Asianet Suvarna News Asianet Suvarna News

Mandya : ಇಂದಿನಿಂದ ಸಿಡಿ ಹಬ್ಬಕ್ಕೆ ಅದ್ಧೂರಿ ಚಾಲನೆ

ಭಾವೈಕ್ಯತೆಯ ಸಂಕೇತವಾಗಿ ನೂರಾರು ವರ್ಷಗಳಿಂದಲೂ ಮಳವಳ್ಳಿ ಪಟ್ಟಣದಲ್ಲಿ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧಿ ಪಡೆದಿರುವ ಸಿಡಿ ಹಬ್ಬಕ್ಕೆ ಜ.31ರಂದು ನಡೆಯಲಿರುವ ಶ್ರೀದಂಡಿನಮಾರಮ್ಮ ಹಬ್ಬದೊಂದಿಗೆ ಚಾಲನೆ ಸಿಗಲಿದ್ದು, ಶ್ರೀಪಟ್ಟಲದಮ್ಮ ಸಿಡಿಹಬ್ಬವು ಫೆ.3 ಮತ್ತು 4 ರಂದು ಭಕ್ತಿಪ್ರಧಾನವಾಗಿ ನಡೆಯಲಿದೆ.

Sidi Festival in Mandya snr
Author
First Published Jan 31, 2023, 6:57 AM IST

 ಸಿ.ಸಿದ್ದರಾಜು ಮಾದಹಳ್ಳಿ

 ಮಳವಳ್ಳಿ :  ಭಾವೈಕ್ಯತೆಯ ಸಂಕೇತವಾಗಿ ನೂರಾರು ವರ್ಷಗಳಿಂದಲೂ ಮಳವಳ್ಳಿ ಪಟ್ಟಣದಲ್ಲಿ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧಿ ಪಡೆದಿರುವ ಸಿಡಿ ಹಬ್ಬಕ್ಕೆ ಜ.31ರಂದು ನಡೆಯಲಿರುವ ಶ್ರೀದಂಡಿನಮಾರಮ್ಮ ಹಬ್ಬದೊಂದಿಗೆ ಚಾಲನೆ ಸಿಗಲಿದ್ದು, ಶ್ರೀಪಟ್ಟಲದಮ್ಮ ಸಿಡಿಹಬ್ಬವು ಫೆ.3 ಮತ್ತು 4 ರಂದು ಭಕ್ತಿಪ್ರಧಾನವಾಗಿ ನಡೆಯಲಿದೆ.

ಎಲ್ಲಾ ಕೋಮಿನ ಜನರು ಒಂದೊಂದು ಜವಾಬ್ದಾರಿಯೊಂದಿಗೆ ಆಚರಿಸುವ ಸಿಡಿ ಹಬ್ಬ ಎಂದರೆ ಮಳವಳ್ಳಿ ಸೇರಿದಂತೆ ಸುತ್ತಮುತ್ತಲ ಜನರಿಗೆ ಎಲ್ಲಿಲ್ಲದ ಸಂಭ್ರಮ, ಶ್ರೀದಂಡಿನ ಮಾರಮ್ಮ, ಶ್ರೀಪಟ್ಟಲದಮ್ಮ ದೇವರ ಮೇಲೆ ಅಪಾರವಾದ ಭಕ್ತಿ. ಸಿಡಿ ಹಬ್ಬ ತನ್ನದೇ ಆದ ಇತಿಹಾಸ ಮತ್ತು ಪರಂಪರೆ ಒಳಗೊಂಡಿದ್ದು, ಅದರ ಮಿತಿಯಲ್ಲಿಯೇ ಇಂದಿಗೂ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವುದು ವಿಶೇಷ.

