Asianet Suvarna News Asianet Suvarna News

ಧಾರವಾಡ: ಸಮಾಜವಾದಿ ಹೋರಾಟಗಾರ ರಾಚಪ್ಪ ಹಡಪದ ಇನ್ನಿಲ್ಲ

ಕಳಚಿದ ಸಮಾಜವಾದಿ ಕೊಂಡಿ ರಾಚಪ್ಪ ಹಡಪದ ವಿಧಿವಶ| ಕಟಿಂಗ್‌ ಸಲೂನ್‌ನಲ್ಲಿ ಚಳವಳಿ ಸಮಾಲೋಚನೆ ನಡೆಸುತ್ತಿದ್ದ ರಾಚಪ್ಪ| ಅವಿವಾಹಿತರಾಗಿದ್ದು ಗಳೆಯರು ಕಟ್ಟಿಸಿಕೊಟ್ಟ ಮನೆಯಲ್ಲಿ ವಾಸವಾಗಿದ್ದರು|  ಶಾಂತವೇರಿ ಗೋಪಾಲಗೌಡರ ಅನುಯಾಯಿಯಾಗಿದ್ದ ಹಡಪದ| 

Socialist Fighter Rachappa Hadapad Passedaway in Hubballi
Author
Bengaluru, First Published Feb 5, 2020, 10:38 AM IST

ಧಾರವಾಡ(ಫೆ.05): ಸರಳ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿದ್ದ ಹಿರಿಯ ಸಮಾಜವಾದಿ ಹೋರಾಟಗಾರ ರಾಚಪ್ಪ ಹಡಪದ (84) ಅನಾರೋಗ್ಯದ ಕಾರಣದಿಂದ ಮಂಗಳವಾರ ನಸುಕಿನ ವೇಳೆ ಇಹಲೋಕ ತ್ಯಜಿಸಿದ್ದು ಸಮಾಜವಾದಿ ಮತ್ತೊಂದು ಕೊಂಡಿ ಕಳಚಿದಂತಾಗಿದೆ.

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತರಾಗಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊಳೆಸೊಸೂರ ಗ್ರಾಮ ಮೂಲದ ರಾಚಪ್ಪ, 16ನೇ ವಯಸ್ಸಿನಲ್ಲೇ ಧಾರವಾಡಕ್ಕೆ ಬಂದು ನೆಲೆ​ಸಿ​ದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಯಪ್ರಕಾಶ ನಾರಾಯಣರ ಸಮಾಜವಾದಿ ಚಳವಳಿಯಲ್ಲಿ ತೊಡಗಿದ್ದ ರಾಚಪ್ಪ, ಹೋರಾಟಗಳ ಜೊತೆಗೆ ಹೊಟ್ಟೆ​ಪಾ​ಡಿ​ಗಾಗಿ ತಮ್ಮ ಕುಲಕಸಬು ನಡೆಸುತ್ತಿದ್ದರು. ಅವರ ಸಲೂನ್‌ ಅಂಗಡಿಯೇ ಚಳ​ವ​ಳಿಯ ಕೇಂದ್ರ ಸ್ಥಾನ​ವಾ​ಗಿತ್ತು. ಹಳೇ ಮೈಸೂರು, ಉತ್ತರ ಕರ್ನಾಟಕ ಸೇರಿದಂತೆ ದೆಹಲಿಯಿಂದ ಆಗಮಿಸುತ್ತಿದ್ದ ಸಮಾಜವಾದಿಗಳು ರಾಚಪ್ಪ ಅವರ ಅಂಗಡಿ ಹುಡುಕಿಕೊಂಡು ಬಂದು ಸಮಾಲೋಚನೆ ನಡೆಸುತ್ತಿದ್ದರು ಎಂಬುದೇ ವಿಶೇಷ.

ಗೋಪಾಲಗೌಡರ ಅನುಯಾಯಿ..

ಡಾ. ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಶಾಂತವೇರಿ ಗೋಪಾಲಗೌಡರ ಜೊತೆ ಉತ್ತಮ ಸಂಬಂಧ ಹೊಂದಿದ್ದ ರಾಚಪ್ಪ ಅವರು ಬಾಲ್ಯದಿಂದಲೂ ಹೋರಾಟದಲ್ಲಿ ತೊಡಗಿದ್ದರು.
ಜೆಪಿ ಚಳವಳಿಯ ನಂತರದಲ್ಲಿ ಕಾರ್ಮಿಕ, ರೈತ ಚಳವಳಿಯಲ್ಲಿ, ಗೋಕಾಕ ಚಳವಳಿ ಸೇರಿದಂತೆ ಅನೇಕ ಆಂದೋಲನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.

