ಸಿಗಂದೂರು ಪ್ರವಾಸಿಗರಿಗೆ 2 ತಿಂಗಳು ನಿಷೇಧ..?
ಸಿಗಂದೂರು ದೇಗುಲಕ್ಕೆ ಇನ್ನೂ ಎರಡು ತಿಂಗಳು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ... ದೇಶದಲ್ಲಿ ಮಹಾಮಾರಿ ಅಟ್ಟಹಾಸ ಇದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸಾಗರ (ಸೆ.03): ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಿಗಂದೂರು ಕ್ಷೇತ್ರ ದರ್ಶನಕ್ಕೆ ಬರುವ ಪ್ರವಾಸಿಗರಿಗೆ ಎರಡು ತಿಂಗಳು ನಿಷೇಧ ಹೇರಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬೇರೆಬೇರೆ ಭಾಗಗಳಿಂದ ಸಿಗಂದೂರು ದೇವಿ ದರ್ಶನಕ್ಕೆ ಪ್ರವಾಸಿಗರು ಬರುತ್ತಿದ್ದಾರೆ. ಬರುವ ಪ್ರವಾಸಿಗರಿಂದ ಕೊರೋನಾ ಗ್ರಾಮಾಂತರ ಪ್ರದೇಶಗಳಿಗೂ ಹಬ್ಬುವ ಸಾಧ್ಯತೆ ಇದ್ದು, ಸಿಗಂದೂರು ದೇವಿ ದರ್ಶನಕ್ಕೆ ಬರುವ ಪ್ರವಾಸಿಗರಿಗೆ ನಿಷೇಧ ಹೇರದೆ ಹೋದಲ್ಲಿ ಮುಂದೆ ಭೀಕರ ರೋಗಭೀತಿ ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹರಡಿಲ್ಲ. ಆದರೆ ಸಿಗಂದೂರಿಗೆ ಬರುವ ಭಕ್ತರು ಅಲ್ಲಿನ ಪ್ರವಾಸಿ ವಾಹನದ ಮೂಲಕ ದೇವಸ್ಥಾನಕ್ಕೆ, ಅಲ್ಲಿನ ಹೋಟೆಲ್, ಅಂಗಡಿಗೆ ಹೋಗುತ್ತಾರೆ. ಅಲ್ಲಿಂದ ಸೋಂಕು ಹರಡುವ ಸಾಧ್ಯತೆ ಇದೆ. ಸರ್ಕಾರ, ಉಸ್ತುವಾರಿ ಸಚಿವರು, ಶಾಸಕರು, ಸ್ಥಳೀಯ ಆಡಳಿತ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಜರಾಯಿ ವಶಕ್ಕೆ ಸಿಗಂದೂರು ದೇವಸ್ಥಾನ: ಆಗ್ರಹ ...
ಪ್ರಗತಿಪರ ಒಕ್ಕೂಟದ ಎಚ್.ಬಿ.ರಾಘವೇಂದ್ರ ಮಾತನಾಡಿ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸಿಗಂದೂರು ಕ್ಷೇತ್ರ ಹಾಗೂ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಬರುವ ಪ್ರವಾಸಿಗರಿಗೆ ನಿಯಂತ್ರಣ ಹೇರದೆ ಹೋದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಕೊರೋನಾ ಹರಡುವ ಸಾಧ್ಯತೆ ಇದೆ. ಈಗಾಗಲೇ ಸಿಗಂದೂರು ಸೇತುವೆ ನಿರ್ಮಿಸುತ್ತಿರುವ ಹತ್ತಾರು ಕಾರ್ಮಿಕರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂದರು.
ಸಿಗಂದೂರಿಗೆ ಹೋಗುವಾಗ ಸಾಗರ ಪಟ್ಟಣ ಬಳಸಿ ಹೋಗಬೇಕು. ಸಾಗರಕ್ಕೆ ಬರುವ ಪ್ರವಾಸಿಗರು ಇಲ್ಲಿನ ಹೋಟೆಲ್, ಲಾಡ್ಜ್ ಇನ್ನಿತರೆ ಕಡೆ ಉಳಿದುಕೊಳ್ಳುತ್ತಿದ್ದಾರೆ. ಈಗಾಗಲೆ ಸಾಗರ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಶಾಸಕರು ಗಂಭೀರವಾಗಿ ಪರಿಗಣಿಸಿ, ಪ್ರವಾಸಿಗರಿಗೆ ನಿಷೇದ ಹೇರುವ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಎ.ಎ.ಶೇಟ್ ಇತರರು ಇದ್ದರು.