ಸಿಡಿ ಹಬ್ಬದಲ್ಲಿ ವಿಶೇಷವಾಗಿ ಪೂಜಿಸಲ್ಪಡುವ ಶ್ರೀದಂಡಿನ ಮಾರಮ್ಮ ಮತ್ತು ಶ್ರೀಪಟ್ಟಲದಮ್ಮ ಅಕ್ಕ-ತಂಗಿಯರಾಗಿದ್ದು, ಪ್ರಥಮವಾಗಿ ಅಕ್ಕ ಶ್ರೀದಂಡಿನ ಮಾರಮ್ಮ ಹಬ್ಬವನ್ನು ಜ.31ರಂದು ಆಚರಿಸಿದರೆ ನಂತರ ಶ್ರೀಪಟ್ಟಲದಮ್ಮ ಸಿಡಿ ಹಬ್ಬ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

ದೇವಿ ನೆಲೆಗೊಂಡ ಹಿನ್ನೆಲೆ:

ಪಟ್ಟಣದಲ್ಲಿ ನೆಲೆಸಿರುವ ಶ್ರೀಪಟ್ಟಲದಮ್ಮ ಹಾಗೂ ಶ್ರೀದಂಡಿನ ಮಾರಮ್ಮ ಅಕ್ಕ-ತಂಗಿಯರು ಎಂದು ಹಿರಿಯರು ಹೇಳುತ್ತಾರೆ. ಇತಿಹಾಸದ ಪ್ರಕಾರ 300 ವರ್ಷಗಳ ಹಿಂದೆ ಮಳವಳ್ಳಿ ಪಟ್ಟಣದ ಪೇಟೆ ಬೀದಿವಾಸಿ ಮಂಚಟಪ್ಪನವರು ಶ್ರೀರಂಗಪಟ್ಣಣ ಸೇರಿದಂತೆ ಮತ್ತಿತ್ತರ ಕಡೆಗಳಿಗೆ ಹೋಗಿ ಅಡಿಕೆ ವ್ಯಾಪಾರ ಮಾಡಿಕೊಂಡು ಮಳವಳ್ಳಿಗೆ ಬರುತ್ತಿದ್ದಾಗ ಅಡಿಕೆ ಚೀಲದಲ್ಲಿ ಎರಡು ವಿಗ್ರಹಗಳು ಸಿಗುತ್ತವೆ. ಮಂಚಟಪ್ಪನವರ ಕನಸಿಗೆ ಬಂದು ತಮಗೆ ಗುಡಿ ಕಟ್ಟಿಪೂಜಿಸುವಂತೆ ಹೇಳಿದಂತಾಗುತ್ತದೆ. ಅದರಂತೆ ದೇವಸ್ಥಾನ ನಿರ್ಮಾಣ ಮಾಡಿಸಿ ಅಡಿಕೆ ಚೀಲದಲ್ಲಿ ಸಿಕ್ಕ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಅಂದಿನಿಂದ ಇಲ್ಲಿಯವರೆವಿಗೂ ಈ ದೇವತೆಗಳಿಗೆ ಮಂಚಟಪ್ಪನವರ ಕುಟುಂಬದಿಂದಲೇ ಹಬ್ಬದಲ್ಲಿ ಪ್ರಥಮ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ.

ಶ್ರೀದಂಡಿನ ಮಾರಮ್ಮನ ಹಬ್ಬದ ಹಿನ್ನೆಲೆ

ನೂರಾರು ವರ್ಷಗಳ ಹಿಂದಿನ ರಾಜರ ಆಳ್ವಿಕೆ ಕಾಲದಲ್ಲಿ ವಿವಿಧ ಪ್ರದೇಶಗಳಿಗೆ ಹೋಗಲು ಮಳವಳ್ಳಿ ಮುಖ್ಯ ಕೇಂದ್ರವಾಗಿದ್ದರಿಂದ ಬೇರೆ ಪ್ರಾಂತ್ಯದ ಸೈನಿಕರ ದಾಳಿ ಆಗಿಂದ್ದಾಗ್ಗೆ ನಡೆಯುತ್ತಿತ್ತು. ಸೈನಿಕರ ಉಪಟಳವನ್ನು ತಾಳಲಾರದೇ ಇಲ್ಲಿನ ಜನರು ಶ್ರೀದಂಡಿನ ಮಾರಮ್ಮ ದೇವಿಗೆ ರಕ್ಷಿಸುವಂತೆ ಮೊರೆ ಹೋದ ಹಿನ್ನೆಲೆಯಲ್ಲಿ ಮಳವಳ್ಳಿಯ ಹೊರಭಾಗದಲ್ಲಿ ನೆಲೆಗೊಂಡು ದಂಡೆತ್ತಿ ಬಂದ ಸೈನಿಕರಿಗೆ ವಾಂತಿ-ಬೇಧಿ ಕೊಟ್ಟು ವಾಸಪ್‌ ಹೋಗುವಂತೆ ಮಾಡಿದ್ದಾಳೆ. ದಂಡೆತ್ತಿ ಬಂದವರಿಂದ ರಕ್ಷಣೆ ಮಾಡಿದ ಶ್ರೀದಂಡಿನ ಮಾರಮ್ಮ ದೇವಿಗೆ ಅಂದಿನಿಂದಲೂ ಪೂಜೆ ಸಲ್ಲಿಸಲಾಗುತ್ತಿದೆ.

