Asianet Suvarna News Asianet Suvarna News

ಸಚಿವ ಸ್ಥಾನಕ್ಕಾಗಿ ನಿಲ್ಲದ ಪರೇಡ್‌: ನನ್ನನ್ನೂ ಮಂತ್ರಿ ಮಾಡಿ ಎಂದ ಸೋಮಲಿಂಗಪ್ಪ

* ದೆಹಲಿಯಲ್ಲಿ ನಾಯಕರ ಮೊರೆ ಇಟ್ಟ ಶಾಸಕ
* ನನ್ನನ್ನೂ ಮಂತ್ರಿ ಮಾಡಿ ಎಂದ ಸೋಮಲಿಂಗಪ್ಪ
* ಆನಂದ ಸಿಂಗ್‌ಗೆ ಡಿಸಿಎಂ ಮಾಡಬೇಕು ಎಂದು ಕೇಳಿ ಬರುತ್ತಿರುವ ಕೂಗು
 

Siruguppa BJP MS Somalingappa Talks Over Minister Post grg
Author
Bengaluru, First Published Jul 31, 2021, 1:28 PM IST
  • Facebook
  • Twitter
  • Whatsapp

ಬಳ್ಳಾರಿ(ಜು.31): ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಬಳ್ಳಾರಿ ಜಿಲ್ಲಾ ಶಾಸಕರ ಪರೇಡ್‌ ಶುರುವಾಗಿದೆ.

ತಮಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಬೆಂಗಳೂರಿನಲ್ಲಿ ಕೇಂದ್ರ ನಾಯಕರನ್ನು ಭೇಟಿ ಮಾಡಿರುವ ಬೆನ್ನಲ್ಲೇ, ಸಿರುಗುಪ್ಪ ಬಿಜೆಪಿ ಶಾಸಕ ಎಂ.ಎಸ್‌. ಸೋಮಲಿಂಗಪ್ಪ ಅವರು ನನಗೂ ಸಚಿವ ಸ್ಥಾನ ನೀಡಿ ಎಂದು ದೆಹಲಿಗೆ ತೆರಳಿ ಕೇಂದ್ರ ನಾಯಕರಲ್ಲಿ ಮನವಿ ಮಾಡಿದ್ದಾರೆ.

ಮೂರು ಬಾರಿ ಚುನಾಯಿತಗೊಂಡಿದ್ದೇನೆ. ನನಗೂ ಹಿರಿತನವಿದೆ. ನೀವು ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ ಎಂದು ಹೇಳಿಕೊಂಡಿದ್ದಾರೆ. ಇನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಪರ ಬೆಂಬಲಿಗರು ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮೂರ ಶಾಸಕರಿಗೆ ಸಚಿವ ಸ್ಥಾನ ನೀಡಿ ಅಭಿಯಾನ ಶುರು ಮಾಡಿಕೊಂಡಿದ್ದು, ಕೂಡ್ಲಿಗಿ ಶಾಸಕರಾದ ಬಳಿಕ ಅನೇಕ ಅಭಿವೃದ್ಧಿಯ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಮಹತ್ಕಾರ್ಯ ಮಾಡಿದ್ದಾರೆ. ಹಿರಿಯರು ಆಗಿರುವ ಎನ್‌.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯಿಸುತ್ತಿದ್ದಾರೆ.

ನನ್ನನ್ನೂ ಮಂತ್ರಿ ಮಾಡಿ: ಸೋಮಶೇಖರ ರೆಡ್ಡಿ

ಏತನ್ಮಧ್ಯೆ ಬಳ್ಳಾರಿ- ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಅವರಿಗೆ ಉಪಮುಖ್ಯಮಂತ್ರಿ ಮಾಡಬೇಕು ಎಂಬ ಕೂಗುಗಳು ಸಹ ಕೇಳಿ ಬಂದಿವೆ. ಅಭಿಮಾನಿಗಳು ಹಾಗೂ ಬೆಂಬಲಿಗರು ತಮ್ಮ ಅಭಿಮಾನದ ಬೇಡಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿ ಜನಾಭಿಪ್ರಾಯ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಆನಂದಸಿಂಗ್‌ ಅವರಿಗೆ ಉಪಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ತಣಿಯದ ಕುತೂಹಲ:

ಮಂತ್ರಿಯಾಗಬೇಕು ಎಂಬ ಒತ್ತಾಸೆಯಲ್ಲಿ ಕೇಂದ್ರದ ನಾಯಕರನ್ನು ಭೇಟಿ ಮಾಡುವ, ಪಕ್ಷದಲ್ಲಿ ತಮ್ಮದೇ ಆದ ಸಂಪರ್ಕ, ಪ್ರಭಾವಗಳನ್ನು ಬಳಕೆ ಮಾಡಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ. ದಿನ ದಿನಕ್ಕೆ ಸಚಿವಾಕಾಂಕ್ಷಿಗಳ ಪಟ್ಟಿಬೆಳೆಯುತ್ತಲೇ ಇದ್ದು, ಯಾರಿಗೆ ಸಿಗಲಿದೆ ಡಿಸಿಎಂ ಪಟ್ಟ? ಯಾರಾಗಲಿದ್ದಾರೆ ಮಂತ್ರಿಗಳು ಎಂಬ ಕುತೂಹಲ ಇದ್ದೇ ಇದೆ. ರಾಜ್ಯ ರಾಜಕೀಯ ಬೆಳವಣಿಗೆ ಸದ್ಯದಲ್ಲಿ ಹೆಚ್ಚು ಚರ್ಚಿತವಾಗುತ್ತಿದ್ದು, ಬಳ್ಳಾರಿ ಜಿಲ್ಲೆ ಯಾರು ಸಚಿವರಾದರೆ ಎಷ್ಟುಲಾಭ? ಡಿಸಿಎಂ ಸಿಕ್ಕರೆ ಆಗಬಹುದಾದ ಅನುಕೂಲಗಳೇನು ? ಎಂಬಿತ್ಯಾದಿ ಚರ್ಚೆಗಳು ನಡೆದಿವೆ.
 

Follow Us:
Download App:
  • android
  • ios