ಕಾಗೋಡು ಚಳವಳಿಯಿಂದ ಪ್ರೇರಿತರಾಗಿ ಈ ಭಾಗದ ಹೆಬ್ಬಳ್ಳಿಯಲ್ಲಿ ಭೂಚಳುವಳಿ ನಡೆಸಿ, ಆಗಿನ ಕಾಲದ ಸಮಾಜವಾದಿ ಹೋರಾಟಗಾರರಾದ ನೀಲಗಂಗಯ್ಯ ಪೂಜಾರ, ಜಿ.ಟಿ. ಪದಕಿ, ರಾಚಪ್ಪ ಬೆಟಸೂರ ಅವರೊಂದಿಗೆ ಹೆಬ್ಬಳ್ಳಿಯ ಭೂ ಚಳವಳಿ ನಡೆಸಿ ಸಾವಿರಾರು ರೈತರಿಗೆ ಭೂಮಿಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಇಷ್ಟೆಲ್ಲ ಹೋರಾಟಗಳಲ್ಲಿ ಪಾಲ್ಗೊಂಡು ಜೀವನದಲ್ಲಿ ಸಾಕಷ್ಟುಕಷ್ಟ, ನೋವುಗಳನ್ನು ಅನುಭವಿಸಿರುವ ರಾಚಪ್ಪ ಅವರಿಗೆ ಕೊನೆ ಕಾಲದಲ್ಲಿ ಅವರ ಸ್ನೇಹಿತರು ಹಾಗೂ ಅಭಿಮಾನಿಗಳೇ ಆಧಾರವಾಗಿದ್ದರು. ಅವಿವಾಹಿತರಾಗಿದ್ದು ಬದುಕಿನುದ್ದಕ್ಕೂ ಸ್ವಾಭಿಮಾನಿಯಾಗಿದ್ದ ಅವರಿಗೆ ಸಮಾಜವಾದಿ ಗೆಳೆಯರು ಸೇರಿಕೊಂಡು ಇಲ್ಲಿನ ರಾಜೀವಗಾಂಧಿ ನಗರ ಬಳಿಯ ವಿಜಯನಗರದಲ್ಲಿ ಮನೆ ಕಟ್ಟಿಸಿಕೊಟ್ಟಿದ್ದರು.

ರಾಜ್ಯೋತ್ಸವಕ್ಕೂ ಹಿಗ್ಗಿರಲಿಲ್ಲ..

ಕಳೆದ ಸಮ್ಮಿಶ್ರ ಸರ್ಕಾರದಲ್ಲಿ (2018) ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಆಗ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಾ, ನಮ್ಮಂತ​ವ​ರನ್ನೂ ಸರ್ಕಾರ ಗುರು​ತಿಸಿ ರಾಜ್ಯೋ​ತ್ಸ​ವ​ದಂತಹ ಪ್ರಶಸ್ತಿ ಕೊಡು​ತ್ತದೆ ಎಂದು ಅಂದು​ಕೊಂಡಿ​ರ​ಲಿಲ್ಲ...! ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದನ್ನು ಇದೀಗ ಸ್ಮರಿಸಬಹುದು. 2017ರಲ್ಲಿ ಬೆಂಗಳೂರಿನ ಕನ್ನಡ ಜನಶಕ್ತಿ ಸಂಘ ಕೊಡ ಮಾಡುವ ಶಾಂತವೇರಿ ಗೋಪಾಲಗೌಡರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

ಬಹಳಷ್ಟು ಹೋರಾಟ ನಡೆಸಿ, ವಿದ್ಯಾರ್ಥಿಗಳನ್ನು ಸಂಘಟಿಸಿದ್ದರು. ಬಹಳಷ್ಟು ಸಮಾಜವಾದಿ ಚಿಂತನೆ ತುಂಬಿದ, ಯುವಕರಿಗೆ ಹೋರಾಟದ ಸ್ಫೂರ್ತಿ ತುಂಬಿದ್ದ ರಾಚಪ್ಪ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರ ಒಡನಾಡಿ, ಹೋರಾಟಗಾರ ಶಂಕರ ಹಲಗತ್ತಿ ಸಂತಾಪ ವ್ಯಕ್ತಪಡಿಸಿದರು.

