ಲಿಂಗರಾಜು ಕೋರಾ

ಬೆಂಗಳೂರು [ಸೆ.16]:  ವಾಹನಗಳ ನಿಲುಗಡೆಗೆ ಸ್ಥಳದ ಹುಡುಕಾಟ, ಪಾರ್ಕಿಂಗ್‌ ಫೀ ವಸೂಲಿಗಾರನ ಜೊತೆ ಕಿರಿಕಿರಿಗೆ ಇತಿಶ್ರೀ ಹಾಡುವ ಜೊತೆಗೆ ಡಿಜಿಟಲ್‌ ಪೇಮೆಂಟ್‌ಗೆ ಒತ್ತು ನೀಡಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ‘ಸ್ಮಾರ್ಟ್‌ ಪಾರ್ಕಿಂಗ್‌’ ಯೋಜನೆ ಜಾರಿಗೆ ತರಲು ಮುಂದಾಗಿದೆ. ಇದರಿಂದ ವಾರ್ಷಿಕ 31 ಕೋಟಿ ರು. ಆದಾಯ ಸಂಗ್ರಹದ ಅಂದಾಜು ಮಾಡಲಾಗಿದೆ.

ಇನ್ನು ಕೆಲವೇ ತಿಂಗಳಲ್ಲಿ ಮೊದಲ ಹಂತದಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಅವೆನ್ಯೂ ರಸ್ತೆ, ರೇಸ್‌ಕೋರ್ಸ್‌ ರಸ್ತೆ ಸೇರಿದಂತೆ ನಗರದ 85 ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಆರಂಭವಾಗಲಿದೆ. 85 ರಸ್ತೆಗಳ ಪಟ್ಟಿಯನ್ನು ಬಿಬಿಎಂಪಿ ಅಂತಿಮಗೊಳಿಸಿದ್ದು, ‘ಬಿಲ್ಡಿಂಗ್‌ ಕಂಟ್ರೊಲ್‌ ಸಲ್ಯೂಷನ್ಸ್‌ ಇಂಡಿಯಾ ಕಂಪೆನಿ’ಗೆ ಇದರ ಗುತ್ತಿಗೆ ನೀಡಿದೆ. 85 ರಸ್ತೆಗಳಲ್ಲಿ 3,600 ಕಾರುಗಳು ಹಾಗೂ 10 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಪಾಲಿಕೆಗೆ ವರ್ಷಕ್ಕೆ 31 ಕೋಟಿ ರು. ನಂತೆ ಮುಂದಿನ ಹತ್ತು ವರ್ಷದಲ್ಲಿ 315.60 ಕೋಟಿ ರು. ಆದಾಯ ಸಂಗ್ರಹಿಸುವ ಅಂದಾಜು ಮಾಡಿಕೊಳ್ಳಲಾಗಿದೆ.

ಮಾಹಿತಿ ನೀಡಲಿರುವ ಆ್ಯಪ್‌:

ನಗರದ ರಸ್ತೆಗಳಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಈ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯಲ್ಲಿ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಇದನ್ನು ಡೌನ್‌ಲೋಡ್‌ ಮಾಡಿಕೊಂಡರೆ ವಾಹನ ಸವಾರರು ಯಾವ ರಸ್ತೆಯಲ್ಲಿ ಪಾರ್ಕಿಂಗ್‌ ಜಾಗ ಖಾಲಿ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ಮುಂಗಡವಾಗಿಯೂ ತಮ್ಮ ವಾಹನಗಳ ನಿಲುಗಡೆಗೆ ಸ್ಥಳವನ್ನು ಕಾಯ್ದಿರಿಸಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

3 ಮಾದರಿ ರಸ್ತೆಗಳಲ್ಲಿ 3 ರೀತಿ ಶುಲ್ಕ!

ವಾಹನ ದಟ್ಟಣೆ ಮತ್ತು ರಸ್ತೆ ಗುಣಮಟ್ಟಆಧರಿಸಿ ವಾಹನ ನಿಲುಗಡೆ ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ), ಸಿ (ಸಾಮಾನ್ಯ) ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಎ ರಸ್ತೆಗಳಲ್ಲಿ ದ್ವಿಚಕ್ರ ವಾಹನಕ್ಕೆ ಗಂಟೆಗೆ 15 ರು., ನಾಲ್ಕು ಚಕ್ರ ವಾಹನಕ್ಕೆ 30 ರು., ಬಿ ರಸ್ತೆಗಳಲ್ಲಿ-ದ್ವಿಚಕ್ರ 10 ರು., ನಾಲ್ಕು ಚಕ್ರ 20 ರು., ಸಿ ರಸ್ತೆಗಳಲ್ಲಿ ದ್ವಿಚಕ್ರ 5 ರು., ನಾಲ್ಕು ಚಕ್ರ 15 ರು. ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ.

