ಮಂಡ್ಯ (ನ.02):  ರೇಷ್ಮೆ ಉದ್ಯ​ಮಕ್ಕೆ ಹೆಚ್ಚಿನ ಒತ್ತು ನೀಡುವ ಸಲು​ವಾಗಿ ರಾಮ​ನ​ಗರ- ಚನ್ನ​ಪ​ಟ್ಟಣ ಮಧ್ಯೆ ಅಂತಾರಾಷ್ಟ್ರೀಯ ಮಾರು​ಕಟ್ಟೆನಿರ್ಮಿಸಲು ಯೋಜನೆ ರೂಪಿ​ಸ​ಲಾ​ಗಿದೆ ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಕೆ.ಸಿ.ನಾರಾ​ಯ​ಣ​ಗೌಡ ತಿಳಿ​ಸಿ​ದರು.

ಜಿಲ್ಲಾ ಕಾರ‍್ಯ​ನಿ​ರತ ಪತ್ರ​ಕರ್ತರ ಸಂಘದಿಂದ ನಗ​ರದ ಅಂಬೇ​ಡ್ಕರ್‌ ಭವ​ನ​ದಲ್ಲಿ ನಡೆದ ಜಿಲ್ಲಾ ಮಟ್ಟದ ಪತ್ರ​ಕರ್ತರ ಸಮ್ಮೇ​ಳನ. ನೂತನ ಜಿಲ್ಲಾ​ಧ್ಯ​ಕ್ಷರ ಪದ​ಗ್ರ​ಹಣ, ಅಭಿ​ನಂದನೆ, ಉಸ್ತು​ವಾರಿ ಸಚಿ​ವ​ರೊಂದಿಗೆ ಸಂವಾದ ಹಾಗೂ ವಿಚಾರ ಸಂಕಿ​ರಣ ಕಾರ‍್ಯಕ್ರಮ ಉದ್ಘಾ​ಟಿಸಿ ಮಾತ​ನಾಡಿ, ಕೋವಿಡ್‌-19 ಹಿನ್ನೆಲೆ​ಯಲ್ಲಿ ಲಾಕ್‌ಡೌನ್‌ನಿಂದ ರೈತರು ಸೇರಿ​ದಂತೆ ಎಲ್ಲ ವರ್ಗದ ಜನತೆ ಸಂಕಷ್ಟಅನು​ಭ​ವಿ​ಸಿ​ದರು. ತರ​ಕಾರಿ ಬೆಳೆ​ಗಾ​ರರು ಸಹ ತಾವು ಬೆಳೆದ ಉತ್ಪ​ನ್ನ​ ಮಾರಾಟ ಮಾಡ​ಲಾ​ಗದೆ ತೊಂದರೆ ಅನು​ಭ​ವಿ​ಸಿ​ದರು. ಇದನ್ನು ಮನ​ಗಂಡು ತರ​ಕಾ​ರಿ​ಗ​ಳನ್ನು ರಫ್ತು ಮಾಡಲು ಯೋಜನೆ ರೂಪಿ​ಸ​ಲಾ​ಯಿತು. ಅಂದು ಶೇ.5.5ರಷ್ಟುತರ​ಕಾ​ರಿ​ಗ​ಳನ್ನು ಹೊರಗೆ ಕಳು​ಹಿ​ಸ​ಲಾ​ಗು​ತ್ತಿತ್ತು. ಇದು ಮಾಧ್ಯ​ಮ​ಗ​ಳಿಂದ ಸಾಧ್ಯ​ವಾ​ಯಿತು ಎಂದರು.

