ಧಾರವಾಡ, [ಸೆ.04]: ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಖಾಸಗಿ ಕಂಪನಿಗಳು,ಉದ್ಯಮಗಳ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಕೈಗೊಳ್ಳಲಾಗಿದೆ,

ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯಲು ಕಾರ್ಮಿಕರಿಗೆ ಆಸಕ್ತಿ,ಬೇಡಿಕೆಗೆ ಅನುಸಾರವಾಗಿ ರಾಜ್ಯದಾದ್ಯಂತ ಈ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದು ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದರು.

ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಹಿಟಾಚಿ ತರಬೇತಿ ಕೇಂದ್ರದಲ್ಲಿ ಕಳೆದ ಹದಿನೈದು ದಿನಗಳ ಕಾಲ ನಡೆದ  ಹತ್ತು ಜನ ಕಾರ್ಮಿಕರಿಗೆ ಎಕ್ಸ್ ಕ್ಯಾವೇಷನ್ ಮತ್ತು ಜೆಸಿಬಿ ಆಪರೇಟಿಂಗ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ,ಅವರು ಮಾತನಾಡಿದರು.

ರಾಜ್ಯದಲ್ಲಿ 20 ಲಕ್ಷ ನೋಂದಾಯಿತ ಕಾರ್ಮಿಕರಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 55201 ನೋಂದಾಯಿತ ಕಾರ್ಮಿಕರಿದ್ದಾರೆ. ಮಂಡಳಿಯಲ್ಲಿ ಸುಮಾರು ಹದಿನೈದು ಕಾರ್ಮಿಕ ಕಲ್ಯಾಣ ಯೋಜನೆಗಳಿವೆ.ಆದರೆ ಬಹುತೇಕರು ಮಕ್ಕಳ ಮದುವೆ ಮತ್ತು ವಿದ್ಯಾಭ್ಯಾಸಕ್ಕೆ ಮಾತ್ರ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.