ಯೋಜನೆ ಪ್ರಕಾರ ಶುಲ್ಕ ವಸೂಲಿ ಮತ್ತು ಟಿಕೆಟ್‌ ನೀಡುವುದಕ್ಕೆ ಪಾರ್ಕಿಂಗ್‌ ಮೀಟರ್‌ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಸವಾರರು ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಅಥವಾ ಪ್ರತಿದಿನ ವಾಹನ ನಿಲ್ಲಿಸುವರಾದರೆ ಸ್ಮಾರ್ಟ್‌ ಕಾರ್ಡ್‌ ಪಡೆದುಕೊಂಡು ಶುಲ್ಕ ಪಾವತಿಸಲು ಅವಕಾಶ ಇರುತ್ತದೆ. ವಾಹನಗಳ ಸುರಕ್ಷತೆಗೆ ನಿಲುಗಡೆ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆಗೆ 85 ರಸ್ತೆಗಳನ್ನು ಅಂತಿಮಗೊಳಿಸಲಾಗಿದ್ದು ಟೆಂಡರ್‌ ಪಡೆದಿರುವ ಕಂಪನಿಗೆ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಆಗಸ್ಟ್‌ ತಿಂಗಳಿಂದ ಎಂಟು ತಿಂಗಳ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಒಂದು ತಿಂಗಳು ಕಳೆದಿದ್ದು, ಇನ್ನು ಆರೇಳು ತಿಂಗಳೊಳಗೆ ಕಂಪನಿಯವರು ಸಿದ್ಧತೆ ಮಾಡಿಕೊಳ್ಳಬೇಕು. ಬಳಿಕ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಯಾಗಲಿದೆ.

- ಎಂ.ವಿ.ಶ್ರೀನಿವಾಸ್‌, ಬಿಬಿಎಂಪಿ ಕಾರ್ಯನಿವಾಹಕ ಇಂಜಿನಿಯರ್‌ (ರಸ್ತೆ ಮೂಲಸೌಕರ್ಯ ವಿಶೇಷ ವಿಭಾಗ)

85 ರಸ್ತೆಗಳು ಯಾವ್ಯಾವು?