ಅಡಕೆ ಬೆಳೆಗಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಇದೇ ಮಾದ​ರಿ​ಯಲ್ಲಿ ರೇಷ್ಮೆ ಬೆಳೆ​ಗಾ​ರರು ತೊಂದರೆ ಅನು​ಭ​ವಿ​ಸು​ತ್ತಿ​ರು​ವು​ದನ್ನು ಕಂಡು ರೇಷ್ಮೆಗೂ ಹೆಚ್ಚಿನ ಉತ್ತೇ​ಜನ ನೀಡುವ ಸಲು​ವಾಗಿ ಯೋಜನೆ ರೂಪಿ​ಸ​ಲಾ​ಗಿದೆ. ಮೈಸೂರು ರೇಷ್ಮೆ ಸೀರೆಗೆ ಎಲ್ಲೆಡೆ ಹೆಚ್ಚಿ​ನ ಬೇಡಿಕೆ ಇದೆ. ಈ ಹಿನ್ನೆ​ಲೆ​ಯಲ್ಲಿ ಅಂತಾರಾಷ್ಟ್ರೀಯ ಮಾರು​ಕಟ್ಟೆನಿರ್ಮಿಸಲು ಚಿಂತನೆ ನಡೆ​ಸ​ಲಾ​ಗಿದೆ ಎಂದರು.

ಪತ್ರ​ಕರ್ತರಿಗೆ ವಿಮೆ:

ಕೋವಿಡ್‌-19 ಸಂಕಷ್ಟಸೇರಿ​ದಂತೆ ಹಲ​ವಾರು ಸಮ​ಸ್ಯೆ​ಗಳು ಬಂದರೂ ದಿಟ್ಟ​ತನ​ದಿಂದ ಪತ್ರ​ಕರ್ತರು ಕೆಲಸ ಮಾಡು​ತ್ತಾರೆ. ಇತ್ತೀ​ಚೆಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ವೇಳೆಯೂ ಸಹ ಕೆಳಗೆ ನಿಂತು ಫೋಟೋ, ವೀಡಿಯೋ ಚಿತ್ರೀ​ಕ​ರಣ ಮಾಡು​ವಂತಹ ಸಾಹ​ಸಕ್ಕೆ ಕೈಹಾ​ಕು​ತ್ತಾರೆ. ಒಂದು ವೇಳೆ ಅನಾ​ಹು​ತ​ಗ​ಳಾ​ದಲ್ಲಿ ಅಂತಹ ಪತ್ರ​ಕರ್ತರ ಕುಟುಂಬ​ಗಳು ಬೀದಿ ಪಾಲಾ​ಗು​ತ್ತವೆ. ಇದನ್ನು ಮನ​ಗಂಡು ಪತ್ರ​ಕರ್ತರಿಗೆ ರಾಷ್ಟ್ರೀಯ ವಿಮಾ ಯೋಜನೆ ರೂಪಿ​ಸಲು ಸರ್ಕಾರದ ಜೊತೆ ಚರ್ಚೆ ನಡೆ​ಸು​ವು​ದಾಗಿ ಭರ​ವಸೆ ನೀಡಿ​ದರು.

ಈ ಯೋಜ​ನೆ​ಯಿಂದಾಗಿ ಪತ್ರ​ಕರ್ತರ ಕುಟುಂಬ​ಕ್ಕೂ ಶಕ್ತಿ ದೊರೆ​ಯು​ತ್ತದೆ. ಜೊತೆಗೆ ಅಂತಹ ಕುಟುಂಬ​ಗ​ಳಿಗೆ ಸರ್ಕಾರಿ ಕೆಲಸ ಇಲ್ಲವೇ ಬೇರೆ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚಿಸ​ಲಾ​ಗು​ವುದು ಎಂ​ದರು.

ಶೀಘ್ರವೇ ಮಹಾರಾಷ್ಟ್ರದಲ್ಲೂ ದೊಡ್ಡ ಸ್ಥಾನ:

