ವರದಿ : ಸಂಪತ್‌ ತರೀಕೆರೆ

 ಬೆಂಗಳೂರು (ನ.03) :  ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್‌ಪಿಕೆಎಲ್‌)ಯಲ್ಲಿ 3ನೇ ಹಂತದಲ್ಲಿ ನಿವೇಶನ ಹಂಚಿಕೆಗೆ ಸಿದ್ಧತೆ ನಡೆಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವೇಶನಗಳ ಬೆಲೆ ಏರಿಕೆಗೂ ಚಿಂತನೆ ನಡೆಸಿದೆ.

ಆರ್ಥಿಕ ಸಂಕಷ್ಟದಿಂದ ಆದಾಯ ಕ್ರೋಢಿಕರಣಕ್ಕೆ ಆದ್ಯತೆ ನೀಡಿರುವ ಬಿಡಿಎ ಇತ್ತೀಚೆಗೆ ಮೂರು ಹಂತದಲ್ಲಿ ಮೂಲೆ ನಿವೇಶನಗಳನ್ನು ಹರಾಜು ಮಾಡಿತ್ತು. ಇದೀಗ 3ನೇ ಹಂತದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (ಎನ್‌ಪಿಕೆಎಲ್‌) ನಿವೇಶನ ಹಂಚಿಕೆಗೆ ಮುಂದಾಗಿದ್ದು, ಸಿದ್ಧತೆ ಮಾಡಿಕೊಳ್ಳುತ್ತಿದೆ. ಜತೆಗೆ ಈ ಹಿಂದೆ ಹಂಚಿಕೆ ಮಾಡಿದ್ದ ನಿವೇಶನಗಳ ಬೆಲೆಗಿಂತ ಪ್ರತಿ ಚದರ ಅಡಿಗಳ ದರವನ್ನು ಶೇ.30ರಿಂದ 40ರಷ್ಟುಹೆಚಿಸುವ ಸಾಧ್ಯತೆ ಇದೆ. ಈ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರದ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭಿಸಲಿದೆ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.

ಪ್ರಸ್ತುತ ನಾಡಪ್ರಭು ಕೆಂಪೇಗೌಡ ಲೇಔಟ್‌ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮಾರುಕಟ್ಟೆದರ ಪ್ರತಿ ಚ.ಅಡಿಗೆ .3,500ರಿಂದ 4,500ದಂತೆ ಮಾರಾಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೂಡ 3ನೇ ಹಂತದ ನಿವೇಶನಗಳ ಹಂಚಿಕೆ ಸಂದರ್ಭದಲ್ಲಿ .2 ಸಾವಿರ ಇದ್ದ ಬೆಲೆಯನ್ನು ಸುಮಾರು .3 ಸಾವಿರ (.1 ಸಾವಿರ ಏರಿಕೆ)ಗಳಿಗೆ ಹೆಚ್ಚಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಆಡಳಿತ ಮಂಡಳಿಯಲ್ಲಿ ತೀರ್ಮಾನ ಕೈಗೊಂಡು ಸರ್ಕಾರದ ಅನುಮತಿ ಪಡೆಯಲು ಚಿಂತನೆ ನಡೆಸಿದೆ ಎನ್ನಲಾಗಿದೆ.

2016 ಮತ್ತು 2018ರಲ್ಲಿ ಎರಡು ಹಂತಗಳಲ್ಲಿ 10 ಸಾವಿರ ನಿವೇಶನಗಳನ್ನು ಪ್ರತಿ ಚದರ ಅಡಿಗೆ .2 ಸಾವಿರದಂತೆ ಬಿಡಿಎ ಹಂಚಿಕೆ ಮಾಡಿತ್ತು. ಅಂದು 20/30 ಚದರ ಅಡಿ ನಿವೇಶನಕ್ಕೆ .10,46,251, 30/40ಕ್ಕೆ .23.25 ಲಕ್ಷ, 40/60ಕ್ಕೆ .52.31 ಲಕ್ಷ ಮತ್ತು 50/80 ಚ.ಅಡಿಗೆ .96.87 ಲಕ್ಷದಂತೆ ಬಿಡಿಎ ಗ್ರಾಹಕರಿಗೆ ಮಾರಾಟ ಮಾಡಿತ್ತು.

ಎನ್‌ಪಿಕೆಎಲ್‌ ನಿವಾಸಿಗಳ ವಿರೋಧ

ಬಿಡಿಎ ಈಗಾಗಲೇ ಎರಡು ಹಂತಗಳಲ್ಲಿ 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದೆ. ನಿವೇಶನಗಳ ಮಾಲಿಕರು ಮನೆ ನಿರ್ಮಿಸಿಕೊಳ್ಳಲು ತಯಾರಾಗಿದ್ದರೂ ಮೂಲಸೌಕರ್ಯವಿಲ್ಲದೆ ಇದುವರೆಗೂ ಒಂದು ಮನೆಯನ್ನೂ ಕಟ್ಟಿಕೊಂಡಿಲ್ಲ. ಈ ನಡುವೆ ಕೆಂಪೇಗೌಡ ಲೇಔಟ್‌ನಲ್ಲಿ 3ನೇ ಹಂತದಲ್ಲಿ ನಿವೇಶನಗಳ ಹಂಚಿಕೆಗೆ ಬಿಡಿಎ ಯೋಜನೆ ರೂಪಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕೆಂಪೇಗೌಡ ಲೇಔಟ್‌ಗೆ ಮೂಲಸೌಕರ್ಯಗಳನ್ನು 2021 ಡಿಸೆಂಬರ್‌ 31ರೊಳಗೆ ಒದಗಿಸಬೇಕು ಎಂದು ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ(ರೇರಾ) ನ್ಯಾಯಾಲಯ ಬಿಡಿಎಗೆ ಸೂಚಿಸಿದೆ. ಕಾಮಗಾರಿ ಮುಗಿಯಲು ಇನ್ನೂ ಎರಡು ವರ್ಷಗಳು ಬೇಕಿದ್ದು ಈ ನಡುವೆಯೇ ಮತ್ತೆ ಬಿಡಿಎ ನಿವೇಶನ ಮಾರಾಟಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ನಾಡಪ್ರಭು ಕೆಂಪೇಗೌಡ ಲೇಔಟ್‌ ಓಪನ್‌ ಫೋರಂ ವಕ್ತಾರ ಸೂರ್ಯಕಿರಣ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನಿವೇಶನ ಖರೀದಿಸಿರುವವರಿಗೆ ಮೂಲಸೌಕರ್ಯ ಒದಗಿಸುವುದು ಮತ್ತು ಲೇಔಟ್‌ಗೆ ಭೂಮಿ ಕೊಟ್ಟರೈತರಿಗೆ ಪರಿಹಾರ ನೀಡುವುದಕ್ಕೆ ಮೊದಲ ಆದ್ಯತೆ. ರೈತರಿಗೆ ಪರಿಹಾರ ಕೊಟ್ಟು ಅವರಿಂದ 1400 ಎಕರೆ ಬಿಡಿಸಿಕೊಳ್ಳಲು ಬಾಕಿ ಇದೆ. ಸಮಸ್ಯೆ ಈ ಎಲ್ಲ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ಇನ್ನೂ ಆರು ತಿಂಗಳು ಬೇಕಾಗುತ್ತದೆ. ಅಲ್ಲಿಯವರೆಗೂ ಯಾವುದೇ ಯೋಜನೆ ಇಲ್ಲ.

-ಶಾಂತರಾಜಣ್ಣ, ಅಭಿಯಂತರ ಸದಸ್ಯ, ಬಿಡಿಎ.