ಅವೆನ್ಯೂ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಕನ್ನಿಂಗ್‌ಹ್ಯಾಮ್‌ ರಸ್ತೆ, ಕಮರ್ಶಿಯಲ್‌ ಸ್ಟ್ರೀಟ್‌, ಎಸ್‌ಸಿ ರೋಡ್‌, ಡಿಕನ್ಸನ್‌ ರೋಡ್‌, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರಾಜಾರಾಮ್‌ ಮೋಹನ್‌ ರಾಯ್‌ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ರೆಸಿಡೆನ್ಸಿ ರಸ್ತೆ, ಎನ್‌ಆರ್‌ ರಸ್ತೆ, ಎಸ್‌ಪಿ ರೋಡ್‌, 6ನೇ ಕ್ರಾಸ್‌, 5ನೇ ಮುಖ್ಯ ರಸ್ತೆ, ಧನ್ವಂತರಿ ರಸ್ತೆ, ನೃಪತುಂಗ ರಸ್ತೆ, ಕಸ್ತೂರ ಬಾ ರಸ್ತೆ, ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಡಿಸ್ಟಿಂಕ್ಟ್ ಆಫೀಸ್‌ ರಸ್ತೆ, ಕಾಳಿದಾಸ ರಸ್ತೆ, ಲಿಂಕ್‌ ರೋಡ್‌, ರಾಮಚಂದ್ರ ರಸ್ತೆ, ರೈಲ್ವೆ ಪ್ಯಾರಲಲ್‌ ರಸ್ತೆ, ಪ್ಯಾಲೇಸ್‌ ಕ್ರಾಸ್‌ ರಸ್ತೆ, ಮೈನ್‌ ಗಾರ್ಡ್‌ ಕ್ರಾಸ್‌ ರಸ್ತೆ, ಲೇಡಿ ಕರ್ಜನ್‌ ರಸ್ತೆ, ಕ್ರೆಸೆಂಟ್‌ ರಸ್ತೆ, ಮಿಲ್ಲ​ರ್‍ಸ್ ರಸ್ತೆ, ಮಿಲ್ಲರ್ಸ್‌ ಟ್ಯಾಂಕ್‌ ಬಂಡ್‌ ರಸ್ತೆ, ಅಲಿಸ್ಕರ್‌ ರಸ್ತೆ, ಸೇಂಟ್‌ ಜಾನ್ಸ್‌ ಚಚ್‌ರ್‍ ರಸ್ತೆ, ಕೆನ್ಸಿಂಗ್‌ಟನ್‌ ರಸ್ತೆ, ವೀರಪಿಳ್ಳೈ ರಸ್ತೆ, ಡಿಸ್ಪೆನ್ಸರಿ ರಸ್ತೆ, ಇಬ್ರಾಹಿಂ ಸಾಹೇಬ್‌ ಸ್ಟ್ರೀಟ್‌, ಮೀನಾಕ್ಷಿ ಕೋಯಿಲ್‌ ರಸ್ತೆ, ನಾರಾಯಣಪಿಳ್ಳೈ ರಸ್ತೆ, ಸೆಪ್ಪಿಂಗ್ಸ್‌ ರೋಡ್‌, ಧರ್ಮರಾಜ ಕೋಯಿಲ್‌ ಸ್ಟ್ರೀಟ್‌, ಹೈನೆಸ್‌ ರೋಡ್‌, ಹಾಸ್ಪಿಟಲ್‌ ರಸ್ತೆ, ಕಾಮರಾಜ ರಸ್ತೆ, ಗಂಗಾಧರ ಚೆಟ್ಟಿರಸ್ತೆ, ವುಟ್‌ ಸ್ಟ್ರೀಟ್‌, ಕ್ಯಾಸ್ಟೆ$್ಲ ಸ್ಟ್ರೀಟ್‌, ಬ್ರುಂಟನ್‌ ರೋಡ್‌, ಲ್ಯಾವೆಲ್ಲೆ ರಸ್ತೆ, ಸೇಂಟ್‌ ಮಾರ್ಕ್ಸ್‌ ರಸ್ತೆ, ಚಚ್‌ರ್‍ ಸ್ಟ್ರೀಟ್‌, ಗ್ರಾಂಟ್‌ ರೋಡ್‌, ಹೇಯಸ್‌ ರಸ್ತೆ, ಕಾನ್ವೆಂಟ್‌ ರಸ್ತೆ, ಪಂಪ ಮಹಾಕವಿ ರಸ್ತೆ, 2ನೇ ಮುಖ್ಯರಸ್ತೆ, 3ನೇ ಕ್ರಾಸ್‌ ಮಿಶನ್‌ ರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಎ.ಎಸ್‌ ಚಾರ್‌ ರಸ್ತೆ, ಬಳೇಪೇಟೆ ಮುಖ್ಯರಸ್ತೆ, ಬನ್ನಪ್ಪ ಪಾರ್ಕ್ ರಸ್ತೆ, ಕಬ್ಬನ್‌ಪೇಟೆ ಮುಖ್ಯರಸ್ತೆ, ಹಾಸ್ಪಿಟಲ್‌ ರಸ್ತೆ, ಕೆ.ವಿ.ಟೆಂಪಲ್‌ ರೋಡ್‌, ಕಿಲ್ಲರಿ ಸ್ಟ್ರೀಟ್‌, ನಗತ್‌ರ್‍ ಪೇಟೆ ಮುಖ್ಯರಸ್ತೆ, ಪೋಲಿಸ್‌ ಸ್ಟೇಷನ್‌ ರಸ್ತೆ, ಆರ್‌.ಟಿ. ಸ್ಟ್ರೀಟ್‌, ಸುಲ್ತಾನ್‌ಪೇಟೆ ಮುಖ್ಯರಸ್ತೆ, ಸ್ಯಾಂಕಿ ರೋಡ್‌, 8ನೇ ಮುಖ್ಯರಸ್ತೆ, ಜಸ್ಮಾ ಭವನ್‌ ರಸ್ತೆ, ಎಡ್ವರ್ಡ್‌ ರಸ್ತೆ, ಅಣ್ಣಾಸ್ವಾಮಿ ರಸ್ತೆ, ತಿಮ್ಮಯ್ಯ ರಸ್ತೆ, ಬ್ರಾಡ್ವೇ ರಸ್ತೆ, ಸೇಂಟ್‌ಜಾನ್ಸ್‌ ರಸ್ತೆ, ಓಸ್ಬಾಮೆ ರಸ್ತೆ, ಶಿವಾಜಿ ರಸ್ತೆ, ಚಿಕ್ಕ ಬಜಾರ್‌ ರಸ್ತೆ, ಜೈನ್‌ ಟೆಂಪಲ್‌ ರಸ್ತೆ.