ಬದುಕಿ​ಗಾಗಿ ಮಹಾ​ರಾ​ಷ್ಟ್ರಕ್ಕೆ ತೆರ​ಳಿದ್ದೆ. ಮಹಾ​ರಾ​ಷ್ಟ್ರ​ದಲ್ಲಿ ಕನ್ನ​ಡಿ​ಗರನ್ನು ಒಟ್ಟು​ಗೂ​ಡಿಸಿ ಅಲ್ಲೂ ರಾಜ್ಯೋ​ತ್ಸ​ವ ಸೇರಿ​ದಂತೆ ತಿಂಗ​ಳಿ​ಗೊಮ್ಮೆ ಕಾರ‍್ಯ​ಕ್ರಮಗಳನ್ನು ಹಮ್ಮಿ​ಕೊ​ಳ್ಳ​ಲಾ​ಗು​ತ್ತಿತ್ತು. ನಂತರ ಕೆ.ಆರ್‌.ಪೇಟೆ ತಾಲೂ​ಕಿ​ಗೆ ಆಗ​ಮಿಸಿ ಜನರ ಸೇವೆ ಮಾಡಿದ್ದೆ. ಮೂರು ಬಾರಿ ಶಾಸ​ಕ​ನಾಗಿ ಅಭಿ​ವೃ​ದ್ಧಿ ಕಾರ‍್ಯ​ಗ​ಳಲ್ಲಿ ತೊಡ​ಗಿ​ದ್ದೇನೆ. ನನ್ನ ಸಮಾಜ ಸೇವೆ​ ಗಮ​ನಿಸಿ ಮಹಾ​ರಾ​ಷ್ಟ್ರ​ದಲ್ಲೂ ನನಗೆ ದೊಡ್ಡ ಸ್ಥಾನ ದೊರೆ​ಯ​ಲಿದೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಧ್ವನಿ ಇಲ್ಲದವರಿಗೆ ಧ್ವನಿಯಾಗಿ:

ಜಿಲ್ಲಾ​ಧಿಕಾರಿ ಡಾ.ಎಂ.ವಿ. ವೆಂಕ​ಟೇಶ್‌ ಮಾತ​ನಾಡಿ, ಪತ್ರ​ಕರ್ತರು ಸಮಾ​ಜದ ಧ್ವನಿ​ಯಾಗಿ ಕೆಲಸ ಮಾಡ​ಬೇಕು. ದನಿ ಇಲ್ಲ​ದ​ವ​ರಿಗೆ ಧ್ವನಿ ನೀಡ​ಬೇಕು. ಸಂವೇದನಾಶೀಲತೆ, ಬದ್ಧ​ತೆ​ಯಿಂದ ಕೆಲಸ ಮಾಡ​ಬೇಕು ಎಂದರು.

ನಾಲ್ಕನೇ ಅಂಗ​ವಾ​ಗಿ​ರುವ ಮಾಧ್ಯಮ ಕ್ಷೇತ್ರ ಪ್ರಜಾ​ಪ್ರ​ಭುತ್ವ ವ್ಯವ​ಸ್ಥೆ​ಯನ್ನು ಗಟ್ಟಿ​ಗೊ​ಳಿ​ಸು​ತ್ತಿದೆ. ಚುನಾ​ವ​ಣೆ​ಗಳು ಶಾಂತಿ​ಯು​ತ​ವಾಗಿ ನಡೆ​ಯು​ವಂತಾ​ಗಲು ಮಾಧ್ಯಮದವರ ಕಾರ‍್ಯ​ವೈ​ಖ​ರಿಯೇ ಕಾರಣ ಎಂದರು.

ಮಾಧ್ಯ​ಮ​ದ​ವರಿಗೂ ಕಷ್ಟ, ದುಃಖ, ದುಮ್ಮಾ​ನ​ಗ​ಳನ್ನು ಎದು​ರಿ​ಸು​ತ್ತಿ​ದ್ದಾರೆ. ಇದ​ರೊಂದಿಗೆ ಇತ್ತೀ​ಚಿನ ದಿನ​ಗ​ಳಲ್ಲಿ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಕೆಟ್ಟಸಂದೇ​ಶ​ಗಳನ್ನು ರವಾ​ನಿಸಿ ಸಮಾ​ಜ​ವನ್ನು ತಪ್ಪು ದಾರಿಗೆ ತಳ್ಳು​ತ್ತಿ​ರು​ವುದು ಸಹ ಕಂಡು​ಬಂದಿದೆ. ಇಂತಹ ಸಂದರ್ಭದಲ್ಲಿ ಮಾಧ್ಯ​ಮ​ದ​ವರ ಪಾತ್ರ ಹೆಚ್ಚಿದೆ. ಅದನ್ನು ಜವಾ​ಬ್ದಾ​ರಿ​ಯು​ತ​ವಾಗಿ ನಿರ್ವಹಿ​ಸಬೇಕು ಎಂದು ಸಲಹೆ ನೀಡಿ​ದರು.

