Asianet Suvarna News Asianet Suvarna News

Lumpy skin disease: ರಾಸುಗಳಿಗೆ ಚರ್ಮಗಂಟು ರೋಗ; ಆತಂಕದಲ್ಲಿ ರೈತರು

ಕೋಲಾರ ಜಿಲ್ಲೆಯ ಹಲವೆಡೆ ಹಸುಗಳಲ್ಲಿ ಚರ್ಮಗಂಟು ರೋಗ(Lumpy skin disease)ವೊಂದು ಕಾಣಿಸಿಕೊಳ್ಳುವ ಮೂಲಕ ರೈತರಲ್ಲಿ ಆತಂಕ ಮೂಡಿಸಿದೆ. ವೈರಸ್​(Virus)ನಿಂದ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೇ ಹರಡುವ ಈ ಚರ್ಮಗಂಟು ರೋಗ, ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿ ರೈತರು ಆತಂಕಕ್ಕೀಡಾಗಿದ್ದಾರೆ.

Skin disease for heifers; Farmers are worried kolar rav
Author
First Published Sep 24, 2022, 9:57 AM IST

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,ಕೋಲಾರ.

ಕೋಲಾರ (ಸೆ.24) : ಜಿಲ್ಲೆಯ ಬಹುತೇಕ ರೈತರು ಕೃಷಿಗಿಂತ ಹೆಚ್ಚಾಗಿ ಹೈನೋದ್ಯಮವನ್ನೇ ನಂಬಿ ಬದುಕುತ್ತಿದ್ದಾರೆ. ಹೀಗಿರುವಾಗ ಹೈನೋದ್ಯಮವನ್ನೇ ಮಕಾಡೆ ಮಲಗಿಸುವಂಥ ಆಘಾತಕಾರಿ ರೋಗವೊಂದು ಜಿಲ್ಲೆಯ ಗೋಪಾಲಕರ ನಿದ್ದೆಗೆಡಿಸಿದೆ. ನಿಂತಲ್ಲೇ ಹಸುಗಳು ಸಾವನ್ನಪ್ಪುತ್ತಿದ್ದು ಮಾರಕ ಕಾಯಿಲೆಯಿಂದ ತತ್ತರಿಸುವ ಗೋಪಾಲಕರು ದಿಕ್ಕುಕಾಣದಂತಾಗಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಾನುವಾರು ಜೀವ ಹಿಂಡುತ್ತಿದೆ Lumpy Skin disease!

ಹೌದು ಕೋಲಾರ(Kolar) ಜಿಲ್ಲೆಯಲ್ಲಿ ಬಹುತೇಕ ರೈತರು(Farmers) ಕ್ಷೀರೋದ್ಯಮ(dairy industry)ವನ್ನೇ ನಂಬಿ ಬದುಕುತ್ತಿರುವ ಜನರೇ ಹೆಚ್ಚು. ಸಾವಿರಾರು ಕುಟುಂಬಗಳು ಇದನ್ನೇ ನಂಬಿ ಇಂದಿಗೂ ಹಗಲಿರುಳು ದುಡಿದು ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯ ಹೈನೋದ್ಯಮವನ್ನು ಆತಂಕಕ್ಕೀಡು ಮಾಡುವ ಮಾರಕ ಕಾಯಿಲೆಯೊಂದು ಹಸುಗಳಲ್ಲಿ ಕಂಡು ಬಂದಿದೆ. 

ಕೋಲಾರ ಜಿಲ್ಲೆಯ ಹಲವೆಡೆ ಹಸುಗಳಲ್ಲಿ ಚರ್ಮಗಂಟು ರೋಗ(Lumpy skin disease)ವೊಂದು ಕಾಣಿಸಿಕೊಳ್ಳುವ ಮೂಲಕ ರೈತರಲ್ಲಿ ಆತಂಕ ಉಂಟು ಮಾಡಿದೆ. ವೈರಸ್​(Virus)ನಿಂದ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೇ ಹರಡುವ ಈ ಚರ್ಮಗಂಟು ರೋಗ, ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆ ಮಾಡುತ್ತಿದೆ. ಈ ರೋಗ ಕಾಣಿಸಿಕೊಳ್ಳುತ್ತಿದ್ದಂತೆ ಹಸುಗಳು ಆಹಾರ ನೀರು ತಿನ್ನೋದನ್ನು ಬಿಟ್ಟು ಏಕಾಏಕಿ ಹಸುಗಳು ಬಡಕಲಾಗುತ್ತವೆ. ಕೊನೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ರೋಗ ಹಸುವಲ್ಲಿ ಉಲ್ಪಣವಾಗಿ ಸಾವನ್ನಪ್ಪುತ್ತಿವೆ.

