ಬೆಂಗಳೂರು [ಡಿ.09]:  ಟೆಕಿಯೊಬ್ಬ ತನ್ನ ಪತ್ನಿಗೆ ಆ್ಯಸಿಡ್‌ ಎರಚಿದ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

ಚಂದ್ರಲೇಔಟ್‌ ನಿವಾಸಿ ಶರತ್‌ (28) ಆತ್ಮಹತ್ಯೆ ಮಾಡಿಕೊಂಡ ಟೆಕಿ. ಶರತ್‌ ಆ್ಯಸಿಡ್‌ ಎರಚಿದಾಗ ಶ್ವೇತಾ(25) ತಪ್ಪಿಸಿಕೊಂಡಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಣ್ಣಿನ ಭಾಗಕ್ಕೆ ಮಾತ್ರ ಗಾಯವಾಗಿದೆ. ಘಟನೆ ವೇಳೆ ಶ್ವೇತಾ ಅವರ ಸಹೋದರಿಗೂ ಆ್ಯಸಿಡ್‌ ಬಿದ್ದು ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆ್ಯಸಿಡ್‌ ದಾಳಿ ಮತ್ತು ಆತ್ಮಹತ್ಯೆ ಪ್ರಕರಣ ಸಂಬಂಧ ಚಂದ್ರಲೇಔಟ್‌ ಹಾಗೂ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

ಚಾಮರಾಜಪೇಟೆ ನಿವಾಸಿಯಾದ ಶ್ವೇತಾ 2 ವರ್ಷಗಳ ಹಿಂದೆ ಶರತ್‌ನನ್ನು ಹಿರಿಯರ ಆಶಯದಂತೆ ವಿವಾಹವಾಗಿದ್ದರು. ಶ್ವೇತಾ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್‌ ಆಗಿದ್ದು, ಶರತ್‌ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ.

ಬೇರೆ ಮನೆ ಮಾಡಿದರೂ ತಪ್ಪದ ಕಿರುಕುಳ:

ಪತಿ, ಅತ್ತೆ-ಮಾವ ಜತೆ ಚಂದ್ರಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ಶ್ವೇತಾ ನೆಲೆಸಿದ್ದರು. ನಿತ್ಯ ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಹಿರಿಯರು ರಾಜೀ ಸಂಧಾನ ನಡೆಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಬಳಿಕ ದಂಪತಿ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪ್ರತ್ಯೇಕವಾಗಿ ಬಂದ ಬಳಿಕವೂ ಶರತ್‌ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದನ್ನು ನಿಲ್ಲಿಸಿರಲಿಲ್ಲ. ಪತಿಯ ಕಿರುಕುಳದಿಂದ ಬೇಸತ್ತ ಶ್ವೇತಾ, ಪತಿಯನ್ನು ತ್ಯಜಿಸಿ ಚಾಮರಾಜಪೇಟೆಯಲ್ಲಿರುವ ಪೋಷಕರ ಮನೆಗೆ ಬಂದಿದ್ದರು. ಪತ್ನಿ ತವರು ಮನೆಗೆ ಹೋದ ಬಳಿಕವೂ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿ ಶರತ್‌ ನಿಂದಿಸುತ್ತಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾದಿನಿ ಮೇಲೂ ದಾಳಿ:  ಜತೆಗೆ ವೀಪರಿತ ಮದ್ಯ ಸೇವಿಸಲು ಆರಂಭಿಸಿದ್ದ ಶರತ್‌ ನ.28ರಂದು ಪತ್ನಿ ತವರು ಮನೆಗೆ ತೆರಳಿ, ಆಕೆಯ ಪೋಷಕರು ಮತ್ತು ಸಹೋದರಿಯನ್ನು ನಿಂದಿಸಿ ಬಂದಿದ್ದ. ಶುಕ್ರವಾರ (ಡಿ.6) ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಶ್ವೇತಾ ತನ್ನ ತಂಗಿ ಜತೆ ಮಾತನಾಡುತ್ತಾ ಮನೆಯಲ್ಲಿ ಕುಳಿತಿದ್ದರು. ಈ ವೇಳೆ ಮನೆಗೆ ಬಂದ ಆರೋಪಿ ಪತ್ನಿ ಜತೆ ಜಗಳ ಪ್ರಾರಂಭಿಸಿದ್ದ. ಏಕಾಏಕಿ ಆ್ಯಸಿಡ್‌ ತೆಗೆದು ಪತ್ನಿ ಮತ್ತು ನಾದಿನಿ ಮೇಲೆ ಎರಚಿದ್ದಾನೆ. ಕೂದಲೆಳೆ ಅಂತರದಲ್ಲಿ ಶ್ವೇತಾ ಮತ್ತು ಅವರ ಸಹೋದರಿ ಪಾರಾಗಿದ್ದು, ಸಣ್ಣಮಟ್ಟದ ಗಾಯಗಳಾಗಿವೆ.

ಇಬ್ಬರು ಚೀರಾಟದ ಕೇಳಿದ ಶರತ್‌ ಸ್ಥಳದಿಂದ ಕಾಲ್ಕಿತ್ತಿದ್ದ. ಘಟನೆಯಿಂದ ಹೆದರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.