ಜಿಲ್ಲಾ ಪೊಲೀಸ್‌ ಅಧೀ​ಕ್ಷಕ ಕೆ.ಪರಶುರಾಮ ಮಾತನಾಡಿ, ಅಭ​ದ್ರ​ತೆ​ಗಳ ನಡುವೆ ಪತ್ರ​ಕರ್ತರು ಕೆಲಸ ಮಾಡು​ತ್ತಿ​ದ್ದಾರೆ. ಅವರಿಗೂ ಭದ್ರತೆ ಒದ​ಗಿ​ಸು​ವುದು ಸಮಾ​ಜದ ಕರ್ತವ್ಯ. ಈ ಬಗ್ಗೆ ಹಲ​ವಾರು ದಿನ​ಗ​ಳಿಂದಲೂ ಚರ್ಚೆ ನಡೆ​ಯುತ್ತಿದ್ದು ಅದಕ್ಕೆ ಕಾನೂನಿನ ರೂಪ ನೀಡಬೇಕು ಎಂದು ಸಲಹೆ ನೀಡಿ​ದರು.

ಇದೇ ವೇಳೆ ಜಿಲ್ಲಾ ಕಾರ‍್ಯ​ನಿ​ರತ ಪತ್ರ​ಕರ್ತರ ಸಂಘದ ನಿಕ​ಟ​ಪೂರ್ವ ಅಧ್ಯಕ್ಷ ಕೆ.ಸಿ. ಮಂಜು​ನಾಥ್‌ ಅವರು ನೂತನ ಅಧ್ಯ​ಕ್ಷ ನವೀನ್‌ ಚಿಕ್ಕ​ಮಂಡ್ಯ ಅವ​ರಿಗೆ ಅಧಿ​ಕಾರ ಹಸ್ತಾಂತ​ರಿ​ಸಿ​ದರು. ಮಾಜಿ ಅಧ್ಯ​ಕ್ಷ​ರನ್ನು ಅಭಿ​ನಂದಿ​ಸ​ಲಾ​ಯಿತು.

ರಾಜ್ಯ ಕಾರ‍್ಯನಿರತ ಪತ್ರ​ಕರ್ತರ ಸಂಘದ ಉಪಾ​ಧ್ಯಕ್ಷ ಮತ್ತೀ​ಕೆರೆ ಜಯರಾಂ ಅಧ್ಯ​ಕ್ಷತೆ ವಹಿ​ಸಿ​ದ್ದರು. ಮುಡಾ ಅಧ್ಯಕ್ಷ ಕೆ. ಶ್ರೀನಿ​ವಾಸ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾ​ಯಕ ನಿರ್ದೇಶಕ ಟಿ.ಕೆ. ಹರೀಶ್‌, ಪತ್ರ​ಕರ್ತರಾದ ಅಣ್ಣೂರು ಲಕ್ಷ್ಮಣ್‌, ಪಿ.ಜೆ. ಚೈತ​ನ್ಯ​ಕು​ಮಾರ್‌, ಕೆ.ಎನ್‌. ರವಿ, ಕೃಷ್ಣ ಸ್ವರ್ಣಸಂದ್ರ, ಸೋಮ​ಶೇ​ಖರ್‌ ಕೆರ​ಗೋಡು, ಲಿಂಗ​ರಾಜು ಇತ​ರರು ಸಮಾ​ರಂಭ​ದಲ್ಲಿ ಭಾಗ​ವ​ಹಿ​ಸಿದ್ದರು.