ಹಬ್ಬದ ವಿಶೇಷ

ಹೊಸ ವಸ್ತ್ರ ತೊಟ್ಟಮಹಿಳೆಯರು ಕುಟುಂಬ ಜೊತೆಗೂಡಿ ತಂಬಿಟ್ಟಿನ ಆರತಿಯೊಂದಿಗೆ ಶ್ರೀದಂಡಿನ ಮಾರಮ್ಮ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಹರಕೆ ಕೋಳಿಯನ್ನು ದೇವಿಗೆ ಒಪ್ಪಿಸಿ ಪೂಜಿಸುವುದು ವಾಡಿಕೆಯಾಗಿದೆ. ಒಂದು ದಿನ ನಡೆಯುವ ಹಬ್ಬಕ್ಕೆ 20 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ.

ಸಿಡಿಹಬ್ಬ

ಶ್ರೀದಂಡಿನ ಮಾರಮ್ಮ ದೇವಿ ಹಬ್ಬದ ಐದು ದಿನಗಳ ನಂತರ ಆಚರಿಸುವ ಫೆ.3ಮತ್ತು 4ರಂದು ನಡೆಯಲಿರುವ ಸಿಡಿ ಹಬ್ಬಕ್ಕೆ ಸರ್ವ ಜನಾಂಗವು ತಮ್ಮದೇ ಆದ ಜವಾಬ್ದಾರಿ ನಿರ್ವಹಿಸಿ ಸಿಡಿ ಹಬ್ಬದ ಯಶಸ್ಸಿಗೆ ಶ್ರಮಿಸುತ್ತಾರೆ. ಊರನ್ನು ರಕ್ಷಿಸಲು ಶ್ರೀದಂಡಿನ ಮಾರಮ್ಮ ಹಾಗೂ ಶ್ರೀಪಟ್ಟಲದಮ್ಮ ದೇವತೆಗಳು ಸಿಡಿರಣ್ಣನಿಗೆ ತಮ್ಮ ದೈವ ಶಕ್ತಿಯನ್ನು ನೀಡಿದ್ದರು ಎಂಬ ಪ್ರತೀತಿ ಇದ್ದು, ಅದರಂತೆ ಈ ಹಬ್ಬವನ್ನು ಸಿಡಿ ಹಬ್ಬವೆಂದು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಎಲ್ಲಾ ಕೋಮಿನವರಿಗೂ ಜವಾಬ್ದಾರಿ

ಕೋಟೆ ಪಟೇಲ್‌ ಚಿಣ್ಣೇಗೌಡರ ಮನೆಯ ಮುಂದೆ ಸಿಡಿಯನ್ನು ಕಟ್ಟಲಾಗುತ್ತದೆ. ಸಿಡಿಕಟ್ಟುವ ಎಲ್ಲಾ ಸಾಮಗ್ರಿಗಳನ್ನು ಒಂದೊಂದು ಸಮುದಾಯದವರು ತಂದು ಕೊಡುತ್ತಾರೆ. ಸಿದ್ಧಾರ್ಥ ನಗರದವರು ಸಿಡಿ ಎಳೆಯಲು ಹಗ್ಗ ನೀಡುತ್ತಾರೆ, ಕೋಟೆ ಬೀದಿಯವರು ಪಟ್ಟಣಾದ್ಯಂತ ಸಿಡಿ ಬಂಡಿಯನ್ನು ಎಳೆದುಕೊಂಡು ಬರುತ್ತಾರೆ, ಗಂಗಾಮತಸ್ಥ ಬೀದಿಯ ಶ್ರೀಪಟ್ಟಲದಮ್ಮ ದೇವಸ್ಥಾನದಲ್ಲಿ ಸಿಡಿರಣ್ಣನ ಗೊಂಬೆಯನ್ನ ತಂದು ಸಿಡಿ ಮರಕ್ಕೆ ಕಟ್ಟುತ್ತಾರೆ.

