Asianet Suvarna News Asianet Suvarna News

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕಾಗಿ ಸಹಿ ಸಂಗ್ರಹ

  • ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕಾಗಿ ಸಹಿ ಸಂಗ್ರಹ
  • ಶ್ರೀರಾಮ ಸೇನೆ ಸೇರಿ ಹಿಂದೂಪರ ಸಂಘಟನೆಗಳಿಂದ 1550 ಸಹಿ ಸಂಗ್ರಹ
  • ಆ. 26ರಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮನೆಯೆದರು ಧರಣಿ
Signature collection for Ganeshotsav at Eidgah ground hubballi rav
Author
Hubli, First Published Aug 23, 2022, 9:54 AM IST

ಹುಬ್ಬಳ್ಳಿ (ಆ.23) :ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡಲು ಆಗ್ರಹಿಸಿ ರಾಣಿಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ನೇತೃತ್ವದಲ್ಲಿ ಶ್ರೀರಾಮ ಸೇನೆ ಸೇರಿ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. 1550 ಸಹಿ ಸಂಗ್ರಹಿಸಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಿ, ಶೀಘ್ರ ನಿರ್ಣಯ ಪ್ರಕಟಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು.ಮುಂದಿನ ಮೂರು ದಿನಗಳ ಒಳಗಾಗಿ ಅನುಮತಿ ನೀಡಬೇಕು. ಇಲ್ಲದಿದ್ದರೆ ಆ. 26ರಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮನೆಯೆದರು ಧರಣಿ ಮಾಡುವುದಾಗಿ ಘೋಷಿಸಿದರು.

 

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೊಡಿ

ದುರ್ಗದ ಬೈಲಿನಲ್ಲಿ ಮೆರವಣಿಗೆ ಆರಂಭಿಸಿದ ಪ್ರತಿಭಟನಕಾರರು ದಾಜಿಬಾನ್‌ ಪೇಟೆ ಮೂಲಕ ಮಹಾನಗರ ಪಾಲಿಕೆಗೆ ಆಗಮಿಸಿದರು. ಮಾರ್ಗದಲ್ಲಿ ಅಂಗಡಿಕಾರರು, ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಿದರು. ಪಾಲಿಕೆ ಆವರಣದಲ್ಲಿ ಗಣಪತಿ ಭಜನೆ ಮಾಡಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಗಣಪತಿ ಮುಖವಾಡ ಧರಿಸಿದ ವ್ಯಕ್ತಿ ಆಚರಣೆಗೆ ಅವಕಾಶ ನೀಡುವಂತೆ ಕೋರುವ ಅಣಕು ಪ್ರದರ್ಶನ ಮಾಡಿದರು.

ನಗರದ ದುರ್ಗದ ಬೈಲಿ(Durgadabailu)ನಲ್ಲಿ ಮೆರವಣಿಗೆಗೆ ಚಾಲನೆ ನೀಡಿದ ಶ್ರೀರಾಮ ಸೇನೆ(Shriramasene) ಮುಖ್ಯಸ್ಥ ಪ್ರಮೋದ ಮುತಾಲಿಕ(Pramod Mutalik), ಈದ್ಗಾ ಮೈದಾನ ಪಾಲಿಕೆಗೆ ಸೇರಿದ ಆಸ್ತಿ. ಕಳೆದ ಆರು ವರ್ಷದಿಂದ ಅಲ್ಲಿ ಗಣೇಶೋತ್ಸವ ಆಚರಿಸಲು ಅರ್ಜಿ ಕೊಡುತ್ತಿದ್ದೇವೆ. ಪರವಾನಗಿ ಕೊಟ್ಟರೂ ಸರಿ, ಕೊಡದಿದ್ದರೂ ಸರಿ ಈ ಬಾರಿ ನಾವು ಅಲ್ಲಿ ಗಣೇಶೋತ್ಸವ ಮಾಡಿಯೆ ಮಾಡುತ್ತೇವೆ. ಅದು ನಮ್ಮ ಹಕ್ಕು ಎಂದರು.

ವರ್ಷಕ್ಕೆ ಎರಡು ಬಾರಿ ನಮಾಜ್‌ ಮಾಡಲು ಹೇಗೆ ಮುಸಲ್ಮಾನರಿಗೆ ಅನುಮತಿ ಕೊಡುತ್ತಾರೊ, ನಮಗೂ ಚತುರ್ಥಿಗೆ ಅವಕಾಶ ಕೊಡಬೇಕು. ಶಾಂತಿಗೆ ಭಂಗ ಬರದಂತೆ ಹಬ್ಬ ಆಚರಿಸುತ್ತೇವೆ. ಗಲಾಟೆ ಮಾಡಿದರೆ ಪೊಲೀಸರು ಕ್ರಮಕೈಗೊಳ್ಳಲಿ. ಈ ಭಾಗದ ಜನಪ್ರತಿನಿಧಿಗಳು, ಕಮಿಷನರ್‌ ತಮ್ಮ ಸ್ಪಷ್ಟನಿರ್ಧಾರವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಉತ್ಸವ ಸಮಿತಿ ಸಂಚಾಲಕ ಹನುಮಂತಸಾ ನಿರಂಜನ, ಪಾಲಿಕೆ ಆಯುಕ್ತರು ಇತರೆ ಇಲಾಖೆಗಳ ಪರವಾನಗಿ ಪಡೆಯಬೇಕು ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪಾಲಿಕೆ ಗಣೇಶೋತ್ಸವ ಆಚರಣೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಅಭಿಪ್ರಾಯ ಹೇಳದೆ ಸ್ಪಷ್ಟನಿರ್ಧಾರ ಪ್ರಕಟಿಸಬೇಕು. ಗಣೇಶೋತ್ಸವಕ್ಕೆ ಅನುಮತಿ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ವಿವಿಧ ಇಲಾಖೆಗಳ ಪರವಾನಗಿ ಬೇಕಾಗುತ್ತದೆ. ಎಲ್ಲರಿಗೂ ಒಳಿತಾಗುವಂತಹ ತೀರ್ಮಾನವನ್ನು ಕೈಗೊಳ್ಳಲಾಗುವುದು. ಸಭೆ ಕರೆದು ಮೇಲಧಿಕಾರಿಗಳ ಗಮನಕ್ಕೂ ಈ ವಿಚಾರ ತಂದು ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇವೆ ಎಂದರು.

Idgah Maidan Row: ಗಣೇಶೋತ್ಸವ ಆಚರಣೆಗೆ ಹಿಂದೂ ಸಂಘಟನೆಗಳು ಪಟ್ಟು

ಪ್ರತಿಭಟನೆಯಲ್ಲಿ ಅಣ್ಣಪ್ಪ ದೀವಟಗಿ, ಪರಶುರಾಮ ಕೊಟಗಿ, ರಾಜಶ್ರೀ ಜಡಿ, ಯಶೋಧಾ ತಾಂಬೆ, ವಿಶ್ವನಾಥ ಕುಲಕರ್ಣಿ, ರಾಘವೇಂದ್ರ ಕಟಾರೆ, ಸಾಗರ ಪವಾರ, ರಾಜು ಪಾಚಂಗೆ, ಚಿದಾನಂದ ಗುಮ್ಮಗೋಳ ಸೇರಿ ಹಲವರಿದ್ದರು.

Follow Us:
Download App:
  • android
  • ios