'ಸಿಗಂದೂರು ದೇವಾಲಯವನ್ನು ಮುಜರಾಯಿಗೆ ಬಿಡುವುದಿಲ್ಲ'
- ಸಮಾಜದೊಳಗಿನ ಸಂಕುಚಿತ ಮನೋಭಾವ ಹಾಗೂ ದೂರದರ್ಶಿತ್ವದ ಕೊರತೆಯಿಂದ ಸಮಾಜದ 26 ಪಂಗಡಗಳು ಚದುರಿಹೋಗಿವೆ
- ಎಲ್ಲರನ್ನು ಒಂದುಗೂಡಿಸುವ ಸವಾಲು ಶ್ರೀ ಮಠದ ಮುಂದಿದೆ
- ರಾಮನಗರ ಸೋಲೂರು ಈಡಿಗ ಮಹಾ ಸಂಸ್ಥಾನದ ನಿಯೋಜಿತ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ
ಶಿವಮೊಗ್ಗ (ಆ.02): ಸಮಾಜದೊಳಗಿನ ಸಂಕುಚಿತ ಮನೋಭಾವ ಹಾಗೂ ದೂರದರ್ಶಿತ್ವದ ಕೊರತೆಯಿಂದ ಸಮಾಜದ 26 ಪಂಗಡಗಳು ಚದುರಿಹೋಗಿವೆ. ಈ ಎಲ್ಲರನ್ನು ಒಂದುಗೂಡಿಸುವ ಸವಾಲು ಶ್ರೀ ಮಠದ ಮುಂದಿದೆ ಎಂದು ರಾಮನಗರ ಸೋಲೂರು ಈಡಿಗ ಮಹಾ ಸಂಸ್ಥಾನದ ನಿಯೋಜಿತ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ನುಡಿದರು.
ಇಲ್ಲಿನ ಈಡಿಗ ಭವನದಲ್ಲಿ ಭಾನುವಾರ ಜಿಲ್ಲಾ ಅರ್ಯ ಈಡಿಗರ ಸಂಘದಿಂದ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು. ನಾರಾಯಣ ಗುರುಗಳ ಆದರ್ಶಗಳ ಅಡಿಪಾಯದ ಮೇಲೆ ಯಾವುದೇ ಸಂಘರ್ಷವಿಲ್ಲದೆ ರಾಜ್ಯದಲ್ಲಿ ಈಡಿಗ ಸಮುದಾಯವನ್ನು ಸಂಘಟಿಸುವ ಸಂಕಲ್ಪ ಮಾಡಿದ್ದೇನೆ ಎಂದರು.
ಸಿಗಂದೂರು ವಿವಾದಿತ ಭೂಮಿ ಸರ್ಕಾರದ ವಶಕ್ಕೆ
ಈಡಿಗ ಸಂಸ್ಥಾನ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಉದ್ದೇಶದಿಂದ ಸಮುದಾಯದ ಮಾಹಿತಿ ಒಳಗೊಂಡ ಸಾಫ್ಟ್‌ವೇರ್ ಸಿದ್ಧಪಡಿಸಿದೆ. ವಿದ್ಯೆ, ಸೂರು , ಆರೋಗ್ಯ, ಉದ್ಯೋಗವನ್ನೇ ಆದ್ಯತೆಯಾಗಿ ಇಟ್ಟುಕೊಂಡು ಸಮುದಾಯದ ಮುಂದೆ ಮಠ ಹೋಗಲಿದೆ ಎಂದರು.
ಸಿಗಂದೂರು ದೇಗುಲಕ್ಕೂ ಪರಿಹಾರ ಇದೆ. ಸಿಗಂದೂರು ದೇವಾಲಯವನ್ನು ಯಾವುದೇ ಕಾರಣಕ್ಕೂ ಸರ್ಕಾರ ಮುಜರಾಯಿ ಇಲಾಖೆಗೆ ಸೇರಿಸಲು ಬಿಡುವುದಿಲ್ಲ. ಇದಕ್ಕೂ ಒಂದು ಪರಿಹಾರ ಸೂತ್ರವನ್ನು ಕಂಡುಕೊಳ್ಳಲಾಗುವುದು. ಸಮುದಾಯದ ಧಾರ್ಮಿಕ ಕೇಂದ್ರದ ಬಗ್ಗೆ ಈಡಿಗ ಸಮುದಾಯಕ್ಕಿರುವ ನಂಬಿಕೆಗೆ ಸರ್ಕಾರ ಗೌರವ ಕೊಡಬೇಕಾಗುತ್ತದೆ ಎಂದರು.
ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿಗಳಾದ ಡಾ. ರಾಮಪ್ಪ ಮಾತನಾಡಿ ಈಡಿಗ ಸಮುದಾಯಕ್ಕೆ ಗುರುಪೀಠ ಮತ್ತು ಸ್ವಾಮೀಜಿ ಬಂದಿರುವುದು ಒಳ್ಳೆ ಬೆಳವಣಿಗೆ ಎಂದರು. ಸಿಗಂದೂರು ದೇವಾಲಯ ಸಮಾಜದ ಅಸ್ತಿ ಅದನ್ನು ರಕ್ಷಿಸಿ ಪೋಷಿಸುವ ಜವಾಬ್ದಾರಿ ಸಮಾಜಕ್ಕಿದೆ. ದೇಗುಲದಿಂದ ಜಾತ್ಯಾತೀತ ಸಮಾಜ ಮುಖಿ ಕೆಲಸ ಮಾಡಲಾಗಿದೆ ಎಂದರು.
ಬೇಳೂರು ಗೋಪಾಲಕೃಷ್ಣ ಮಾತನಾಡಿ ಪಕ್ಷ ಯಾವುದೇ ಇರಲಿ ನಮ್ಮ ಸಮಾಜದ ದೃಷ್ಟಿಯಿಂದ ನಾವೆಲ್ಲಾ ಒಂದಾಗಬೇಕು ಎಂದರು.