ಸುಬ್ರಹ್ಮಣ್ಯ (ಫೆ.20):  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ತಿಂಗಳಿಗೊಮ್ಮೆ ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಈ ವರ್ಷ ಮಾ.31, ಏ.25, ಮೇ 21, ಜೂ.27 ಹಾಗೂ ಜು.7ರಂದು ಸರಳ ಸಾಮೂಹಿಕ ವಿವಾಹವು ಬೆಳಗ್ಗಿನ ಅಭಿಜಿನ್‌ ಲಗ್ನ ಸುಮೂಹೂರ್ತದಲ್ಲಿ ಸಂಪ್ರದಾಯಗಳಿಗೆ ಅನುಗುಣವಾಗಿ ನೆರವೇರಲಿದೆ ಎಂದು ಶ್ರೀ ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್‌ ಉಳ್ಳಾಲ್‌ ತಿಳಿಸಿದ್ದಾರೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿಯ ಮೇಲ್ಮಹಡಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಾಮೂಹಿಕ ವಿವಾಹವಾಗಲು ಬಯಸುವ ವಧು ವರರು ದೇವಳದ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದುಕೊಳ್ಳಬಹುದು ಅಥವಾ 7795489588, 8762919833, 9448529828ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ಮದುವೆ ದಿನ ಗೆಳೆಯನೊಂದಿಗೆ ಅಕ್ಕ ಪರಾರಿ, ತಂಗಿ ಲಗ್ನವಾದರೂ ವರನಿಗೆ ದಕ್ಕದ ಪತ್ನಿ! ..

ಧನ ಸಹಕಾರ:  ಸರಳ ವಿವಾಹವಾಗುವ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್‌, ಶಲ್ಯ, ಪೇಟ, ಬಾಸಿಂಗ ಇತ್ಯಾದಿಗಳಿಗೆ ರು.5 ಸಾವಿರ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ, ಕಾಲುಂಗುರ ಇತ್ಯಾದಿಗಳಿಗೆ ರು.10 ಸಾವಿರ ನೀಡಲಾಗುವುದು. ರು. 40 ಸಾವಿರ ಮೌಲ್ಯದ ಅಂದಾಜು 8 ಗ್ರಾಂ ತೂಕದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ದೇವಾಲಯದಿಂದ ಭರಿಸಲಾಗುವುದು.ಈ ಮೂಲಕ ಕಂದಾಯ ಇಲಾಖೆಯಿಂದ ಆದರ್ಶ ವಿವಾಹ ಯೋಜನೆಯಡಿಯಲ್ಲಿ ರು.10 ಸಾವಿರದ ನಿಶ್ಚಿತ ಠೇವಣಿ ನೀಡಲಾಗುವುದು.

ಅಲ್ಲದೆ ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವ ಪರಿಶಿಷ್ಟಜಾತಿಯ ಜೋಡಿಗೆ ಸರಳ ವಿವಾಹ ಯೋಜನೆಯಡಿಯಲ್ಲಿ ರೂ.50 ಸಾವಿರ ಒದಗಿಸಲಾಗುವುದು. ಸಾಮೂಹಿಕ ಸರಳ ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಆವಶ್ಯಕ ವ್ಯವಸ್ಥೆಗಳನ್ನು ದೇವಾಲಯದಿಂದ ಮಾಡಲಾಗುವುದು ಎಂದು ಡಾ.ಯತೀಶ್‌ ಉಳ್ಳಾಲ್‌ ಹೇಳಿದರು.

ಸರ್ಪಸಂಸ್ಕಾರ ಸೇವೆ ಹೆಚ್ಚಳ:  ಕುಕ್ಕೆ ದೇವಳದಲ್ಲಿ ಈ ಹಿಂದೆ ಪ್ರತಿ ದಿನ 75 ಸರ್ಪಸಂಸ್ಕಾರ ಸೇವೆ ನಡೆಸಲಾಗುತ್ತಿತ್ತು.ಆದರೆ ಭಕ್ತರ ಬೇಡಿಕೆಯ ಮೇರೆಗೆ ಅದನ್ನು 150ಕ್ಕೆ ಏರಿಸಲಾಗಿದೆ.ಅಲ್ಲದೆ ಆನ್‌ಲೈನ್‌ ಮೂಲಕ ಸರ್ಪಸಂಸ್ಕಾರ ಕಾಯ್ದಿರಿಸುವ ವ್ಯವಸ್ಥೆಯನ್ನು ಭಕ್ತರ ಅನುಕೂಲತೆಗಾಗಿ ಆರಂಭಿಸಲಾಗಿದೆ. ಕ್ಷೇತ್ರದಲ್ಲಿ ಈ ಹಿಂದೆ ಕಡಿಮೆ ಸೇವೆಗಳನ್ನು ನಡೆಸಲಾಗುತ್ತಿತ್ತು.ಆದರೆ ಇದೀಗ ಭಕ್ತರ ಬೇಡಿಕೆಗೆ ಅನುಗುಣವಾಗಿ ಸೇವೆಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ ಎಂದರು.

ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ದೇವಳದ ಪ್ರಧಾನ ಅರ್ಚಕ ವೇ.ಮೂ. ಸೀತಾರಾಮ ಯಡಪಡಿತ್ತಾಯ, ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತ ಜಿ.ಎ.ವಿಜಯ ಕುಮಾರ್‌, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಅಧೀಕ್ಷಕ ಬಾಲಸುಬ್ರಹ್ಮಣ್ಯ, ದೇವಳದ ಪದ್ಮನಾಭ ಶೆಟ್ಟಿಗಾರ್‌, ಶಿವಸುಬ್ರಹ್ಮಣ್ಯ ಭಟ್‌, ಸುಧಾಕರ್‌ ಎಸ್‌.ಕೆ, ಅಶೋಕ್‌ ಇದ್ದರು.