ಹುಬ್ಬಳ್ಳಿ(ನ.20): ದಶಕದ ಕನಸಾಗಿದ್ದ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರಿಡಲು ಅಧಿಕೃತ ಮುದ್ರೆ ಒತ್ತಿದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಏನೇನು ಮಾಡಬೇಕು. ಏನು ಮಾಡಿದರೆ ಆರೂಢರ ತತ್ವಾದರ್ಶ ಪ್ರಚಾರವಾಗಲು ಸಾಧ್ಯ ಎಂಬ ಚಿಂತನೆ ಇದೀಗ ಮಠದ ಭಕ್ತರು ಹಾಗೂ ಟ್ರಸ್ಟ್‌ ಕಮಿಟಿಯಲ್ಲಿ ನಡೆದಿದೆ. ಈ ಸಂಬಂಧ ಇನ್ನೆರಡು ದಿನಗಳಲ್ಲಿ ನೈಋುತ್ಯ ರೈಲ್ವೆ ಮಹಾಪ್ರಬಂಧಕರಿಗೆ ನಿಯೋಗವೊಂದು ಲಿಖಿತ ಮನವಿ ಸಲ್ಲಿಸಲಿದೆ.

ಶೀಘ್ರದಲ್ಲೇ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಮರುನಾಮಕರಣ ಆಗಲಿದೆ. ಇದರೊಂದಿಗೆ ಮಠದ ಸಾಹಿತ್ಯ, ಸಿದ್ಧಾರೂಢರ ತತ್ವಾದರ್ಶದ ಸಾಹಿತ್ಯ ಕೃತಿ, ಆರೂಢರ ಕಥಾಮೃತ (ಕನ್ನಡ, ಮರಾಠಿ, ಇಂಗ್ಲಿಷ್‌, ಹಿಂದಿ) ಸೇರಿದಂತೆ ಮಠದ ಎಲ್ಲ ಬಗೆಯ ಸಾಹಿತ್ಯ ಪ್ರಕಟಣೆಗಳು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಿಗುವಂತಾಗಬೇಕು. ಅದಕ್ಕಾಗಿ ನಿಲ್ದಾಣದಲ್ಲೊಂದು ಮಳಿಗೆ ತೆರೆಯುವುದು. ಅದರಲ್ಲೇ ಸಿದ್ಧಾರೂಢರ ಪ್ರಸಾದ ಸಿಗುವ ವ್ಯವಸ್ಥೆ ಮಾಡಬೇಕು.

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ದಾರೂಢರ ಹೆಸರು ಅಧಿಕೃತ

ರೈಲ್ವೆ ಮುಂಗಡ ಟಿಕೆಟ್‌ಗಳಲ್ಲಿ ಸಿದ್ಧಾರೂಢ ಮಠ ಹಾಗೂ ಆರೂಢರ ಭಾವಚಿತ್ರ ಸೇಡಿಂಗ್‌ ರೂಪದಲ್ಲಿ ಮುದ್ರಣವಾಗಬೇಕು. ನಿಲ್ದಾಣದ ಎದುರು ಸಿದ್ಧಾರೂಢರ ಅಮೃತಶಿಲೆಯ ಪುತ್ಥಳಿ ಸ್ಥಾಪಿಸಬೇಕು. ಜೊತೆಗೆ ನಿಲ್ದಾಣದ ಹೊರಭಾಗದಲ್ಲಿ ಇಡೀ ಹುಬ್ಬಳ್ಳಿಗೆ ಕಾಣುವಂತೆ ದೊಡ್ಡ ನಾಮಫಲಕ (ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಸ್ವಾಗತ) ರುವ ಬೃಹತ್‌ ಮಹಾದ್ವಾರ ನಿರ್ಮಿಸಬೇಕು ಎಂಬುದು ಮಠದ ಟ್ರಸ್ಟ್‌ ಕಮಿಟಿ ಆಶಯ.

ನಿಯೋಗ:

ಈ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕರು ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳನ್ನು ಮಠದ ನಿಯೋಗವನ್ನು ತೆರಳಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಶೀಘ್ರವೇ ಈ ಬಗ್ಗೆ ಇನ್ನೊಮ್ಮೆ ಚರ್ಚಿಸಿ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಟ್ರಸ್ಟ್‌ ಕಮಿಟಿ ಚೇರಮನ್‌ ಡಿ.ಡಿ. ಮಾಳಗಿ ತಿಳಿಸಿದ್ದಾರೆ.