ಫೆ.3ರಂದು ಮಧ್ಯರಾತ್ರಿ 12ರ ಸಮಯಲ್ಲಿ ಪೂಜೆ ಸಲ್ಲಿಸಿ ಸಿಡಿ ಎಳೆಯುವುದಕ್ಕೆ ಚಾಲನೆ ನೀಡಲಾಗುತ್ತದೆ. ಶಾರ್ಗಪಾಣಿ ಬೀದಿ, ಕೋಟೆ ಬೀದಿ, ಮೈಸೂರು ರಸ್ತೆ ಮುಖಾಂತರ ಪೇಟೆ ಬೀದಿ, ಗಂಗಾಮತ ಬೀದಿ ಸುತ್ತಿ ಅನಂತರಾಮ್‌ ಸರ್ಕಲ್‌ಗೆ ಬಂದು ಸುಲ್ತಾನ್‌ ರಸ್ತೆಯಲ್ಲಿ ಇರುವ ಪಟ್ಟಲದಮ್ಮ ದೇವಾಲಯಕ್ಕೆ ಸಾಗಿ ಮೂರು ಸುತ್ತು ಸುತ್ತಿದ ನಂತರ ಸಿಡಿಯನ್ನು ಅಂತಿಮಗೊಳಿಸಲಾಗುತ್ತದೆ. ನವ ದಂಪತಿಗಳು ಸೇರಿದಂತೆ ಸಿಡಿಹಬ್ಬಕ್ಕೆ ಆಗಮಿಸುವ ಲಕ್ಷಾಂತರ ಮಂದಿ ಹಣ್ಣು-ಜವನ ಎಸೆದು ಪೂಜೆ ಸಲ್ಲಿಸುವರು.

ಸಿಡಿ ಹಬ್ಬಕ್ಕೆ ಸಿಡಿರಣ್ಣ ತಯಾರಿ:

ಫೆ.3ರಂದು ಸಿಡಿ ಹಬ್ಬದಲ್ಲಿ ರಾತ್ರಿ ಪೂರ್ತಿ ಸಿಡಿ ಎಳೆಯುವುದೇ ಹಬ್ಬದ ವಿಶೇಷ. ಸಿಡಿರಣ್ಣವನ್ನು ಸುಮಾರು 46 ಅಡಿ ಉದ್ದವಿರುವ ಒಂದೇ ತಾವಸದ ಮರದಿಂದ ಮಾಡಿದ್ದು, ಹಿಂದಿನ ಕಾಲದಲ್ಲಿ ಹರಕೆ ಹೊತ್ತವರು ಸಿಡಿರಣ್ಣಕ್ಕೆ ವ್ಯಕ್ತಿಯ ಬೆನ್ನಿಗೆ ಕಬ್ಬಿಣದ ಕೊಂಡಿಯನ್ನು ಹಾಕಿ ಸಿಡಿ ಹಾರಿಸಲಾಗುತ್ತಿದ್ದ ಸಂದರ್ಭದಲ್ಲಿ ಕೊಂಡಿ ಕಳಚಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮನುಷ್ಯರನ್ನು ಕಟ್ಟುವುದನ್ನು ನಿಲ್ಲಿಸಿ ತಾಮ್ರದಲ್ಲಿ ಮನುಷ್ಯನಾಕೃತಿಯಲ್ಲಿ ಮಾಡಿರುವ ಸಿಡಿರಣ್ಣನನ್ನು ಕಟ್ಟಿಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪಟ್ಣಣದಲ್ಲಿರುವ ಪ್ರತಿಯೊಂದು ಸಮುದಾಯದ ಮಹಿಳೆಯರು ಹೊಸ ವಸ್ತ್ರವನ್ನು ತೊಟ್ಟು ಘಟ್ಟವನ್ನು ಹೊತ್ತು ಶ್ರೀಪಟ್ಟಲದಮ್ಮ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ

ಕೊಂಡ ಹಾಯುವಿಕೆ:

ಫೆ.4ರಂದು ನಡೆಯಲಿರುವ ಕೊಂಡಕ್ಕೆ ತಾಲೂಕಿನ ತಮ್ಮಡಹಳ್ಳಿ ಸೇರಿದಂತೆ ವಿವಿಧ ಗ್ರಾಮದ ರೈತರು ತಮ್ಮ ರಾಸುಗಳಿಗೆ ಹೂವಿನಿಂದ ಆಲಂಕರಿಸಿಕೊಂಡು ಸೌದೆ ಮೆರವಣಿಗೆ ಮೂಲಕ ಶ್ರೀಪಟ್ಟಲದಮ್ಮ ದೇವಸ್ಥಾನಕ್ಕೆ ತರುತ್ತಾರೆ. ಶ್ರೀಪಟ್ಟಲದಮ್ಮ ದೇವಸ್ಥಾನದ ಉಸ್ತುವಾರಿ ಸಮಿತಿ ಕೊಂಡ ಹಾಯಲು ಆಗತ್ಯ ಕ್ರಮ ಕೈಗೊಳ್ಳುತ್ತಾರೆ. ಗಂಗಮತಸ್ಥ ಬೀದಿಯ ಅಡ್ಡೆನಿಂಗಯ್ಯನ ಕೇರಿಯ ನಿವಾಸಿಗಳು ಉಪವಾಸ ಮಾಡಿಕೊಂಡು ಮೊದಲು ಕೊಂಡ ಹಾಯುತ್ತಾರೆ. ನಂತರ ಹರಕೆಹೊತ್ತ ಹಲವಾರು ಮಂದಿ ಕೊಂಡ ಹಾಯುವುದರ ಮೂಲಕ ಹರಕೆ ತೀರಿಸುತ್ತಾರೆ.

ವರ್ಣಮಯ ವಿದ್ಯುತ್‌ ದೀಪಾಲಾಂಕಾರ

ಪ್ರಸಕ್ತ ಸಿಡಿಹಬ್ಬವು ವಿಧಾನಸಭಾ ಚುನಾವಣಾ ವರ್ಷದಲ್ಲಿ ನಡೆಯುತ್ತಿರುವುದರಿಂದ ಪಟ್ಟಣವನ್ನು ವಿವಿಧ ಬಣ್ಣದ ವಿದ್ಯುತ್‌ ದೀಪಗಳಿಂದ ಮಧುವನಗಿತ್ತಿಯಂತೆ ಶೃಂಗರಿಸಲಾಗುತ್ತಿದೆ. ಹಬ್ಬಕ್ಕೆ ಬೇಕಾದ ಕುಡಿಯುವ ನೀರು, ಪಾರ್ಕಿಂಗ್‌, ತಾತ್ಕಾಲಿಕ ಶೌಚಾಲಯ ನಿರ್ಮಾಣ ಸೇರಿದಂತೆ ಹಲವಾರು ಕ್ರಮಗಳನ್ನು ಪುರಸಭೆ ಮತ್ತು ತಾಲೂಕು ಆಡಳಿತದಿಂದ ಕೈಗೊಳ್ಳಲಾಗಿದೆ.

ಇತಿಹಾಸ ಪ್ರಸಿದ್ಧಿ ಪಡೆದಿರುವ ಸಿಡಿಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಬಂದೋಬಸ್‌್ತ ಮಾಡಲಾಗುತ್ತದೆ. ರಾತ್ರಿಪೂರ್ತಿ ನಡೆಯುವ ಜಾತ್ರೆಯೂ ಶಾಂತಿಯುವವಾಗಿ ನಡೆಯಲು ಡಿವೈಎಸ್‌ಪಿ ನವೀನ್‌ಕುಮಾರ ಅವರ ಅಧ್ಯಕ್ಷತೆಯಲ್ಲಿ ಆಗತ್ಯ ಕ್ರಮ ಕೈಗೊಳ್ಳಲಾಗಿದೆ.

Follow Us:
Download App:
  • android
  • ios