ಧಾರವಾಡ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಮಾಜವಾದಿ ಹೋರಾಟಗಾರರು ಹಾಗೂ ಅವರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಧಾರವಾಡದ ಹೊಸ ಯಲ್ಲಾಪುರ ರುದ್ರಭೂಮಿಯಲ್ಲಿ ಸಾವಿರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಜರುಗಿತು.

ಸಂತಾಪ..

ರಾಚಪ್ಪ ಹಡಪದ ಅವರನ್ನು ಕಳೆದುಕೊಂಡು ಸಮಾಜವಾದಿಯ ಮತ್ತೊಂದು ಕೊಂಡಿ ಕಳಚಿದಂತಾಗಿದೆ. 80ರ ಸಮಯದಲ್ಲಿ ಅವರನ್ನು ಕಂಡರೆ ಭಯ ಆಗುತ್ತಿತ್ತು. ಯಾವುದೇ ಮುಲಾಜಿಲ್ಲದೇ ನೇರವಾಗಿ ನಮ್ಮನ್ನು ಕರೆದು ಬುದ್ಧಿ ಹೇಳುತ್ತಿದ್ದರು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಹೋರಾಟಗಾರ ನಾಗರಾಜ ಗುರಿಕಾರ ಹೇಳಿದ್ದಾರೆ. 

ರಾಚಪ್ಪ ಹಡಪದ ಯುವ ಜನಾಂಗಕ್ಕೆ ಹೋರಾಟದ ಸ್ಫೂರ್ತಿಯಾಗಿದ್ದರು. ಹೆಬ್ಬಳ್ಳಿ ರೈತ ಹೋರಾಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು. ತುರ್ತು ಪರಿಸ್ಥಿತಿಯಲ್ಲಿ ನಮ್ಮ ಜೊತೆಗೆ ಜೈಲಿನಲ್ದಿದ್ದರು. ವಿದ್ಯಾರ್ಥಿಗಳನ್ನು, ಜನರನ್ನು ಸಂಘಟನೆ ಮಾಡಿ ಹೋರಾಟಕ್ಕೆ ಇಳಿಯುತ್ತಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೆಎಂಎಫ್‌ ಮಾಜಿ ಅಧ್ಯಕ್ಷ ನೀಲಕಂಠ ಅಸೂಟಿ ತಿಳಿಸಿದ್ದಾರೆ.

ಅಪ್ಪಟ ಸಮಾಜವಾದಿ, ರೈತ ಹೋರಾಟಗಾರ, ಕರ್ನಾಟಕ ವಿದ್ಯಾವರ್ಧಕ ಸಂಘದ ಮಾಜಿ ಗೌರವ ಉಪಾಧ್ಯಕ್ಷರಾಗಿದ್ದ ರಾಚಪ್ಪ ಹಡಪದ ತಮ್ಮ ಮಾರ್ಗದರ್ಶಕರೂ ಹೌದು. ಇದೀಗ ಅವರು ಇಲ್ಲ ಎನ್ನುವುದು ಬೇಸರ ಮೂಡಿಸಿದೆ. ನಿಮ್ಮ ವಿಚಾರ ಧಾರೆಗಳು ಅಮರವಾಗಿರಲಿ ಎಂದು ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಹೇಳಿದ್ದಾರೆ. 

ನನ್ನ ಆರೋಗ್ಯ ಅನುಮಾನ ಹುಟ್ಟಿಸುತ್ತಿದೆ ಎಂದು ಕೆಲವು ದಿನಗಳ ಹಿಂದಷ್ಟೇ ನನ್ನನ್ನು ಕರೆಯಿಸಿ ಮಾತನಾಡಿದ್ದರು. ರಾಚಪ್ಪ ಅವರಲ್ಲಿ ಇನ್ನೂ ಕೆಲವು ಕನಸು, ನಿರ್ಧಾರಗಳಿದ್ದವು. ಇದೀಗ ಅವುಗಳನ್ನು ಬಿಟ್ಟು ಹೋಗಿದ್ದಾರೆ. ಸಮಾಜವಾದದ ಕನಸು ಅವರ ಸಲೂನ್‌ಗೆ ಸಮತಾ ಹೇರ್‌ ಕಟಿಂಗ್‌ ಸಲೂನ್‌ ಹೆಸರಿಡಲು ಹಚ್ಚಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಲೇಖಕ ಬಸವರಾಜ ಸೂಳಿಬಾವಿ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios