ಹುಬ್ಬಳ್ಳಿ(ಫೆ.16): ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಮಧ್ಯಸ್ಥಿಕೆಯಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಮತ್ತೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಸಿದ್ದು ತೇಜಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಮಹದಾಯಿ, ಕಳಸಾ- ಬಂಡೂರಿ ಯೋಜನೆಗಾಗಿ ನಿರಂತರ ಹೋರಾಟ ಮಾಡಲಾಗುತ್ತಿದೆ. ಪ್ರಧಾನ ಮಂತ್ರಿಗಳು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಂತರ ಟ್ರಿಬ್ಯುನಲ್‌ನಲ್ಲಿ 13.5 ಟಿಎಂಸಿ ನೀರು ಕೊಡಲು ಆದೇಶವಾಗಿತ್ತು. ಆದೇಶದ ನಂತರ ಕೇಂದ್ರ ಸರ್ಕಾರ ನೋಟಿಫಿಕೇಶನ್‌ ಹೊರಡಿಸಿ ಮಹದಾಯಿ ಸಮಸ್ಯೆ ಬಗೆಹರಿಸಬಹುದಿತ್ತು ಎಂದರು.

ರಾಜ್ಯದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೋವಾ ಸಚಿವರು ಮಹದಾಯಿ ವಿಚಾರದಲ್ಲಿ ಇತ್ಯರ್ಥಗೊಳಿಸಿ ಕೊಳ್ಳಲು ಪತ್ರ ಬಂದಿದೆ ಎಂದು ಹುಬ್ಬಳ್ಳಿಯಲ್ಲಿ ಓದಿದ್ದರು. ಇಷ್ಟೆಲ್ಲಾ ಜನರನ್ನು ನಂಬಿಸಿದ ಬಿಜೆಪಿಯೇ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಆದರೂ ಮಹದಾಯಿ ವಿಚಾರವಾಗಿ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸುವುದನ್ನು ಬಿಟ್ಟು ಬಿಜೆಪಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬಹುದಿತ್ತು. ಅದನ್ನು ಬಿಟ್ಟು ಇದೀಗ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲು ಬರುವುದಿಲ್ಲ ಎಂದು ತಿಳಿಸಿದ್ದು, ಇದು ಮತ್ತೆ ಕಳಸಾ ಬಂಡೂರಿ ಹೋರಾಟಗಾರರಿಗೆ ನೋವುಂಟು ಮಾಡಿದೆ. ಕೂಡಲೇ ಸರ್ಕಾರ ಮುಂದಿನ 15 ದಿನಗಳಲ್ಲಿ ಕೇಂದ್ರದ ಮಧ್ಯಸ್ಥಿಕೆಯಲ್ಲಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಸಮಿತಿಯ ಬಾಬಾಜಾನ ಮುಧೋಳ, ಬಿ.ಎ. ಮುದೋಳ, ಎನ್‌.ಎ. ಖಾಜಿ ಸೇರಿದಂತೆ ಮುಂತಾದವರು ಗೋಷ್ಠಿಯಲ್ಲಿದ್ದರು.