ಹಾಸನ (ಆ.26):  ಉತ್ತಮ ಶಿಕ್ಷಣವನ್ನು ಕೊಡುವ ದೃಷ್ಟಿಯಿಂದ ಈಗಾಗಲೇ ಹಲವಾರು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳನ್ನು ಪ್ರಾರಂಭಿಸಿದ್ದು, ಇದನ್ನು ಎಲ್ಲ ಶಾಲೆಗಳಿಗೂ ವಿಸ್ತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.

ಭಾನುವಾರ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕೌಶಲ ತರಬೇತಿ ಕಾರ್ಯಾಗಾರವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಆಡಳಿತದ ದೃಷ್ಟಿಯಿಂದ ರಾಜ್ಯದಲ್ಲಿ 34 ಜಿಲ್ಲೆಗಳಿವೆ. ಅವುಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯೂ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಈ ಬಾರಿಯು ಅದೇ ಫಲಿತಾಂಶವನ್ನು ಜಿಲ್ಲೆಗೆ ಉಳಿಸಿಕೊಳ್ಳಲು ಸ್ಮಾರ್ಟ್‌ ಕ್ಲಾಸ್‌ಗಳನ್ನು ಆರಂಭಿಸಿ, ಪರೀಕ್ಷೆ ತಯಾರಿ, ವಿಷಯಗಳನ್ನು ಪರಿಣಾಮಕಾರಿಯಾಗಿ ನುರಿತ ಶಿಕ್ಷಕರಿಂದ ಬೋಧನೆ ಮಾಡಿಸಲಾಗುವುದು. ಇದಕ್ಕೆ ಎಲ್ಲ ವಿದ್ಯಾರ್ಥಿಗಳು ಸ್ಪಂದಿಸಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವ್ಯಾಸಂಗದ ಸಮಯದಲ್ಲಿ ವಿದ್ಯಾರ್ಥಿಗಳು ಉತ್ತಮ ದಾರಿಯಲ್ಲಿ ನಡೆದರೆ ಜೀವನ ಪೂರ್ತಿ ಉತ್ತಮ ಬದುಕನ್ನು ನಡೆಸಲು ಸಾಧ್ಯ. ವಿದ್ಯಾರ್ಥಿಗಳು ಪರಿಸರ, ಜಲ ಸಂರಕ್ಷಣೆ ಬಗ್ಗೆಯೂ ಆಸಕ್ತಿ ಹೊಂದಬೇಕಿದೆ. ಇಂದು ಜಲಕ್ಷಾಮ ಎಂಬುದು ಎಲ್ಲೆಡೆ ಕಂಡು ಬರುತ್ತಿದೆ. ನೀರನ್ನು ಮಿತವಾಗಿ ಬಳಸುವ ಮೂಲಕ ಸಂರಕ್ಷಿಸಬೇಕು ಎಂದರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ಭಾಗಗಳಲ್ಲಿ ನೀರಿನ ಕೊರತೆ ಇದ್ದು, ಇಡೀ ದೇಶದ ರಾಜ್ಯದ 266 ಜಿಲ್ಲೆಗಳಲ್ಲಿ ನೀರಿನ ಕೊರತೆ ಕಂಡು ಬಂದಿದೆ. ಇದನ್ನು ಹೋಗಲಾಡಿಸಬೇಕಾದರೇ ನೀರನ್ನು ಮಿತವಾಗಿ ಬಳಸಬೇಕು. ಕೆರೆ, ಕಲ್ಯಾಣಿಗಳನ್ನು ರಕ್ಷಿಸಿದರೆ ಎಲ್ಲ ಕೊಳವೆಬಾವಿಗಳಲ್ಲಿ ಉತ್ತಮ ನೀರು ಲಭ್ಯವಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ನಿವಾಸ್‌ ಸೆಪೆಟ್‌ ಮಾತನಾಡಿ, ಶಿಕ್ಷಣದಲ್ಲಿ ಅಂಕಗಳ ಜೊತೆಗೆ ಗುರಿಯನ್ನು ಇಟ್ಟುಕೊಂಡಿರಬೇಕು. ಇಲ್ಲವಾದರೇ, ಸಾಧನೆ ಮಾಡುವುದು ಕಷ್ಟಕರ. ಅನೇಕರು ಶಿಕ್ಷಣ ಪಡೆದ ಡಾಕ್ಟರ್‌, ಎಂಜಿನಿಯರ್‌, ದೇಶ ಸೇವೆ ಮಾಡುತ್ತೀನಿ ಎಂಬ ಗುರಿ ಇರುತ್ತದೆ. ಹಣ ಒಂದೆ ಇದ್ದರೇ ಪ್ರಯೋಜನವಿಲ್ಲ. ಹಣದ ಜೊತೆಗೆ ನಿಮ್ಮ ಸಾಧಿಸುವ ಛಲ ಮತ್ತು ಶ್ರಮ ಇರಬೇಕು ಎಂದರು.

ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕಾರ್ಯಾಗಾರದೆಡೆಗೆ ಸೆಳೆಯಲು ಮಕ್ಕಳಿಗೆ ಬೌದ್ಧಿಕ ಕೌಶಲ ಪರೀಕ್ಷೆಯ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿ ಅದರಲ್ಲಿ ಆಯ್ಕೆಯಾದ ನಗರದ ವಿಜಯ ಇಂಗ್ಲಿಷ್‌ ಶಾಲೆಯ ಅವನಿ ಗೌಡ ಎಂಬ ವಿದ್ಯಾರ್ಥಿನಿಗೆ ಜಿಲ್ಲಾಧಿಕಾರಿಗಳೊಂದಿಗೆ ಕಾರ್ಯಾಗಾರ ಉದ್ಘಾಟನೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಯಿತು.

ಪ್ರಭಾರ ಅಪರ ಜಿಲ್ಲಾಧಿಕಾರಿ ಡಾ. ಎಚ್‌.ಎಲ್‌. ನಾಗರಾಜ್‌ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಈ ಒಂದು ದಿನದ ಕಾರ್ಯಗಾರವು ವಿದ್ಯಾರ್ಥಿ ಜೀವನವಿಡಿ ಪ್ರಯೋಜನಕ್ಕೆ ಬರುವಂತದ್ದು, ಹಾಗಾಗಿ ತರಬೇತಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಹೇಳಿದರು.

85 ಶಾಲೆಗಳಿಂದ ಬಂದ ವಿದ್ಯಾರ್ಥಿಗಳು:  ಕಾರ್ಯಾಗಾರದಲ್ಲಿ ನಗರದ ಸುಮಾರು 85 ಶಾಲೆಗಳಿಂದ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಿಗ್ಮಾ ಇಂಡಿಯಾದ ಸಿಇಒ ಮುದಸ್ಸಾರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌, ಬಿಆರ್‌ಸಿ. ಭಾನುಮತಿ, ಇಒ ರುದ್ರೇಶ್‌ ಶಾಲಾ ಶಿಕ್ಷರು ಇದ್ದರು.