ಸದ್ಯ ಜಿಲ್ಲೆಯಲ್ಲಿ ರೋಗ ಹೆಚ್ಚಾಗಿದ್ದು, ರೈತರು ಹೇಳುವ ಪ್ರಕಾರ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಹಸುಗಳು ಈ ಗಂಟು ರೋಗದಿಂದ ಸಾವನ್ನಪ್ಪಿವೆ. ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿಯ ಪಚ್ಚಾರ್ಲಹಳ್ಳಿ, ಬೀಮಗಾನಹಳ್ಳಿ, ಕಾರಮಾನ ಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ರೋಗ ಉಲ್ಬಣವಾಗಿದ್ದು ಈ ಭಾಗದಲ್ಲಿ ಪಶುವೈದ್ಯರಿಲ್ಲದೆ ರೈತರು ಹಸುಗಳಿಗೆ ಚಿಕಿತ್ಸೆ ಕೊಡಿಸಲಾಗದೆ ಲಕ್ಷಾಂತರ ರೂ ಬಂಡವಾಳ ಹಾಕಿ ತಂದಿರುವ ಹಸುಗಳು ಕಣ್ಮುಂದೆ ಸಾವನ್ನಪ್ಪುತ್ತಿವೆ. ರೈತರಿಗೆ ಮುಂದೇನು ಎಂಬಂತಾಗಿ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಸರಿಸುಮಾರು 1,86,285 ಹಸುಗಳು ಸೇರಿದಂತೆ, 2,15,533 ಜಾನುವಾರುಗಳಿವೆ. ಈ ಚರ್ಮ ಗಂಟುರೋಗದ ವೈರಸ್​ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೆ ಹರಡುತ್ತದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಜೊತೆಗೆ ಸೊಳ್ಳೆ ಅಥವಾ ಇತರೆ ಕ್ರಿಮಿಗಳಿಂದ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಹರಡುತ್ತಿದೆ. ಹೆಚ್ಚಾಗಿ ಆಂಧ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಶ್ರೀನಿವಾಸಪುರ, ಕೆಜಿಎಫ್, ಬಂಗಾರಪೇಟೆ​ ತಾಲ್ಲೂಕುಗಳ ಗಡಿ ಗ್ರಾಮಗಳಲ್ಲಿ ಕಂಡು ಬಂದಿದೆ. ಈ ವರೆಗೆ 969 ಕ್ಕೂ ಹೆಚ್ಚು ಹಸುಗಳಲ್ಲಿ ಈ ರೋಗ ಕಂಡು ಬಂದಿದ್ದು, ಸುಮಾರು 592 ಹಸುಗಳಲ್ಲಿ ಗುಣಮುಖ ವಾಗಿದ್ದು,500ಕ್ಕೂ ಹೆಚ್ಚು ಹಸುಗಳು ಗಂಟುರೋಗದಿಂದ ಬಳಲುತ್ತಿವೆ ಎಂದು ಪಶುಸಂಗೋಪನಾ ಇಲಾಖೆಯಿಂದ ಅಂದಾಜಿಸಲಾಗಿದೆ. 

ಆದರೆ ರೋಗ ನಿಯಂತ್ರಣಕ್ಕೆ 1,22,000 ಸಾವಿರ ಲಸಿಕೆ ತಂದಿದ್ದು 244 ಹಳ್ಳಿಗಳಲ್ಲಿ ಲಸಿಕೆ ಹಾಕಲಾಗಿದೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ರೋಗ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ಇದುವರೆಗೂ ಕೇವಲ ನಾಲ್ಕು ಹಸುಗಳು ಸಾವನ್ನಪ್ಪಿವೆ ಜೊತೆಗೆ ರೋಗ ಕಂಡು ಬಂದ ಸುತ್ತಮುತ್ತಲ 5 ಕಿಲೋಮೀಟರ್​ ವ್ಯಾಪ್ತಿಯ ಹಸುಗಳಿಗೆ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಕುವ ಕೆಲಸವೂ ಆರಂಭವಾಗಿದೆ ಎಂದು ಪಶುಸಂಗೋಪನಾ ಇಲಾಖೆ ಮಾಹಿತಿ. ಆದರೆ ವಾಸ್ತವವಾಗಿ ಜಿಲ್ಲೆಯ ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಹಸುಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲಾಗುತ್ತಿಲ್ಲ. ಹಾಗಾಗಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬೇರೆ ಬೇ ಕಾಯಿಲೆಗಳಿಂದ ಕೇವಲ ಒಂದು ತಿಂಗಳಲ್ಲಿ 15 ಕ್ಕೂ ಹೆಚ್ಚು ಹಸುಗಳು ಜಿಲ್ಲೆಯಲ್ಲಿ ಸಾವನ್ನಪ್ಪಿವೆ.

ಲಂಪಿ ರೋಗದ ಬಗ್ಗೆ ಮೌನ: ಪ್ರತಿಭಟನೆಗೆ ವಿಧಾನಸೌಧಕ್ಕೆ ಹಸುವಿನೊಂದಿಗೆ ಬಂದ ಶಾಸಕ: ಆಮೇಲೇನಾಯ್ತು ನೋಡಿ

ಒಟ್ಟಾರೆ ಮಾರಕ ಚರ್ಮಗಂಟು ರೋಗ ಕೋಲಾರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ್ದು ಈ ಮೂಲಕ ಜಿಲ್ಲೆಯ ರೈತರ ನಿದ್ದೆಗೆಡಿಸಿದೆ. ಕೂಡಲೇ ಪಶು ಸಂಗೋಪನಾ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ರೋಗ ನಿಯಂತ್ರಣ ಮಾಡಬೇಕಿದೆ ಇಲ್ಲವಾದಲ್ಲಿ ಜಿಲ್ಲೆಯ ಹೈನೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳೋದರಲ್ಲಿ ಎರಡು ಮಾತಿಲ್ಲ.

Follow Us:
Download App:
  • android
  • ios