ಜಾನುವಾರು ಜೀವ ಹಿಂಡುತ್ತಿದೆ Lumpy Skin disease!
- ಜಾನುವಾರು ಬಲಿ ತೆಗೆದುಕೊಳ್ಳುತ್ತಿರುವ ಲಂಪಿ ಸ್ಕಿನ್
- ಬೆಲೆಬಾಳುವ ಎತ್ತು, ಹಾಲು ಹಿಂಡುವ ಆಕಳು, ಎಮ್ಮೆಗಳನ್ನು ಕಳೆದುಕೊಂಡ ರೈತರು
- ಸಮರ್ಪಕ ಚಿಕಿತ್ಸೆ ಸಿಗದೆ ರೈತರು ಕಂಗಾಲು
ನಾರಾಯಣ ಹೆಗಡೆ
ಹಾವೇರಿ (ಸೆ.22) : ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ (ಲಂಪಿ ಸ್ಕಿನ್ ಡಿಸೀಸ್), ಕಾಲುಬಾಯಿ ಬೇನೆ ಸೇರಿದಂತೆ ಸಾಂಕ್ರಾಮಿಕ ಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ಬೆಲೆಬಾಳುವ ಎತ್ತು, ಆಕಳು, ಎಮ್ಮೆಗಳನ್ನು ಈ ರೋಗ ಬಲಿತೆಗೆದುಕೊಂಡಿದ್ದು, ಸಾವಿರಾರು ಜಾನುವಾರು ಕಾಯಿಲೆಯಿಂದ ಬಳಲಿ ನಿತ್ರಾಣಗೊಂಡಿವೆ. ಅತಿವೃಷ್ಟಿ, ನೆರೆಯಿಂದ ಬೆಳೆ ಹಾಳಾಗಿ ಸಂಕಷ್ಟದಲ್ಲಿರುವ ಅನ್ನದಾತ, ಈಗ ಜಾನುವಾರುಗಳಿಗೆ ತಗಲಿರುವ ಕಾಯಿಲೆಯಿಂದ ಮತ್ತಷ್ಟುಕಂಗಾಲಾಗಿದ್ದಾನೆ. ಉಳುಮೆ ಮಾಡುವ ಎತ್ತುಗಳು, ಹಾಲು ಕರೆಯುವ ಆಕಳುಗಳ ಮೈಮೇಲೆ ಗಂಟಾಗಿ ರಕ್ತ ಸೋರುತ್ತಿದೆ. ನೀರು, ಆಹಾರ ತಿನ್ನದೇ ನಿತ್ರಾಣಗೊಂಡಿವೆ. ಸುಮಾರು 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಲಂಪಿ ಸ್ಕಿನ್ ಕಾಯಿಲೆ ವ್ಯಾಪಿಸಿದ್ದು, ನೂರಾರು ಜಾನುವಾರು ಮೃತಪಟ್ಟಿವೆ. ಆದರೂ ಸಮರ್ಪಕ ಚಿಕಿತ್ಸೆ ದೊರೆಯದ್ದರಿಂದ ರೈತರ ಆಕ್ರೋಶ ಕಟ್ಟೆಯೊಡೆಯುತ್ತಿದೆ.
ಐಶಾರಾಮಿ ಕಾರಿನಲ್ಲಿ ಜಾನುವಾರು ಕಳವು: ಓರ್ವನ ಬಂಧನ
ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಗಂಟು ರೋಗ ಕಾಣಿಸಿಕೊಂಡಿದೆ. ಕರ್ಜಗಿ ಸುತ್ತಮುತ್ತಲ ಗ್ರಾಮಗಳಲ್ಲೂ ಹಲವು ದನಕರುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಳ್ಳುತ್ತಿದೆ. ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ಲಂಪಿ ಸ್ಕಿನ್ ರೋಗಕ್ಕೆ 50ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿರುವ ಬಗ್ಗೆ ರೈತರೇ ಹೇಳುತ್ತಾರೆ. ದಿನದಿಂದ ದಿನಕ್ಕೆ ರೋಗ ವ್ಯಾಪಿಸುತ್ತಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಾಯಿಲೆ ಕಾಣಿಸಿಕೊಂಡಿದೆ. ಕೃಷಿ ಹಾಗೂ ಹೈನುಗಾರಿಕೆಯನ್ನೇ ಅವಲಂಬಿಸಿರುವ ಜಿಲ್ಲೆಯ ರೈತರಿಗೆ ದಿಕ್ಕು ತೋಚದಂತಾಗಿದೆ.
ಉಳುಮೆ ಎತ್ತುಗಳು ಕೊಟ್ಟಿಗೆಯಲ್ಲೇ ಮಲಗುತ್ತಿವೆ. ಕಾಯಿಲೆ ಬಂದಿರುವ ಹಸು ಹಾಲು ಕರೆಯುವುದನ್ನು ನಿಲ್ಲಿಸಿವೆ. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಒಂದೇ ಕೊಟ್ಟಿಗೆಯಲ್ಲಿರುವ ಮತ್ತು ಮೇಯಲು ಹೋಗುವ ದನಕರುಗಳಿಗೆ ಹರಡುತ್ತಿವೆ.
