ವಾರ್‌ಶಿಪ್ ಮ್ಯೂಸಿಯಂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಪ್ರವಾಸಿಗರ ಬೇಸರ

ಸ್ಮಾರಕದ ಬಳಿಯಿರುವ ಜಾಗವನ್ನು ಖರೀದಿಸಿರುವ ಶ್ಯಾಮ ನಾಯ್ಕ ಹಾಗೂ ಮೋಹನ್ ನಾಯ್ಕ ಅವರ ಜಾಗದ ಮನೆಯ ಎದುರಿಗೆ ಗೇಟ್ ಇದ್ದರೂ ಸಹ ವಿನಾಕಾರಣ ಮನೆಯ ಹಿಂಬದಿಯಿರುವ ಸ್ಮಾರಕಕ್ಕೆ ಹೊಂದಿಕೊಂಡು ಗೇಟ್ ನಿರ್ಮಿಸಿ ತೊಂದರೆ ನೀಡುತ್ತಿದ್ದಾರೆ. ಈ ಗೇಟ್ ಬಂದ್ ಮಾಡುವಂತೆ ಪೊಲೀಸರಿಗೆ ದೂರು ನೀಡಿದ್ದರೂ ಸಹ ಜಾಗದ ವಿಚಾರ ಎಂದು ಪೊಲೀಸರೂ ಸಹ ನೆರವಿಗೆ ಬರುತ್ತಿಲ್ಲ. ನಗರಸಭೆ ಸದಸ್ಯನೆಂದು ಅಧಿಕಾರದ ದರ್ಪದಿಂದ ಕುಟುಂಬಸ್ಥರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಹುತಾತ್ಮ ಮಗನ ಸ್ಮಾರಕಕ್ಕೆ ರಕ್ಷಣೆ ನೀಡಿ ಎಂದು ಯೋಧನ ಪೋಷಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕಣ್ಣೀರಿಟ್ಟಿದ್ದಾರೆ. ಇನ್ನು ಈ ಬಗ್ಗೆ ನಗರಸಭೆ ಆಯುಕ್ತ ಆರ್.ಪಿ. ನಾಯಕ್ ಅವರನ್ನು ಕೇಳಿದ್ರೆ, ಓಡಾಡುವ ರಸ್ತೆ ಬಂದ್ ಮಾಡಿಸಿದ ಕಾರಣಕ್ಕೆ ನೋಟೀಸ್ ನೀಡಿದ್ದು, ಅದನ್ನ ಹೊರತುಪಡಿಸಿ ಯೋಧನ ಸ್ಮಾರಕದ ವಿಚಾರವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ದೇಶಕ್ಕಾಗಿ ಮಡಿದ ಯೋಧನ ಮೇಲೆ ತಮಗೂ ಸಹ ಗೌರವವಿದೆ ಅಂತಾರೆ ಅಧಿಕಾರಿಗಳು.

Indian Navy ಯೋಧರ ಭೇಟಿ ಮಾಡಿದ ಚಿರಂಜೀವಿ: ಎನ್‌ಸಿಸಿ ದಿನಗಳ ಮೆಲುಕು ಹಾಕಿದ ಮೆಗಾ ಸ್ಟಾರ್

ಒಟ್ಟಿನಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನ ಕುಟುಂಬಸ್ಥರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದು, ಪಾಲಿಕೆ ಸದಸ್ಯರೇ ಸ್ಮಾರಕಕ್ಕೆ ಹಾನಿಮಾಡುವಂತೆ ನಡೆದುಕೊಳ್ಳುತ್ತಿರೋದು ನಿಜಕ್ಕೂ ಬೇಸರದ ವಿಚಾರ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮದ್ಯಪ್ರವೇಶಿಸಿ ಹುತಾತ್ಮ ಯೋಧನ ಕುಟುಂಬಸ್ಥರಿಗೆ ಅಭಯ ಹಸ್ತ ತೋರಬೇಕಿದೆ.

Follow Us:
Download App:
  • android
  • ios