ರೈತರು ಕಂಗಾಲು:
ಪ್ರೀತಿಯಿಂದ ಸಾಕಿದ್ದ ಎತ್ತು, ಆಕಳುಗಳ ಮೈತುಂಬಾ ಗಡ್ಡೆಗಳು ತುಂಬಿಕೊಂಡಿದ್ದು, ರಕ್ತ ಸೋರುತ್ತಿದೆ. ಇದನ್ನು ನೋಡಿ ರೈತರು ಮಮ್ಮಲ ಮರುಗುತ್ತಿದ್ದಾರೆ. ಉಪಚಾರಕ್ಕೆ ನಿತ್ಯ ಸಾವಿರಾರು ರು. ಖರ್ಚು ಮಾಡಿದರೂ ಮಲಗಿದ ಜಾನುವಾರುಗಲು ಮೇಲಕ್ಕೇಳುತ್ತಿಲ್ಲ. ಇತ್ತ ಮುಂಗಾರು ಹಂಗಾಮಿನ ಕೃಷಿ ಕಾರ್ಯಗಳನ್ನು ಮಾಡಲಾಗದೇ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕ ರೈತರು ಉಳುಮೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಕರೆಯುವ ಆಕಳುಗಳು ಹಾಲು ಹಿಂಡುವುದನ್ನು ನಿಲ್ಲಿಸಿವೆ. ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಅನೇಕ ರೈತರಿಗೆ ಚಿಂತೆ ಶುರುವಾಗಿದೆ. ರೋಗ ಪೀಡಿತ ಜಾನುವಾರು ಆಹಾರ ಸೇವಿಸದೇ ನಿತ್ರಾಣಗೊಳ್ಳುತ್ತಿರುವುದರಿಂದ ಆತಂಕಗೊಂಡು ಪಶು ವೈದ್ಯರಿಗೆ ಮಾಹಿತಿ ತಿಳಿಸುತ್ತಿದ್ದಾರೆ.
80 ಸಾವಿರ ಜಾನುವಾರುಗಳಿಗೆ ಲಸಿಕೆ:
ಪಶು ವೈದ್ಯಕೀಯ ಇಲಾಖೆಯಿಂದ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಅಲ್ಲದೇ ಪಶು ವೈದ್ಯರ ಕೊರತೆಯಿಂದ ಜಾನುವಾರುಗಳಿಗೆ ತುರ್ತಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದ ರೈತರು ಬೇಸತ್ತಿದ್ದು, ಮಂಗಳವಾರ ಗುತ್ತಲದಲ್ಲಿ ದಿನವಿಡಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಪಶು ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಇದುವರೆಗೆ 2539 ಜಾನುವಾರುಗಳಿಗೆ ಲಂಪಿ ಸ್ಕಿನ್ ಕಾಯಿಲೆ ತಗುಲಿದೆ. ಇವುಗಳ ಪೈಕಿ ಸೂಕ್ತ ಚಿಕಿತ್ಸೆ ನೀಡಿದ ಬಳಿಕ 1337 ಜಾನುವಾರುಗಳು ಚೇತರಿಸಿಕೊಂಡಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಾಯಿಲೆ ವ್ಯಾಪಿಸುವುದನ್ನು ತಡೆಯಲು ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದೆ. ಇದುವರೆಗೆ ಸುಮಾರು 80 ಸಾವಿರ ಪಶುಗಳಿಗೆ ವ್ಯಾಕ್ಸಿನ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
Chikkamagaluru; ಕೊಟ್ಟಿಗೆಗೆ ಬೆಂಕಿ, ಜಾನುವಾರುಗಳು ಸಜೀವ ದಹನ
ರೈತನ ಒಡನಾಡಿಯಾಗಿರುವ ಎತ್ತು, ಆಕಳುಗಳು ನಿತ್ಯವೂ ಚರ್ಮ ಗಂಟು ರೋಗದಿಂದ ಬಳಲಿ ಸಾಯುತ್ತಿವೆ. ಪಶು ವೈದ್ಯರಿಲ್ಲದೇ ಕಾಯಿಲೆ ಪೀಡಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆಯೂ ಸಿಗುತ್ತಿಲ್ಲ. ಈ ಬಗ್ಗೆ ಗಮನಕ್ಕೆ ತಂದರೂ ಪಶು ವೈದ್ಯರನ್ನು ನೇಮಿಸುವಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ.
ನಾಗಪ್ಪ ಗೊರವರ, ರೈತ ಮುಖಂಡರು
ಲಂಪಿ ಸ್ಕಿನ್ ಕಾಯಿಲೆ ಹಲವು ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು, ರೋಗ ಪೀಡಿತ ಪಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ನಿಯಂತ್ರಣಕ್ಕಾಗಿ ವ್ಯಾಕ್ಸಿನೇಶನ್ ಚುರುಕುಗೊಳಿಸಲಾಗಿದೆ. ಮೃತಪಟ್ಟಜಾನುವಾರುಗಳ ಸ್ಯಾಂಪಲ್ಸ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇದೇ ಕಾಯಿಲೆಯಿಂದ ಮೃತಪಟ್ಟಬಗ್ಗೆ ದೃಢಪಟ್ಟಿಲ್ಲ.
ಸತೀಶ ಸಂತಿ, ಪಶು ಸಂಗೋಪನಾ ಇಲಾಖೆ ಡಿಡಿ